ಚಿತ್ರದುರ್ಗ ಡಿ. 6
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಲೇ ಇಂದು ಪರಿಶಿಷ್ಟ ಜಾತಿ ಸಮುದಾಯ ರಾಜಕೀಯವಾಗಿ ಸ್ಥಾನ ಪಡೆದಿದೆ. ಅಂಬೇಡ್ಕರ್ ಇಲ್ಲದೆ ರಾಜಕೀಯದಲ್ಲಿ ಅವಕಾಶ ಸಿಗುತ್ತಿರಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯ್ಯಣ್ಣ ತಿಳಿಸಿದರು.

ಶನಿವಾರ ನಡೆದ 69ನೇ ಪರಿನಿಬ್ಬಾಣ ದಿನಾಚರಣೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬ ಅಭಿಪ್ರಾಯವನ್ನು ಅಂಬೇಡ್ಕರ್ ಅಂದೇ ಹೇಳಿದ್ದಾರೆ. ಇನ್ನೂ ಮೀಸಲಾತಿ ಸಿಗದ ಹಲವು ಜನಾಂಗಗಳು ಇದ್ದು, ಒಳಮೀಸಲಾತಿಯ ಹೋರಾಟ ಫಲ ನೀಡುವ ಸಮಯ ಬಂದಿದೆ ಎಂದು ಹೇಳಿದರು.
ಅಂಬೇಡ್ಕರ್ ಒಬ್ಬರಿಗೆ ಎರಡು ಮತದಾನದ ಕಲ್ಪನೆ ನೀಡಿದ್ದರೂ ವಿರೋಧದ್ದರಿಂದ ಒಂದೇ ಮತದಾನದ ಹಕ್ಕು ಜಾರಿಯಾಯಿತು ಎಂದು ಜಯ್ಯಣ್ಣ ವಿವರಿಸಿದರು. ಅಂಬೇಡ್ಕರ್ ಅವರ ಸಮಾಧಿಗೆ ದೆಹಲಿಯಲ್ಲಿ ಅವಕಾಶ ನೀಡದ ಹಿನ್ನಲೆ ಅನ್ಯಾಯವಾಗಿತ್ತು ಎಂದರು. “ನಾನು ರಥ ಎಳೆದಿದ್ದೇನೆ, ನೀವು ಮುಂದಕ್ಕೆ ಎಳೆಯಬೇಕು” ಎಂಬ ಅಂಬೇಡ್ಕರ್ ಅವರ ಸಂದೇಶವನ್ನು ಈಗ ಸಮುದಾಯ ಅನುಸರಿಸುತ್ತಿದೆ ಎಂದರು.
ಮಹಿಳಾ ರಾಜ್ಯ ಕಾರ್ಯದರ್ಶಿ ಮುನಿರಾ ಮುಕಂದರ ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲರ ಜೀವನಕ್ಕೂ ಅವಶ್ಯಕವಾಗಿದೆ. ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್ ಇರುವವರೆಗೂ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಮಲ್ಲೇಶ್ ಮಾತನಾಡಿ, ಮಹಿಳಾ ಮೀಸಲಾತಿ ಮೂಲಕ ಅಂಬೇಡ್ಕರ್ ಮಹಿಳೆಯರ ಪ್ರಗತಿಗೆ ದಾರಿ ತೆರೆದಿದ್ದಾರೆ ಎಂದು ಪ್ರಶಂಸಿಸಿದರು. “ದೇವಾಲಯಗಳಿಗಿಂತ ಗ್ರಂಥಾಲಯಗಳು ಹೆಚ್ಚಿರಬೇಕು” ಎಂಬ ಅಂಬೇಡ್ಕರ್ ನಿಲುವನ್ನು ಉಲ್ಲೇಖಿಸಿ, ಶಿಕ್ಷಣವೇ ಸಮಾಜದ ಬಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾಜ್‌ಪೀರ್ ಮಾತನಾಡಿ, ಜಾತಿ–ಧರ್ಮ–ಭಾಷೆಗಳ ಒಗ್ಗಟ್ಟಿಗೆ ಸಂವಿಧಾನವೇ ಆಧಾರವಾಗಿದೆ ಎಂದರು. “ಸಂವಿಧಾನ ತಿದ್ದುಪಡಿ ಮಾಡಬಹುದು, ಬದಲಾವಣೆ ಸಾಧ್ಯವಿಲ್ಲ; ಬಿಜೆಪಿ ಬದಲಾವಣೆ ಮಾಡಲು ಯತ್ನಿಸುತ್ತಿದೆ, ಕಾಂಗ್ರೆಸ್ ಅವಕಾಶ ನೀಡುವುದಿಲ್ಲ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಸಾಧಿಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.