ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ವತಿಯಿಂದ 2025–26ನೇ ಸಾಲಿನ “ವಾರ್ಷಿಕ ಕ್ರೀಡಾಕೂಟ” ಕಾರ್ಯಕ್ರಮವನ್ನು ಡಿಸೆಂಬರ್ 06ರಂದು ಶನಿವಾರ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ಚಿತ್ರದುರ್ಗ ನಗರದ ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ವತಿಯಿಂದ 2025–26ನೇ ಸಾಲಿನ “ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಾಜರಾದ ಚಿತ್ರದುರ್ಗ ತಹಶೀಲ್ದಾರ್ ಶ್ರೀಯುತ ಗೋವಿಂದ ರಾಜು ಅವರು ಮಾತನಾಡಿ, ವಿದ್ಯೆಯ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಮಕ್ಕಳ ಬೆಳವಣಿಗೆಗೆ ಸಮಾನವಾಗಿ ಅಗತ್ಯವೆಂದು ಹೇಳಿದರು. ಶಾಲೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಇರೋದು ವಿದ್ಯಾ ವಿಕಾಸ ಸಂಸ್ಥೆಯ ಹೆಮ್ಮೆಯ ವಿಷಯ ಎಂದು ಅವರು ಶ್ಲಾಘಿಸಿದರು. ಕ್ರೀಡಾಕೂಟವನ್ನು ಶಿಸ್ತಿನಿಂದ ಮತ್ತು ವ್ಯವಸ್ಥಿತವಾಗಿ ಆಯೋಜಿಸಿರುವುದೇ ಮಕ್ಕಳಲ್ಲಿ ಬೆಳೆದಿರುವ ಸಂಯಮಕ್ಕೆ ಸಾಕ್ಷಿಯಾಗಿದೆ ಎಂದರು.
ಮತ್ತೊಬ್ಬ ಅತಿಥಿ, ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರಾದ ದಿನಕರ್ ಪಿ ಮಾತನಾಡುತ್ತಾ, ಕ್ರೀಡೆಗಳು ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ಹೇಳಿದರು. ಜೀವನದಲ್ಲಿ ಏನನ್ನಾದರೂ ಸಾಧಿಸಲು ಕ್ರೀಡೆಗಳು ಅಗತ್ಯವಾದ ಅನುಭವ ಮತ್ತು ವಾತಾವರಣ ಕಲ್ಪಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯ್ ಕುಮಾರ್ ಮಾತನಾಡಿ, ಕ್ರೀಡಾಕೂಟ ಯಶಸ್ವಿಯಾಗಲು ಪೋಷಕರ ಸಹಕಾರ ಮತ್ತು ಮಕ್ಕಳ ತೊಡಗಿಸಿಕೊಂಡಿರುವ ನಿಲುವು ಮುಖ್ಯ ಕಾರಣ ಎಂದರು. ಆಟದ ನಿಯಮಗಳನ್ನು ಪಾಲಿಸಿ ಭಾಗವಹಿಸುವುದರಿಂದ ಮಕ್ಕಳು ಜಯಶೀಲರಾಗುತ್ತಾರೆ ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಂ. ಪೃಥ್ವೀಶ ಅವರು, ಕ್ರೀಡೆಗಳಲ್ಲಿ ಸೋಲು–ಗೆಲುವಿಗಿಂತ ಮಕ್ಕಳ ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು. ಕಲಿಕೆಯಲ್ಲಿ ಅಂಕಗಳು ಎಷ್ಟು ಮುಖ್ಯವೋ ಅಷ್ಟೇ ಮಟ್ಟಿಗೆ ಕ್ರೀಡೆಗಳೂ ಅಗತ್ಯವೆಂದು ಹೇಳಿದರು.
ಸಂಸ್ಥೆಯ ಐಸಿಎಸ್ಇ ಪ್ರಾಚಾರ್ಯ ಬಸವರಾಜಯ್ಯ ಪಿ ಮಾತನಾಡುತ್ತಾ, “ಸದೃಢ ದೇಹದಲ್ಲಿ ಸದೃಢ ಮನಸ್ಸು” ಎಂಬ ಮಾತಿನಂತೆ ಕ್ರೀಡೆಗಳು ಮಕ್ಕಳಲ್ಲಿ ದೈಹಿಕ–ಮಾನಸಿಕ ಬಲವನ್ನು ವೃದ್ಧಿಸುತ್ತವೆ. ಕೇವಲ ನಾಲ್ಕು ಗೋಡೆಗಳ ಮಧ್ಯೆ ವಿದ್ಯೆ ಕಲಿತು ಅಂಕಗಳನ್ನು ಗಳಿಸುವುದೇ ಗುರಿಯಾಗಬಾರದು, ಕ್ರೀಡೆಗಳೂ ಸಮಾನವಾಗಿ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ ಎನ್.ಜಿ ಅವರು, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ ಮತ್ತು ಉತ್ತಮ ಸಾಧನೆಯ ಮೂಲಕ ರಾಜ್ಯ–ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಶಿಕ್ಷಕಿ ಕಾವ್ಯ ಯದುವಂಶ್ ನಿರೂಪಿಸಿದರು. ಶ್ರೀಮತಿ ವೈಶಾಲಿ ಬೆನ್ನಡಿ ಸ್ವಾಗತಿಸಿದರು ಮತ್ತು ಶ್ರೀ ಪೃಥ್ವಿರಾಜ್ ಎಸ್.ಎಂ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನಿತಾ ಪಿ.ಸಿ, ಶ್ರೀಮತಿ ಸ್ನೇಹಾ ಎನ್.ಎಸ್ ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು.