ಚಿತ್ರದುರ್ಗ ಜು. 27
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕಾಂಗ್ರೆಸ್ ಪಕ್ಷಕ್ಕೆ ಸದಾ ನಿಷ್ಠೆಯಿಂದ ದುಡಿಯುವ ಕಾರ್ಯಕರ್ತರೇ ನೈಜ ಶಕ್ತಿ ಮತ್ತು ಆಧಾರ ಸ್ತಂಭಗಳಾಗಿದ್ದಾರೆ. ಪಕ್ಷದಲ್ಲಿ ಯಾವುದೇ ರೀತಿಯ ಕಡೆಗಣನೆ ಅಥವಾ ಅನ್ಯಾಯಕ್ಕೆ ಆಸ್ಪದವಿಲ್ಲ ಎಂದು ಕಾಂಗ್ರೆಸ್ ಮುಖಂಡರು ಸಂಘಟನ್ ಶ್ರೀಜನ್ ಅಭಿಯಾನ್ ಕೆಪಿಸಿಸಿ ಉಸ್ತುವಾರಿಗಳು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ವಿ ಎಸ್ ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಬಲವರ್ಧನೆಗಾಗಿ ಗುಜರಾತ್ನ ಅಹಮದಾಬಾದ್ನಿಂದ ಆರಂಭಗೊಂಡ ಈ ವಿನೂತನ ಪ್ರಕ್ರಿಯೆಯು ಯಶಸ್ವಿಯಾಗಿ ಸಾಗಿದ್ದು, ಪ್ರಸ್ತುತ ರಾಜ್ಯದಲ್ಲೂ ಜಾರಿಯಲ್ಲಿದೆ ಯಾವುದೇ ವಿಭಾಗದ ಸಾಮಾನ್ಯ ಕಾರ್ಯಕರ್ತನಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಳೆದ 20-30 ವರ್ಷಗಳಿಂದ ಶ್ರಮಿಸುತ್ತಿರುವ ನಾಯಕರು ಹಾಗೂ ಕಾರ್ಯಕರ್ತರಿಗೆ ತಕ್ಕ ಗುರುತಿಸುವಿಕೆ ಮತ್ತು ಸ್ಥಾನಮಾನಗಳನ್ನು ದೊರಕಿಸಿಕೊಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಹಳೆಯ ಕಹಿ ಘಟನೆಗಳನ್ನು ನೆನಪಿಸಿದ ಮುಖಂಡರು, ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 17 ಶಾಸಕರು (13 ಕಾಂಗ್ರೆಸ್ ಹಾಗೂ 4 ಜೆಡಿಎಸ್ ಶಾಸಕರು) ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಮಾತ್ರ ಪಕ್ಷ ಗೆಲುವು ಸಾಧಿಸಿತ್ತು. ಈ ಭಾಗದಲ್ಲಿ ದೀರ್ಘಕಾಲದಿಂದ ಸಂಸದರಿಲ್ಲದಿರುವುದನ್ನು ಪ್ರಸ್ತಾಪಿಸಿದ ಅವರು, ಮುಂಬರುವ ದಿನಗಳಲ್ಲಿ ಸಂಸದರನ್ನು ಹಾಗೂ ಎಲ್ಲಾ ಶಾಸಕರನ್ನು ಗೆಲ್ಲಿಸಿಕೊಂಡು ಬರಲು ಎಲ್ಲರೂ ತಳಮಟ್ಟದಿಂದ ಸಜ್ಜಾಗಬೇಕಿದೆ ಎಂದು ಉಗ್ರಪ್ಪ ತಿಳಿಸಿದರು.
ಪಕ್ಷದ ಆಡಳಿತ ಮತ್ತು ಸಂಘಟನೆಯಲ್ಲಿ ಶಿಸ್ತು ಅತ್ಯಂತ ಪ್ರಮುಖವಾಗಿದೆ. ಶಿಸ್ತಿನಿಂದ ಇರುವ ಕಾರ್ಯಕರ್ತರನ್ನು ಪಕ್ಷವು ತಕ್ಷಣವೇ ಗುರುತಿಸುತ್ತದೆ. ಅದೇ ರೀತಿ ಶಿಸ್ತು ಉಲ್ಲಂಘಿಸುವವರ ವಿರುದ್ಧವೂ ಸೂಕ್ತ ಗಮನ ಹರಿಸಲಾಗುತ್ತಿದೆ. ಈ ಸಂಘಟನಾ ಪ್ರಕ್ರಿಯೆಯ ನಿಗಾವಹಿಸಲು ಎಐಸಿಸಿಯಿಂದ ವಿಶೇಷ ತಂಡಗಳನ್ನು ಕಳುಹಿಸಲಾಗಿದ್ದು, ಅವರು ನೀಡುವ ವರದಿಗಳ ಆಧಾರದ ಮೇಲೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಪ್ರಸ್ತುತ ಈ ಕಾರ್ಯಕ್ರಮವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು. ಅಲ್ಲದೆ, ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ತಂದ ಸಂಸದೀಯ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತಂದು, ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಗಳ ಹಂತದಲ್ಲಿ ಸ್ಥಳೀಯ ಮಟ್ಟಕ್ಕೆ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಬ್ಲಾಕ್ ಮಟ್ಟದಿಂದ ಕೆಳಹಂತದವರೆಗೆ ಪಕ್ಷದ ಆಡಳಿತವನ್ನು ಬಲಪಡಿಸಲಾಗುತ್ತಿದೆ. ಆದರೆ, ಈ ಸಂಘಟನಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಾಗೂ ಪಕ್ಷ ನೀಡುವ ಸೌಲಭ್ಯಗಳನ್ನು ಪಡೆಯಲು ಕಾಂಗ್ರೆಸ್ ಸದಸ್ಯತ್ವ ಪಡೆದಿರುವುದು ಕಡ್ಡಾಯವಾಗಿದೆ ಎಂದು ಉಗ್ರಪ್ಪ ಸ್ಪಷ್ಟಪಡಿಸಿದರು.
ಸಾರ್ವಜನಿಕ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಬಡವರ ಕಲ್ಯಾಣಕ್ಕಾಗಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು. ಯಾವುದೇ ಭಯ, ಆತಂಕ ಅಥವಾ ಜಾತಿ-ಪಂಥಗಳ ರಾಜಕೀಯಕ್ಕೆ ಕಿವಿಗೊಡದೆ ನ್ಯಾಯಯುತವಾಗಿ ಪಕ್ಷದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿ ಕಾಂಗ್ರೆಸ್ ಪಕ್ಷದ ಶಕ್ತಿಯು ಅದರ ನಿಷ್ಠಾವಂತ ಕಾರ್ಯಕರ್ತರಲ್ಲಿದೆ. ಪಕ್ಷದ ಆಂತರಿಕ ಶಿಸ್ತು ಕಾಪಾಡಿ ಕೊಂಡು, ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಸಂಪೂರ್ಣ ಗೆಲುವು ಸಾಧಿಸುವುದೇ ಈ ಆಂದೋಲನದ ಮುಖ್ಯ ಗುರಿಯಾಗಿದೆ ಎಂದರು.
ಚಿತ್ರದುರ್ಗ ಜಿಲ್ಲಾ ಕೆಪಿಸಿಸಿ ಉಸ್ತುವಾರಿಗಳಾದ ಮುರಳೀಧರ ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ಹಾಗೂ ಪಾರದರ್ಶಕ ಆಡಳಿತವನ್ನು ತರುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಮಿಟಿ (ಡಿಸಿಸಿ) ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನೇರವಾಗಿ ಕಾರ್ಯಕರ್ತರ ಅಭಿಪ್ರಾಯದ ಆಧಾರದ ಮೇಲೆ ನಡೆಸಲಾಗುವುದು. ಕೆಪಿಸಿಸಿ ಹಾಗೂ ಎಐಸಿಸಿ ವತಿಯಿಂದ ಹಿರಿಯ ನಾಯಕರು ಮತ್ತು ವೀಕ್ಷಕರ ನಿಯೋಗವು ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದೆ. ಪಕ್ಷದ ಆಂತರಿಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಯಾವುದೇ ‘ಹಿಂಬಾಗಿಲ ಪ್ರವೇಶ’ ಅಥವಾ ಹಿಂಬಾಲಕರ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು. ಅಧ್ಯಕ್ಷರ ಆಯ್ಕೆಯು ನೇರವಾಗಿ ಕಾರ್ಯಕರ್ತರ ಅಭಿಪ್ರಾಯದ ಮೇಲೆ ಆಧಾರಿತವಾಗಿರುತ್ತದೆ. ಅಷ್ಟೇ ಅಲ್ಲದೆ, ಸಾರ್ವಜನಿಕರು ಹಾಗೂ ಕೆಳಹಂತದ ಕಾರ್ಯಕರ್ತರು ಕೂಡ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಪಾರದರ್ಶಕ ಆಯ್ಕೆ ಪ್ರಕ್ರಿಯೆಯು ಕೇವಲ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ, ಕೆಪಿಸಿಸಿ ಮಾರ್ಗದರ್ಶನದಂತೆ ರಾಜ್ಯದ ಒಟ್ಟು 40 ಜಿಲ್ಲೆಗಳ ಅಧ್ಯಕ್ಷರ ಆಯ್ಕೆಗೂ ಅನ್ವಯಿಸಲಾಗುತ್ತದೆ. ಜಿಲ್ಲಾ ಸಮಿತಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮತ್ತು ಸೌಹಾರ್ದಯುತವಾಗಿ ಸಹಕರಿಸಬೇಕೆಂದು ನಾಯಕರು ಮನವಿ ಮಾಡಿ ಕಾಂಗ್ರೆಸ್ ಪಕ್ಷವು ಕಾರ್ಯಕರ್ತರ ಧ್ವನಿಗೆ ಆದ್ಯತೆ ನೀಡಿ, ಪಾರದರ್ಶಕವಾಗಿ ಅರ್ಹ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಸಂಘಟನೆಯನ್ನು ಬೂತ್ ಮಟ್ಟದಿಂದ ಬಲಪಡಿಸುವ ಸ್ಪಷ್ಟ ಸಂದೇಶವನ್ನು ನೀಡಿದೆ ಎಂದರು.
ಜಿಲ್ಲೆಗೆ ಎಐಸಿಸಿಯಿಂದ ವೀಕ್ಷಕರಾಗಿ ಆಗಮಿಸಿರುವ ಎಐಸಿಸಿ ಚಿತ್ರದುರ್ಗ ಜಿಲ್ಲಾ ಸಂಘಟನ್ ಶ್ರೀಜನ್ ಅಭಿಯಾನ ಉಸ್ತುವಾರಿಗಳಾದ ರಿಪುನ್ ಬೋರಾ, ಸೋಶಿಯಲ್ ಮೀಡಿಯಾ ವಿಭಾಗದ ಸೌಗಂಧಿಕಾ, ರಾಜಕೀಯ ವಿಶ್ಲೇಷಕರಾದ ರಮೇಶ್ ಹಾಗೂ ನಿಗಮ ಮಂಡಳಿಯ ಅಧ್ಯಕ್ಷರು ಮತ್ತು ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥರಾದ ಸಯ್ಯದ್ ಶ್ರೀಮತಿ ಸೌಗಂಧಿಕಾ ರಘುನಾಥ್ ಹಾಗೂ ಚಿತ್ರದುರ್ಗ ಜಿಲ್ಲಾ ಕೆಪಿಸಿಸಿ ಉಸ್ತುವಾರಿಗಳಾದ ಮುರಳೀಧರ ಹಾಲಪ್ಪ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ.ತಾಜ್ಪೀರ್ ಕಾರ್ಯಾಧ್ಯಕ್ಷರಾದ ಕೆ ಎಂ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್ ಕುಮಾರ್, ಮೈಲಾರಪ್ಪ, ಶ್ರೀಮತಿ ನಂದಿನಿ ಗೌಡ, ವೆಂಕಟೇಶ್, ಕುಮಾರ್ ಗೌಡ, ಯೋಗೀಶ್ ಬಾಬು, ಪ್ರಕಾಶ್ ಶಿವಣ್ಣ ಗಂಜಿಗಟ್ಟೆ, ಓ.ಶಂಕರ್, ಆರ್ ಕೆಸರ್ದಾರ್, ಲಕ್ಷ್ಮೀಕಾಂತ, ಜಿ.ಎಸ್.ಮಂಜುನಾಥ್, ಸೇತುರಾಂ, ಜಮೀರ್, ನರಸಿಂಹರಾಜು, ಆನಂತಕುಮಾರ್, ಅಂಜನಪ್ಪ ಸೇರಿದಂತೆ ಇತರರು ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿದ್ದರು.