ಧ್ಯಾನದಿಂದ ಆಂತರಿಕ ಶಾಂತಿ ಮತ್ತು ಜಾಗತಿಕ ಐಕ್ಯತೆ – ಚಿತ್ರದುರ್ಗದಲ್ಲಿ ವಿಶ್ವ ಧ್ಯಾನ ದಿನಾಚರಣೆ.

ಭಾರತೀಯ ಯೋಗ ಸಂಸ್ಥೆಯಲ್ಲಿ ಧ್ಯಾನ ದಿನಾಚರಣೆ: ವಿಶ್ವ ಶಾಂತಿಗಾಗಿ ವಿಶ್ವ ಧ್ಯಾನ ದಿನಾಚರಣೆ ಅಗತ್ಯವಿದೆ. _ ರವಿ ಕೆ.ಅಂಬೇಕರ್, ಅಧ್ಯಕ್ಷರು, ಭಾರತೀಯ ಯೋಗ ಶಿಕ್ಷಣ ಸಂಸ್ಥೆ.

ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್

ಚಿತ್ರದುರ್ಗ, ಡಿ.21:

ಎರಡನೇ ವಿಶ್ವ ಧ್ಯಾನ ದಿನಾಚರಣೆಯ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಚಿತ್ರದುರ್ಗ ವತಿಯಿಂದ ನಗರದ ತುರುವನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯದ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಗ್ಗೆ 5.30ರಿಂದ 7 ಗಂಟೆಯವರೆಗೆ ಸಾರ್ವಜನಿಕರಿಗಾಗಿ ಧ್ಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹಾರ್ಟ್‌ಫುಲ್‌ನೆಸ್ ಧ್ಯಾನ ಸಂಸ್ಥೆಯ ಸದಸ್ಯೆ ದೀಪಾ ಅವರು ಧ್ಯಾನ ಮಾಡುವ ವಿಧಾನ, ಮನಸ್ಸನ್ನು ಏಕಾಗ್ರಗೊಳಿಸುವ ಕ್ರಮ ಹಾಗೂ ಧ್ಯಾನದ ಮಹತ್ವದ ಕುರಿತು ವಿವರವಾಗಿ ಮಾತನಾಡಿದರು. ಡಿಸೆಂಬರ್ 21 ಅಯನ ಸಂಕ್ರಾಂತಿಯ ದಿನವಾಗಿದ್ದು, ಇದು ಜಗತ್ತಿನಾದ್ಯಂತ ಕತ್ತಲೆಯಿಂದ ಬೆಳಕಿನತ್ತ ಸಾಗುವ ನೈಸರ್ಗಿಕ ಪರಿವರ್ತನೆಯ ಸಂಕೇತವಾಗಿದೆ. ಆಂತರಿಕ ಶಾಂತಿ, ಒತ್ತಡ ನಿವಾರಣೆ ಮತ್ತು ಜಾಗತಿಕ ಐಕ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ವಿಶ್ವ ಧ್ಯಾನ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಯೋಗ ಪ್ರಚಾರಕ ಹಾಗೂ ಅಧ್ಯಕ್ಷ ರವಿ ಕೆ. ಅಂಬೇಕರ್, ಸೂರ್ಯೋದಯ ಸಮಯದ ಧ್ಯಾನ ಮೆದುಳಿನ ಎಡ ಹಾಗೂ ಬಲ ಭಾಗಗಳನ್ನು ಚುರುಕುಗೊಳಿಸುತ್ತದೆ. ಧ್ಯಾನವು ಮನೋನಿಗ್ರಹಕ್ಕೆ ಅತ್ಯುತ್ತಮ ಸಾಧನವಾಗಿದ್ದು, ಆಕ್ರಮಣಕಾರಿ ಭಾವನೆಗಳನ್ನು ಕಡಿಮೆ ಮಾಡಿ ಸಹಾನುಭೂತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕುಟುಂಬ ಹಾಗೂ ಸಮಾಜದ ಒಳಘರ್ಷಣೆಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.

ಅಧ್ಯಯನಗಳ ಪ್ರಕಾರ, ಕೆಲ ನಿಮಿಷಗಳ ಧ್ಯಾನವೇ ಭಾವನಾತ್ಮಕ ಸ್ಥಿರತೆಯನ್ನು ತರುತ್ತದೆ. ಜಗತ್ತಿನಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ಧ್ಯಾನ ದಿನಾಚರಣೆ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಪ್ರತಿದಿನ ಸಾಧ್ಯವಾದಷ್ಟು ಸಮಯ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಧ್ಯಾನ ಸಾಧಕರಾದ ಲಕ್ಷ್ಮೀಬಾಯಿ, ರಮೇಶ್, ವನಜಾಕ್ಷಮ್ಮ, ನಾಗಲತ, ಅನಿತ, ಸರಸ್ವತಿ, ತಿಪ್ಪಮ್ಮ, ರೇಣುಕಾ, ನಳಿನಾ, ಚಿತ್ರ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.

Leave a Reply

Your email address will not be published. Required fields are marked *