ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ. 23:
ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಸಮಾಜ ಸೇವೆಯಲ್ಲಿ ಅತ್ಯುತ್ತಮವಾದ ಕಾರ್ಯವನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ತಾನೂ ಸಹ ಈ ಟ್ರಸ್ಟ್ನ ಸದಸ್ಯನಾಗಿ ಸೇವೆ ಸಲ್ಲಿಸುವುದಾಗಿ ರಾಜ್ಯ ಕಾರ್ಮಿಕ ಸಚಿವರು ಹಾಗೂ 2025ನೇ ಸಾಲಿನ ಜೀವರಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಸ್. ಸಂತೋಷ್ ಲಾಡ್ ತಿಳಿಸಿದ್ದಾರೆ.
ನಗರದ ವಾಲ್ಮೀಕಿ ಭವನದಲ್ಲಿ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2025ನೇ ಸಾಲಿನ ಜೀವರಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಇಂದಿನ ದಿನಮಾನದಲ್ಲಿ ಯುವಜನತೆ ತಮ್ಮ ಅಮೂಲ್ಯ ಸಮಯವನ್ನು ಫೇಸ್ಬುಕ್, ವಾಟ್ಸ್ಆಪ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ಸಮಯ ಹಾಗೂ ಬುದ್ಧಿ ಹಾಳಾಗುತ್ತದೆ. ಇದರ ಬದಲು ತಮ್ಮ ಪ್ರಗತಿಗೆ ಪೂರಕವಾದ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಸಂವಿಧಾನವು ನಿಮಗೆ ನೀಡಿರುವ ಹಕ್ಕು-ಕರ್ತವ್ಯಗಳನ್ನು ಅರಿತುಕೊಳ್ಳುವುದು ಭವಿಷ್ಯದಲ್ಲಿ ಬಹಳ ಉಪಯುಕ್ತವಾಗುತ್ತದೆ ಎಂದು ಸಚಿವರು ಯುವಜನತೆಗೆ ಕರೆ ನೀಡಿದರು.
ಈ ಪ್ರಶಸ್ತಿಗೆ ತಾನು ಎಷ್ಟು ಅರ್ಹನೋ ಗೊತ್ತಿಲ್ಲ. ಆದರೆ ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯವನ್ನು ಮಾಡಿದ್ದೇನೆ. ಅದನ್ನು ಗುರುತಿಸಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೌರವಿಸಿರುವುದು ಟ್ರಸ್ಟ್ನ ಮಹತ್ವದ ಗುಣ. ಕಳೆದ 10 ವರ್ಷಗಳಿಂದ ಟ್ರಸ್ಟ್ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಟ್ರಸ್ಟ್ ಜೊತೆಗೂಡಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಸಂತೋಷ್ ಲಾಡ್ ತಿಳಿಸಿದರು. ಕನ್ನಡಿಗರು ಸಂಕಷ್ಟದಲ್ಲಿದ್ದಾಗ ನೆರವು ನೀಡುವುದು ತನ್ನ ಕರ್ತವ್ಯವೆಂದು ಅವರು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿರಿಗೆರೆ ಶಾಖಾ ಮಠದ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ನಿಸ್ವಾರ್ಥ ಸೇವೆಯಿಂದಲೇ ಭಗವಂತನ ಕೃಪೆ ದೊರೆಯುತ್ತದೆ. ಇಂದಿನ ಸಮಾಜದಲ್ಲಿ ಜ್ಞಾನ ಇದ್ದರೂ ಮಾನವೀಯತೆ ಕೊರತೆಯಾಗಿದೆ. ಮನುಷ್ಯತ್ವ ಮರೆತು ಹೋಗುತ್ತಿರುವುದು ಆತಂಕಕಾರಿ ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ, ಜೀವರಕ್ಷಕ ಟ್ರಸ್ಟ್ನ ಪದಾಧಿಕಾರಿಗಳು ನಿಜವಾದ ಸಮಾಜಸೇವಕರು. ಪ್ರಚಾರ ಬಯಸದೆ ನಿಸ್ವಾರ್ಥ ಸೇವೆ ಮಾಡುತ್ತಿರುವುದು ಅಪರೂಪ ಎಂದು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮ್ಮಿನಮಟ್ಟು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ರಂಗಸ್ವಾಮಿ ಇಂಗಳದಾಳ್, ಸಂಸ್ಥಾಪಕ ಕಾರ್ಯದರ್ಶಿ ಡಾ. ಸೌಮ್ಯ ಮಂಜುನಾಥ್, ಡಿಸಿಸಿ ಅಧ್ಯಕ್ಷ ತಾಜ್ಪೀರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ಉಪಾಧ್ಯಕ್ಷ ಮೈಲಾರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಎಂ. ವೇದಮೂರ್ತಿ ಬೀಮಸಮುದ್ರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ತೊಡರನಾಳ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.