ತಿರುವನಂತಪುರಂನಲ್ಲಿ ನಡೆದ ಭಾರತ–ಶ್ರೀಲಂಕಾ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಲಂಕಾ ವಿರುದ್ಧ 30 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ ನಾಲ್ಕು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದೆ. ಇದೀಗ ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ ವೈಟ್ ವಾಷ್ ಭೀತಿಯನ್ನು ಎದುರಿಸುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ಅಬ್ಬರದ ಪ್ರದರ್ಶನ ನೀಡಿ ನಿಗದಿತ 20 ಓವರ್‌ಗಳಲ್ಲಿ ಲಂಕಾಗೆ 222 ರನ್‌ಗಳ ಭಾರೀ ಗುರಿ ನೀಡಿತು. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ 48 ಎಸೆತಗಳಲ್ಲಿ 80 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ಶೆಫಾಲಿ ವರ್ಮಾ 46 ಎಸೆತಗಳಲ್ಲಿ 79 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಕೇವಲ 16 ಎಸೆತಗಳಲ್ಲಿ 40 ರನ್‌ಗಳ ವೇಗದ ಇನ್ನಿಂಗ್ಸ್ ನೀಡಿ ಲಂಕಾ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 10 ಎಸೆತಗಳಲ್ಲಿ 16 ರನ್ ಸೇರಿಸಿ ತಂಡದ ಅಬ್ಬರದ ಸ್ಕೋರ್‌ಗೆ ನೆರವಾದರು.
ಭಾರತ ನೀಡಿದ ಭಾರೀ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಮಹಿಳಾ ತಂಡ ಆರಂಭದಲ್ಲಿ ಧೈರ್ಯದಿಂದ ಆಟವಾಡಿದರೂ, ಭಾರತದ ಬಿಗಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾಯಿತು. ನಿಗದಿತ 20 ಓವರ್‌ಗಳಲ್ಲಿ ಲಂಕಾ ತಂಡ ಆರು ವಿಕೆಟ್‌ಗಳ ನಷ್ಟಕ್ಕೆ 191 ರನ್‌ಗಳನ್ನು ಮಾತ್ರ ಗಳಿಸಿತು. ಈ ಮೂಲಕ ಭಾರತ ಮಹಿಳಾ ತಂಡ 30 ರನ್‌ಗಳ ಸ್ಪಷ್ಟ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸದ ಗರಿಷ್ಠ ಮಟ್ಟದಲ್ಲಿದೆ. ಲಂಕಾ ತಂಡಕ್ಕೆ ಈಗ ಸರಣಿಯಲ್ಲಿ ವೈಟ್ ವಾಷ್ ತಪ್ಪಿಸಿಕೊಳ್ಳುವ ಸವಾಲು ಎದುರಾಗಿದೆ. ಒಟ್ಟಿನಲ್ಲಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮತೋಲನ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡದ ಆಟ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.