ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ, ಸೆಪ್ಟೆಂಬರ್. 15 : ನುಲೇನೂರು ಶಂಕರಪ್ಪ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ ಪ್ರಶಸ್ತಿಗೆ ಈ ಬಾರಿ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಅಕ್ಟೋಬರ್ ಮೊದಲವಾರ ರಾಯಚೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸದಸ್ಯ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾಹಿತಿ ನೀಡಿದರು.
ರಾಘವೇಂದ್ರ ಕುಷ್ಟಗಿ ಅವರು ಕಲ್ಯಾಣ ಕರ್ನಾಟದ ಆರ್ಟಿಕಲ್ 371(ಜೆ) ಗೆ ಹೋರಾಟ ಮಾಡಿ ಯಶ ಕಂಡಿದ್ದಾರೆ. ಅಕ್ರಮ ಗಣಿಗಾರಿಕೆ, ಅನ್ಯಾಯದ ಭೂ ಸ್ವಾಧೀನ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಎಸ್.ಆರ್.ಹಿರೇಮಠ ಅವರ ಜೊತೆಗೂಡಿ ಜನ ಸಂಗ್ರಾಮ ಪರಿಷತ್ ಸ್ಥಾಪನೆ ಮಾಡಿದ್ದರು. ಅಕ್ರಮ ಗಣಿಗಾರಿಕೆ ವಿರುದ್ದ ರಾಯಚೂರಿನಿಂದ ಬೆಂಗಳೂರು ವರೆಗೆ ಬೃಹತ್ ಜಾಥಾ ಸಂಘಟಿಸಿದ್ದರು. ಗದಗದ ಕಪ್ಪತಗುಡ್ಡ ರಕ್ಷಣೆಗೆ ಪಶ್ಚಿಮಘಟ್ಟದಿಂದ ಆರಂಭಗೊಂಡ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಚಿಂತಕ ದೇವನೂರು ಮಹಾದೇವ. ರೈತ ಸಂಘದ ಪುಟ್ಟಣ್ಣಯ್ಯ, ಎಸ್ ಆರ್.ಹಿರೇಮಠ ಅವರ ಜೊತೆ ಸೇರಿ ಜನಾಂದೋಲನ ಮಹಾ ಮೈತ್ರಿ ಸ್ಥಾಪನೆ ಮಾಡಿದ್ದರು. 2005 ರಲ್ಲಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ರಾಘವೇಂದ್ರ ಕುಷ್ಟಗಿ ಅವರ ಸಾಮಾಜಿಕ ಹಾಗೂ ಕಾರ್ಮಿಕ ಹೋರಾಟವನ್ನು ಗುರುತಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಷಣ್ಮುಖ ತಿಳಿಸಿದರು.
ನುಲೇನೂರು ಶಂಕರಪ್ಪ ಅವರು ಚಿತ್ರದುರ್ಗ ನೆಲದ ಗಟ್ಟಿ ಹೋರಾಟಗಾರನಾಗಿದ್ದು ರೈತ ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಎಲ್ಲ ಸಾಮಾಜಿಕ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಚಿತ್ರದುರ್ಗ ನೆಲಕ್ಕೆ ನೀರುಣಿಸುವ ಭದ್ರಾ ಮೇಲ್ದಂಡೆಯ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಹೆಸರಿನಲ್ಲಿ ಪ್ರತಿಷ್ಠಾಪನೆ ಸ್ಥಾಪಿಸಿ ಹಸಿರು ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರತಿಷ್ಠಾನದ ಮತ್ತೋರ್ವ ಸದಸ್ಯ ಸಂಗೇನಹಳ್ಳಿ ಅಶೋಕ್ ಕುಮಾರ್ ತಿಳಿಸಿದರು. ಪ್ರತಿಷ್ಠಾನದ ಸದಸ್ಯರುಗಳಾದ ಹಿರಿಯ ಪತ್ರಕರ್ತ ಶ.ಮಂಜುನಾಥ್, ಹಂಪಯ್ಯನಮಾಳಿಗೆ ಧನಂಜಯ, ರುದ್ರಸ್ವಾಮಿ ಇದ್ದರು.