ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತವೂ ಪವಿತ್ರವಾದುದು; ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಮೇಶ್ವರಪ್ಪ ಅಭಿಮತ
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 30
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತವೂ ಪವಿತ್ರವಾದುದು ಹಾಗಾಗಿ ಪ್ರತಿಯೊಬ್ಬ ನಾಗರಿಕರು ಚುನಾವಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಮತದಾನ ಮಾಡಿ, ಎಂದು ಚಿತ್ರದುರ್ಗ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗ್ರೇಡ್-1 ಅಧಿಕಾರಿ ಪರಮೇಶ್ವರಪ್ಪ ತಿಳಿಸಿದರು.

ನಗರದ ಡಾ. ಬಿ ಆರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಗುರುವಾರ ಮೇರಾ ಯುವ ಭಾರತ್ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸಂವಿಧಾನದಲ್ಲಿ ಮತದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ, ತಮ್ಮನಾಳುವ ಸರ್ಕಾರವನ್ನು ರಚಿಸಿಕೊಳ್ಳುವ ಅವಕಾಶವನ್ನ ಭಾರತ ಸಂವಿಧಾನ ಜನರಿಗೆ ನೀಡಿದೆ ಹಾಗಾಗಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿ ಉತ್ತಮ ಸರ್ಕಾರಗಳನ್ನು ರೂಪಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ಕಡ್ಡಾಯವಾಗಿ ಚುನಾವಣೆಗಳು ಬಂದಂತ ಸಂದರ್ಭದಲ್ಲಿ ಮತದಾನ ಮಾಡುವುದು ಅತ್ಯಂತ ಅವಶ್ಯಕ, ಮತದಾನ ಮಾಡದೇ ಇರುವುದು ದೇಶಕ್ಕೆ ಮಾಡುವ ಅಪರಾಧವಿದ್ದಂತೆ ಆ ಒಂದು ನಿಟ್ಟಿನಲ್ಲಿ ದೇಶದ ಪ್ರಜೆಯಾದ ನಾವುಗಳು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಡಿಲು ಸಂಸ್ಥೆ ಕಾರ್ಯದರ್ಶಿ ಆನಂದಪ್ಪ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಗೂ ಮತ್ತು ಗಣರಾಜ್ಯೋತ್ಸವ ವಿಭಿನ್ನವಾದ ವ್ಯತ್ಯಾಸವಿದೆ, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವ ಮಹನೀಯರ ನೆನೆಯುವುದು ಸ್ವಾತಂತ್ರ್ಯ ದಿನಾಚರಣೆಯ ಒಂದು ಭಾಗವಾದರೆ, ಸ್ವಾತಂತ್ರ್ಯ ಭಾರತಕ್ಕೆ ಗಣರಾಜ್ಯಗಳ ಸ್ಥಾಪನೆಗಾಗಿ ಗಣರಾಜ್ಯೋತ್ಸವ ಆಚರಣೆ ಮಾಡುವದು ಒಂದು ಭಾಗವಾಗಿದೆ, ಈ ಎರಡು ಆಚರಣೆಗಳ ನಡುವಿನ ವ್ಯತ್ಯಾಸವನ್ನು ಪ್ರಸ್ತುತ ದಿನಮಾನಗಳಲ್ಲಿ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಹಳ್ಳಿಯಿಂದ ದಿಲ್ಲಿಯವರೆಗೆ ರಾಜಕಾರಣ ಎಂಬುದು ದೊಡ್ಡ ಆಲದ ಮರವಾಗಿ ಬೆಳೆದಿದೆ ಸ್ಥಳೀಯ ರಾಜಕಾರಣ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರರು ತಮ್ಮ ಆಯ್ಕೆಗಳನ್ನ ತಪ್ಪಾಗಿ ಆಯ್ಕೆ ಮಾಡಿಕೊಳ್ಳಬಾರದು, ತಮ್ಮ ಅಮೂಲ್ಯವಾದ ಮತದಿಂದ ಅಭಿವೃದ್ಧಿ ಕಡೆಗೆ ಸಾಗುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ವಸಂತ್ ಕುಮಾರ್ ಉಪನ್ಯಾಸ ನೀಡಿ ಭಾರತ ದೇಶವು ಒಂದು ವಿಶಿಷ್ಟವಾದ ದೇಶವಾಗಿದ್ದು ಪ್ರತಿ ಚದರ ಕಿಲೋಮೀಟರಿಗೂ ವಿಶಿಷ್ಟ ವೈವಿಧ್ಯತೆ, ಸಂಸ್ಕೃತಿ, ಭಾಷೆ, ಆಚಾರ ವಿಚಾರ, ಉಡುಗೆ ತೊಡುಗೆ ಆಹಾರಗಳು ಬದಲಾವಣೆಗಳನ್ನ ನಾವು ನೋಡಬಹುದು, ಆ ಒಂದು ನಿಟ್ಟಿನಲ್ಲಿ ಯುವ ಸಮುದಾಯದವರು ಗಣತಂತ್ರ ರಾಜ್ಯ ರೂಪಿಸುವ ನಿಟ್ಟಿನಲ್ಲಿ ತಮ್ಮದೇ ಆದ ನಿಲುವನ್ನ ಹೊಂದಿರಬೇಕು, ಮತದಾನ ಮಾಡುವುದರ ಮೂಲಕ ಉತ್ತಮ ಅಭಿವೃದ್ಧಿ ಕೆಲಸ ಮಾಡುವವರ ಆಯ್ಕೆ ಮಾಡುವುದು ಕೂಡ ಮುಖ್ಯವಾಗುತ್ತದೆ ಎಂದು ಹೇಳಿದರು.
ಭಾರತ ದೇಶ ಪುರುಷ ಸಮಾನ ದೇಶ ಎನ್ನುವ ಪದ್ಧತಿಯನ್ನು ಪ್ರಸ್ತುತ ದಿನಮಾನಗಳಲ್ಲಿ ಹಿಂದೆ ಸರಿಯುತ್ತಾ ಬರುತ್ತಿದೆ ಮಹಿಳೆ ಪ್ರಸ್ತುತ ದಿನಮಾನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯನಿರ್ಮುಖವಾಗಿ ತೊಡಗಿದ್ದಾಳೆ ರಾಜಕೀಯ, ಸಿನಿಮಾ, ವಿಜ್ಞಾನ, ಕ್ರೀಡೆ, ಸಾಹಿತ್ಯ ಅನೇಕ ವಿವಿಧ ರಂಗಗಳಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ ಇದಕ್ಕೆಲ್ಲ ಕಾರಣ ಸಂವಿಧಾನದ ಅವಕಾಶದಿಂದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರಾದ ಯಶೋಧಮ್ಮ ಅನಿತಾ, ಮಂಜುಳಾ, ರೇಣುಕಾ, ಮಡಿಲ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ್ ಪ್ರವೀಣ್ ಮೆಹಬೂಬ್ ಹಾಗೂ ಇತರರು ಇದ್ದರು.