ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 02
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಕಳೆದ ಒಂದು ದಶಕದಿಂದ ಅನುಸರಿಸಿಕೊಂಡು ಬಂದಿರುವ ಸ್ಥಿರ ಆರ್ಥಿಕ ನೀತಿಗಳ ಮುಂದುವರಿಕೆ 2026-27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಎದ್ದು ಕಾಣುತ್ತಿದ್ದು, ಇದು 2047ರ ವೇಳೆಗೆ ಭಾರತವನ್ನು ‘ವಿಕಸಿತ ರಾಷ್ಟ್ರ’ವನ್ನಾಗಿ ಮಾಡುವ ಭದ್ರ ಬುನಾದಿಯಾಗಿದೆ ಎಂದು ಬಿಜೆಪಿ ಮುಖಂಡರಾದ ಹನುಮಂತೇಗೌಡ ತಿಳಿಸಿದ್ದಾರೆ.
ಬಜೆಟ್ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಸತತ 9ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದೇಶದ ಆರ್ಥಿಕ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಬಾರಿಯ ಆಯವ್ಯಯವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯ ನೀಡಿದೆ. ವಿಶೇಷವಾಗಿ ರೈತರ ಆದಾಯ ಹೆಚ್ಚಿಸಲು ಅಧಿಕ ಮೌಲ್ಯದ ಬೆಳೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಉನ್ನತ ಮೌಲ್ಯದ ಬೆಳೆಗಳ ಕೃಷಿಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಅದರಲ್ಲೂ ತೋಟಗಾರಿಕಾ ಬೆಳೆಗಳಾದ ತೆಂಗು, ಶ್ರೀಗಂಧ, ಗೋಡಂಬಿ ಮತ್ತು ಕೋಕೋ ಬೆಳೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟಿರುವುದು ನಮ್ಮ ಭಾಗದ ರೈತರ ಪಾಲಿಗೆ ಆಶಾದಾಯಕವಾಗಿದೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚಳ ಮತ್ತು ಉದ್ಯಮಶೀಲತೆಯ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ಗುರಿ ಶ್ಲಾಘನೀಯ. ಇದರೊಂದಿಗೆ ಪಶು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಆದ್ಯತೆ ಮತ್ತು ಕೃಷಿ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಪೂರಕವಾಗಿ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಯೋಜನೆ’ಯನ್ನು ಜಾರಿಗೆ ತಂದಿರುವುದು ಗ್ರಾಮೀಣ ಭಾರತದ ಆರ್ಥಿಕ ಚಿತ್ರಣವನ್ನೇ ಬದಲಿಸಲಿದೆ ಎಂದಿದ್ದಾರೆ.
ಬಜೆಟ್ನಲ್ಲಿ ಯುವಶಕ್ತಿಯ ಸಬಲೀಕರಣಕ್ಕೆ ವಿಶೇಷ ಮನ್ನಣೆ ನೀಡಲಾಗಿದ್ದು, ಇಂದಿನ ಯುವ ಸಮುದಾಯದ ಅಗತ್ಯಕ್ಕೆ ತಕ್ಕಂತೆ ಆಧುನಿಕ ಉದ್ಯೋಗ ಸೃಷ್ಟಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಲಾಗಿದೆ. ಸಣ್ಣ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ‘ಅಮೃತ ಯೋಜನೆ’ಯು ಪ್ರಾದೇಶಿಕ ಸಮತೋಲನಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ. ನಮ್ಮ ಕರಾವಳಿ ಭಾಗದ ಮತ್ಸ್ಯ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಿರುವುದು ಹಾಗೂ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಘೋಷಿಸಲಾದ ‘ಆಮೆ ಕಾರಿಡಾರ್’ ಯೋಜನೆಯು ಕರಾವಳಿಯ ನಿಸರ್ಗದತ್ತ ಸಂಪತ್ತಿನ ರಕ್ಷಣೆಗೆ ಪೂರಕವಾಗಿದೆ. ಕ್ರೀಡಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಯುವಜನರ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಲಿದೆ.ಹೊಸ ಆದಾಯ ತೆರಿಗೆ ನೀತಿಯು ಮಧ್ಯಮ ವರ್ಗದವರಿಗೆ ನೆಮ್ಮದಿ ನೀಡಿದ್ದರೆ, ಆರೋಗ್ಯ ಕ್ಷೇತ್ರದಲ್ಲಿ ಕ್ಯಾನ್ಸರ್ ಸೇರಿದಂತೆ ಏಳು ಪ್ರಮುಖ ರೋಗಗಳ ಔಷಧಿಗಳನ್ನು ಅಗ್ಗಗೊಳಿಸಿರುವುದು ಶ್ಲಾಘನೀಯ. ಅಪಘಾತ ವಿಮೆ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ ಎಂದು ಬಜೆಟ್ನ್ನು ಬಿಜೆಪಿ ಮುಖಂಡರಾದ ಹನುಮಂತೇಗೌಡ ಪ್ರಶಂಸಿದ್ದಾರೆ.
ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕಾಗಿ ಘೋಷಿಸಲಾದ ವಿಶೇಷ ಯೋಜನೆಗಳು ಹಾಗೂ ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯಗಳ ನಿರ್ಮಾಣದ ನಿರ್ಧಾರವು ಸ್ತ್ರೀ ಶಿಕ್ಷಣ ಮತ್ತು ಪ್ರಗತಿಗೆ ದೊಡ್ಡ ಬಲ ತುಂಬಲಿದೆ. ಮೆಡಿಕಲ್ ಟೂರಿಸಂ, ಆಯುರ್ವೇದ, ಸಾಂಸ್ಕೃತಿಕ ಪ್ರವಾಸೋದ್ಯಮ ಮತ್ತು ಕರ್ನಾಟಕದ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ನೀಡಿರುವ ವಿಶೇಷ ಒತ್ತು ನಮ್ಮ ರಾಜ್ಯದ ಪ್ರಗತಿಗೆ ವೇಗ ನೀಡಲಿದೆ. ದಿವ್ಯಾಂಗರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಈ ಬಜೆಟ್ನ ಮಾನವೀಯ ಮುಖವನ್ನು ಪರಿಚಯಿಸಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ಬಜೆಟ್ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಬಿಜೆಪಿ ಮುಖಂಡರಾದ ಹನುಮಂತೇಗೌಡ ತಿಳಿಸಿದ್ದಾರೆ.