ಇಂದು ಶಾಲಿವಾಹನ ಶಕವರ್ಷ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸವಾಗಿದೆ. ಕೃಷ್ಣ ಪಕ್ಷದ ಪಂಚಮಿ ತಿಥಿಯನ್ನು ಹೊಂದಿರುವ ಈ ಶನಿವಾರದಂದು ದ್ವಾದಶ ರಾಶಿಗಳಿಗೆ ಗ್ರಹಗತಿಗಳು ಏನೆಲ್ಲಾ ಫಲಗಳನ್ನು ನೀಡಲಿವೆ? ಉದ್ಯೋಗ, ವ್ಯಾಪಾರ, ಕೌಟುಂಬಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಇಂದಿನ ದಿನ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದಿನ ಪಂಚಾಂಗ (07-02-2026):astr
- ಸಂವತ್ಸರ: ವಿಶ್ವಾವಸು, ಅಯನ: ಉತ್ತರಾಯಣ
- ಋತು: ಶಿಶಿರ, ಮಾಸ: ಮಾಘ, ಪಕ್ಷ: ಕೃಷ್ಣ
- ತಿಥಿ: ಪಂಚಮೀ, ವಾರ: ಶನಿವಾರ
- ನಕ್ಷತ್ರ: ಸ್ವಾತಿ, ಯೋಗ: ಸುಕರ್ಮ, ಕರಣ: ಕೌಲವ
- ಸೂರ್ಯೋದಯ: ಬೆಳಿಗ್ಗೆ 06:52, ಸೂರ್ಯಾಸ್ತ: ಸಂಜೆ 06:25
- ರಾಹುಕಾಲ: ಬೆಳಿಗ್ಗೆ 09:45 ರಿಂದ 11:12 ರವರೆಗೆ
- ಗುಳಿಕಕಾಲ: ಬೆಳಿಗ್ಗೆ 06:52 ರಿಂದ 08:19 ರವರೆಗೆ
- ಯಮಗಂಡಕಾಲ: ಮಧ್ಯಾಹ್ನ 02:05 ರಿಂದ 03:32 ರವರೆಗೆ
ರಾಶಿ ಭವಿಷ್ಯ
ಮೇಷ ರಾಶಿ: ವೃತ್ತಿಜೀವನದಲ್ಲಿ ಇಂದು ಮಹತ್ತರ ಬದಲಾವಣೆಗಳು ಕಂಡುಬರಲಿವೆ. ಉದ್ಯೋಗದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆಗಳಿದ್ದು, ವ್ಯಾಪಾರಿಗಳು ತಮ್ಮ ವಹಿವಾಟು ವಿಸ್ತರಣೆಗೆ ಹೊಸ ಸ್ಥಳಗಳನ್ನು ಪರಿಶೀಲಿಸುವರು. ಕಚೇರಿಯಲ್ಲಿ ಸಿಬ್ಬಂದಿಗಳ ಕಾರ್ಯವೈಖರಿ ತುಸು ನಿಧಾನಗತಿಯಲ್ಲಿ ಸಾಗಲಿದ್ದು, ತಾಳ್ಮೆ ಅಗತ್ಯ. ವೃತ್ತಿಪರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡಬೇಡಿ. ಮನೆಯ ವಾತಾವರಣವು ಸಂತೋಷದಾಯಕವಾಗಿರಲಿದ್ದು, ನಿಮ್ಮ ಅನುಕಂಪದ ಗುಣದಿಂದ ಮಹತ್ತರವಾದದ್ದನ್ನು ಸಾಧಿಸುವಿರಿ.
ವೃಷಭ ರಾಶಿ: ಇಂದು ನಿಮ್ಮ ಮನಸ್ಥಿತಿ ಅಸ್ಥಿರವಾಗಿರುವ ಸಾಧ್ಯತೆ ಇದೆ. ಆದರೆ ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನಗಳಲ್ಲಿ ಯಶಸ್ಸು ಸಿಗಲಿದ್ದು, ಆತಂಕ ದೂರವಾಗಲಿದೆ. ನಿಮ್ಮ ವ್ಯಕ್ತಿತ್ವ ಮತ್ತು ಆಕರ್ಷಕ ಮಾತುಗಳು ಇತರರನ್ನು ಸೆಳೆಯಲಿವೆ. ಯಾವುದೇ ಹೊಸ ಯೋಜನೆಗಳು ಬಂದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಸೌಕರ್ಯಗಳು ಸಿಗುವುದು ಕಷ್ಟ. ಸ್ವಾರ್ಥ ಚಿಂತನೆ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೊಳ್ಳಿ. ಅಭದ್ರತೆಯ ಭಾವನೆಯನ್ನು ಹೋಗಲಾಡಿಸಿಕೊಳ್ಳುವುದು ಒಳಿತು.
ಮಿಥುನ ರಾಶಿ: ಮನೆಯಲ್ಲಿ ಕಂಕಣ ಭಾಗ್ಯದ ಮಾತುಕತೆಗಳು ನಡೆಯಲಿದ್ದು, ಹಿರಿಯರ ನಿರ್ಧಾರಗಳು ನಿಮಗೆ ಖುಷಿ ನೀಡಲಿವೆ. ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿರಿ. ಆದರೆ ನಿಮ್ಮದೇ ಅಜಾಗರೂಕತೆಯಿಂದ ಸಣ್ಣಪುಟ್ಟ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ, ಎಚ್ಚರವಿರಲಿ. ಕಳೆದುಹೋದ ವಸ್ತುಗಳು ಅಥವಾ ಗೌರವವನ್ನು ಮರಳಿ ಪಡೆಯುವ ಛಲ ನಿಮ್ಮಲ್ಲಿ ಮೂಡಲಿದೆ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ನಿಮ್ಮದಾಗಲಿದೆ.
ಕರ್ಕಾಟಕ ರಾಶಿ: ಆಸ್ತಿ ಅಥವಾ ಹಣಕಾಸಿನ ವಿಚಾರದಲ್ಲಿ ಆಪ್ತರು ಸುಳ್ಳು ಹೇಳುತ್ತಿದ್ದರೆ ಅದು ಇಂದು ಬೆಳಕಿಗೆ ಬರಲಿದೆ. ಬಹಳ ದಿನಗಳಿಂದ ಮುಚ್ಚಿಟ್ಟಿದ್ದ ಗೌಪ್ಯ ವಿಷಯಗಳನ್ನು ಇಂದು ಬಹಿರಂಗಪಡಿಸುವಿರಿ. ಮನೆಯ ಸ್ವಚ್ಛತೆ ಮತ್ತು ನಿರ್ವಹಣೆಗೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಲಿದೆ. ಉದ್ಯೋಗದಲ್ಲಿ ಹೊಸ ಕೌಶಲ್ಯಗಳನ್ನು ಕಲಿಯುವ ಅನಿವಾರ್ಯತೆ ಎದುರಾಗಬಹುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ತಂದೆ ಅಥವಾ ಸಂಗಾತಿಯ ಮಾತುಗಳು ಮನಸ್ಸಿಗೆ ಬೇಸರ ತರಿಸಬಹುದು.
ಸಿಂಹ ರಾಶಿ: ಇಂದು ನಿಮ್ಮ ಆದ್ಯತೆಗಳು ಏನೆಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಅತಿಯಾದ ನಂಬಿಕೆ ಇಟ್ಟು ಅಮೂಲ್ಯ ವಸ್ತುಗಳನ್ನು ಇತರರ ಸುಪರ್ದಿಗೆ ನೀಡಬೇಡಿ, ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮಗೆ ಗೌರವವಿಲ್ಲದ ಜಾಗದಲ್ಲಿ ಇರಲು ಮನಸ್ಸು ಒಪ್ಪುವುದಿಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಆಪ್ತರು ದೂರವಾಗಬಹುದು. ಮನೆಯಲ್ಲಿನ ಅಶಾಂತಿಯನ್ನು ಸರಿಪಡಿಸಲು ಮುಂದಾಗಿ. ಸ್ನೇಹಿತರ ಬೆಂಬಲದಿಂದ ಕಳೆದುಹೋದ ಆತ್ಮವಿಶ್ವಾಸ ಮರಳಿ ಬರಲಿದೆ. ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ.
ಕನ್ಯಾ ರಾಶಿ: ಕಚೇರಿಯಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗಲಿದ್ದು ಕೆಲಸಗಳು ಸುಗಮವಾಗಲಿವೆ. ಆದರೆ ದೂರ ಪ್ರಯಾಣ ಮಾಡುವುದು ನಿಮಗೆ ಇಷ್ಟವಾಗದಿರಬಹುದು. ಸಾಲದ ಬಾಧೆ ಇದ್ದಲ್ಲಿ, ಸಾಲಗಾರರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪ್ರಸಂಗ ಎದುರಾಗಬಹುದು. ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಸಣ್ಣ ಹಿನ್ನಡೆ ಉಂಟಾಗಬಹುದು. ಹಳೆಯ ಕಹಿ ಘಟನೆಗಳು ನೆನಪಾಗಬಹುದು. ಯಾವುದೇ ಶುಭ ಸುದ್ದಿಯನ್ನು ನಿರೀಕ್ಷಿಸುತ್ತಿದ್ದರೆ, ಅದು ಇಂದು ಕೈಗೂಡುವುದು ಅನುಮಾನ.
ತುಲಾ ರಾಶಿ: ಯಾವುದೇ ಕೆಲಸವನ್ನಾದರೂ ಸಕಾರಾತ್ಮಕವಾಗಿ ಯೋಚಿಸಿ ಮುಂದುವರೆಸಿ, ಯಶಸ್ಸು ಸಿಗಲಿದೆ. ಆರೋಗ್ಯದ ಕಡೆಗೆ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಮನಸ್ಸು ಚಂಚಲವಾಗಿರುವುದರಿಂದ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಬಹುದು. ಕೆಲವರು ಹಾಲಿ ಉದ್ಯೋಗವನ್ನು ಬಿಟ್ಟು ಕೃಷಿ ಅಥವಾ ರಿಯಲ್ ಎಸ್ಟೇಟ್ ಕಡೆಗೆ ಮುಖ ಮಾಡುವ ಆಲೋಚನೆ ಮಾಡುವರು. ಕಾನೂನಿನ ಚೌಕಟ್ಟಿನಲ್ಲಿರುವ ನಿಯಮಗಳಿಗೆ ಬದ್ಧರಾಗಿರುವುದು ಕ್ಷೇಮ. ನಕಾರಾತ್ಮಕ ಆಲೋಚನೆ ಮಾಡುವವರಿಂದ ದೂರವಿರಿ.
ವೃಶ್ಚಿಕ ರಾಶಿ: ಪ್ರೀತಿಪಾತ್ರರಿಗೆ ಅಥವಾ ಸಂಗಾತಿಗೆ ನೀವು ನೀಡುವ ಉಡುಗೊರೆ ಅವರಿಗೆ ಇಷ್ಟವಾಗದೇ ಹೋಗಬಹುದು. ಮಹಿಳೆಯರು ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಯೋಗವಿದೆ. ಇಂದಿನ ಸವಾಲುಗಳನ್ನು ಧೈರ್ಯದಿಂದ ಎದುರಿಸುವಿರಿ. ಸಣ್ಣ ಮೊತ್ತದ ಸಾಲವನ್ನೂ ಮಾಡದಿರುವುದು ಉತ್ತಮ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಅನಗತ್ಯ ವಿವಾದಗಳಿಗೆ ಹೋಗದೆ ನಿಮ್ಮ ಕೆಲಸವನ್ನಷ್ಟೇ ಶ್ರದ್ಧೆಯಿಂದ ಮಾಡಿ. ವಾಹನ ರಿಪೇರಿಗಾಗಿ ಅನಿರೀಕ್ಷಿತ ಖರ್ಚು ಎದುರಾಗಬಹುದು.
ಧನು ರಾಶಿ: ನಿಮ್ಮ ಏಳಿಗೆಯನ್ನು ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಬಹುದು. ಕಚೇರಿಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಪ್ರತಿಕೂಲವಾಗಿರುವ ಸಾಧ್ಯತೆ ಇದೆ, ಸಮಯ ನೋಡಿ ಹೆಜ್ಜೆ ಇಡಿ. ಹಣಕಾಸಿನ ನಿರ್ಧಾರಗಳನ್ನು ಕೈಗೊಳ್ಳುವಾಗ ನೂರು ಬಾರಿ ಯೋಚಿಸಿ. ತುರ್ತಾಗಿ ಆಗಬೇಕಾದ ಕೆಲಸಗಳನ್ನು ಮುಂದೂಡುವ ಸ್ವಭಾವ ಬೇಡ. ಒತ್ತಡದ ಸನ್ನಿವೇಶಗಳಿಂದ ದೂರ ಉಳಿಯುವುದು ಮಾನಸಿಕ ನೆಮ್ಮದಿಗೆ ಒಳ್ಳೆಯದು. ಇಂದು ಯಾರ ಮಾತನ್ನೂ ಸಂಪೂರ್ಣವಾಗಿ ನಂಬಬೇಡಿ.
ಮಕರ ರಾಶಿ: ಮನಸ್ಸಿನ ಗೊಂದಲ ನಿವಾರಣೆಗೆ ಧ್ಯಾನ ಅಥವಾ ದೈವ ಪ್ರಾರ್ಥನೆ ಮಾಡಿ. ನಿಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದರೂ ಅದು ಬಹಿರಂಗವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಮಂಗಳ ಕಾರ್ಯಗಳ ಆಯೋಜನೆ ನಡೆಯಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳ ವರ್ತನೆಯಿಂದ ಬೇಸತ್ತು ಉದ್ಯೋಗ ಬದಲಾವಣೆಗೆ ನಿರ್ಧರಿಸುವಿರಿ. ಸರ್ಕಾರಿ ಕೆಲಸಗಳಿಗೆ ಮಂಜೂರಾತಿ ಅಥವಾ ಒಪ್ಪಿಗೆ ಸಿಗುವ ಯೋಗವಿದೆ. ಕೆಲಸದ ಒತ್ತಡದಿಂದ ಉದ್ವೇಗಕ್ಕೆ ಒಳಗಾಗಬೇಡಿ.
ಕುಂಭ ರಾಶಿ: ಶಾಂತ ಮನಸ್ಸಿನಿಂದ ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಒಳಿತನ್ನು ಮಾಡುತ್ತವೆ. ಪಾಲುದಾರಿಕೆ ವ್ಯವಹಾರದಲ್ಲಿ ಕಣ್ಣುಮುಚ್ಚಿ ನಂಬುವುದು ಅಪಾಯಕಾರಿ. ವಿದೇಶಿ ಮೂಲದ ವ್ಯವಹಾರ ಅಥವಾ ಕೆಲಸಗಳಿಂದ ಲಾಭದ ನಿರೀಕ್ಷೆ ಇದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದ್ದು, ಬಹಳ ದಿನಗಳ ನಂತರ ಇಷ್ಟಮಿತ್ರರನ್ನು ಭೇಟಿಯಾಗುವ ಯೋಗವಿದೆ. ಸಂತಾನಾಪೇಕ್ಷಿಗಳಿಗೆ ಶುಭ ಸುದ್ದಿ ಸಿಗಬಹುದು. ಸಾಹಸಮಯ ಕೆಲಸಗಳಿಗೆ ಕೈಹಾಕುವ ಮುನ್ನ ಎಚ್ಚರಿಕೆ ಅಗತ್ಯ.
ಮೀನ ರಾಶಿ: ಸಹೋದರರ ನಡುವೆ ಇರುವ ಹಣಕಾಸಿನ ಕಲಹಗಳನ್ನು ಬಗೆಹರಿಸಿಕೊಳ್ಳಲು ಇದು ಸೂಕ್ತ ಸಮಯ. ಸಣ್ಣತನದ ಬುದ್ಧಿಯನ್ನು ಬಿಟ್ಟು ವಿಶಾಲವಾಗಿ ಯೋಚಿಸಿ. ಉನ್ನತ ವ್ಯಾಸಂಗಕ್ಕಾಗಿ ಪರಸ್ಥಳಕ್ಕೆ ತೆರಳುವ ಯೋಗವಿದೆ. ಅನಗತ್ಯ ಅಲೆದಾಟದಿಂದ ದೈಹಿಕ ಆಯಾಸ ಮತ್ತು ಕೋಪ ಹೆಚ್ಚಾಗಬಹುದು. ಬಂಧುಗಳ ತಪ್ಪು ಸಲಹೆಗಳು ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ, ಎಚ್ಚರವಿರಲಿ. ಪ್ರೇಮ ವಿಚಾರದಲ್ಲಿ ಆತುರದ ನಿರ್ಧಾರ ಬೇಡ, ಇದು ನಿಮ್ಮನ್ನು ಒಂಟಿಯಾಗಿಸಬಹುದು.
ದಿನದ ವಿಶೇಷ: ಇಂದು ಕಲಹಗಳಿಗೆ ಅವಕಾಶ ಕೊಡಬೇಡಿ, ಅಮೂಲ್ಯ ವಸ್ತುಗಳ ಖರೀದಿಗೆ ಇದು ಸೂಕ್ತ ಕಾಲ.