ಫೆ.9ರಂದು ಚಿತ್ರದುರ್ಗದಲ್ಲಿ ‘ಆರೋಗ್ಯ ಹಕ್ಕಿನ ಜಾಥಾ’: ಉಚಿತ ಔಷಧ, ಸಮಾನ ಚಿಕಿತ್ಸೆ ಒತ್ತಾಯ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 7:

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗು ಉತ್ತಮ ಗುಣಮಟ್ಟದ ಔಷಧ ಲಭ್ಯವಾಗಬೇಕು, ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡಬೇಕು, ಮತ್ತು ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿ ಆಗಬೇಕು ಎಂದು ಆಗ್ರಹಿಸಿ ಆರೋಗ್ಯ ಹಕ್ಕಿನ ಜಾಥಾ 2026 ನ್ನು ಚಿತ್ರದುರ್ಗದಲ್ಲಿ ಫೆ. 9 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮಿಳುನಾಡು, ಕೇರಳ ಮತ್ತು ರಾಜಸ್ತಾನದಲ್ಲಿ ಇರುವಂತೆಯೇ ಕರ್ನಾಟಕದಲ್ಲಿಯೂ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಉತ್ತಮ ಗುಣಮಟ್ಟದ ಔಷಧಿಗಳು ಸಿಗುವಮತಾಗಬೇಕು ಕಳೆದ ಹತ್ತಾರು ವರ್ಷಗಳಿಂದ ವಿವಿಧ ಜನಪರ ಸಂಘಟನೆಗಳು ಇದರ ಬಗ್ಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಲೆ ಬಂದಿವೆ. ತಮಿಳುನಾಡು, ಕೇರಳ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಜನರಿಗೆ ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ವ್ಯದ್ಯರು ಹೊರಗಡೆಯಿಂದ ಔಷಧಿ ಖರೀದಿಸಲಿ ಚೀಟಿಯನ್ನು ನೀಡುವುದಿಲ್ಲ ಆದರೆ ನಮ್ಮ ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಔಷಧಿಗಳನ್ನು ಹೊರಗಡೆ ತರಲು ಸೂಚಿಸುತ್ತಾರೆ ಎಂದರು.

ಕರ್ನಾಟಕದಲ್ಲಿ ಔಷಧಗಳು ಉಚಿತವಾಗಿ ಸಿಗುವಂತೆ ಮಾಡಲೆಂದು ಸರಕಾರವು ತಮಿಳುನಾಡಿನಲ್ಲಿ ಇರುವಂತೆಯೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್‍ನ್ನು 2003 ರಲ್ಲೇ ಸ್ಥಾಪಿಸಿದೆ ಈ ಕಂಪನಿಯು ಇಡೀ ರಾಜ್ಯಕ್ಕೆ ಉಚಿತವಾಗಿ ಔಷಧವನ್ನು ಹಂಚಲಿಕ್ಕಾಗಿ ಔಷಧ ಖರೀದಿ ಮಾಡುತ್ತದೆ. ಆದರೆ ಇದು ತಮಿಳುನಾಡಿನಲ್ಲಿ ತಮಿಳುನಾಡು ಮೆಡಿಕಲ್ ಸರ್ವಿಸ್ ಕೊರ್ಪೊರೇಶನ್ ಲಿಮಿಟೆಡ್ ಇರುವಂತೆ ಪಾರದರ್ಶಕವಾಗಿಲ್ಲ. ಭ್ರಷ್ಟಾಚಾರದಿಂದ ಕೂಡಿದೆ. ಈ ಕುರಿತು ಈಗಾಗಲೇ ನಮ್ಮ ಸಂಘಟನೆಯವರು ಕರ್ನಾಟಕ ರಾಜ್ಯದ ಆರೋಗ್ಯ ಮಂತ್ರಿಗಳನ್ನು ಅನೇಕ ಬಾರಿ ಭೇಟಿಯಾಗಿದ್ದಿದೆ. ಆದರೆ ಇನ್ನೂವರೆಗೆ ಉತ್ತಮ ಫಲಿತಾಂಶ ಸಿಕ್ಕಿಲ್ಲ ಎಂದಿದ್ದಾರೆ.

ಈ ಕೂಡಲೇ ಸರ್ಕಾರಿ ಆಸ್ಪತ್ರೆ ಖಾಸಗೀಕರಣ ಮಾಡುವ ಯೋಜನೆ ಕೈಬಿಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆ ಖಾಸಗಿಯವರಿಗೆ ಹಸ್ತಾಂತರ ಮಾಡಬಾರದು. ಇದರ ಬದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟ ಔಷಧಗಳು ಉಚಿತವಾಗಿ ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ಯಾವುದೇ ಕಾರಣಕ್ಕೂ ಔಷಧಗಳನ್ನು ಹೊರಗಡೆ ಖರೀದಿಸಲು ಚೀಟಿಯನ್ನು ಬರೆದು ಕೊಡಬಾರದು ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆಯನ್ನು ಜಾರಿಗೆ ತರಬೇಕು: ನಮಗೆ ಆರೋಗ್ಯ ರಕ್ಷಣೆಯನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ಕಾನೂನು ಬೇಕಾಗಿದೆ. ಯಾವುದೇ ಸರ್ಕಾರವು ಹಿಂತೆಗೆದುಕೊಳ್ಳಬಹುದಾದ “ಯೋಜನೆ”ಯಲ್ಲ. ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಎಲ್ಲಾ ಲಿಂಗ, ವರ್ಗ, ಜಾತಿಯವರ ಹಕ್ಕಾಗಬೇಕು – ಬಡವರಿಗೆ, ಎಲ್ಲಾ ಕಾರ್ಮಿಕರಿಗೆ, ದಲಿತ ಸಮೂದಾಯಗಳಿಗೆ, ಆದಿವಾಸಿ ಸಮುದಾಯಗಳಿಗೆ, ಸ್ಲಂ ನಿವಾಸಿಗಳಿಗೆ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಇತರ ಶೋಷಿತ ಸಮುದಾಯಗಳಿಗೆ ಇದಕ್ಕಾಗಿ ಹಲವಾರು ಸಂಘಟನೆಗಳ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ, ಎಲ್ಲಾ ಜಿಲ್ಲೆಗಳಲ್ಲಿ ಜಾಥಾ ನಡೆಯುತ್ತಿದೆ ಎಂದರು.

ವಿಶ್ವಸಾಗರ್ ಮಾತನಾಡಿ, ಪ್ರತಿ ಸಲವೂ ಚಿಕಿತ್ಸೆಯ ಖರ್ಚಿನಲ್ಲಿ 60% ರಿಂದ 70% ಖರ್ಚು, ಔಷಧಗಳ ಮೇಲೆ ಇರುತ್ತದೆ. ಈ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಸಿಗಬೇಕೆನ್ನುವುದೇ ನಮ್ಮ ಮೊದಲನೆಯ ಬೇಡಿಕೆಯಾಗಿದೆ. ಎಲ್ಲಾ ಸರ್ಕಾರಿ ವ್ಯವಸ್ಥೆಗಳಲ್ಲಿ ಪ್ರತಿಯೊಬ್ಬರಿಗೂ ಔಷಧಗಳು ಉಚಿತವಾಗಿ ಲಭ್ಯವಾಗುತ್ತಿರಬೇಕು. ಸರ್ಕಾರಿ ಆಸ್ಪತ್ರೆಯ ವೈದ್ಯರು ಯಾವುದೇ ಕಾರಣಕ್ಕೂ ಔಷಧಗಳನ್ನು ಹೊರಗಡೆ ಖರೀದಿಸಲು ಚೀಟಿಯನ್ನು ಬರೆದು ಕೊಡಬಾರದು. ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಔಷಧಗಳ ಗುಣಮಟ್ಟ ಉತ್ತಮವಾಗಿ ಇರಬೇಕು ಎನ್ನುವ ಜವಾಬ್ದಾರಿಯನ್ನೂ ಸರ್ಕಾರ ವಹಿಸಬೇಕು. ನಮ್ಮ ರಾಜ್ಯದ ಜಿಲ್ಲಾ ಆಸ್ಪತ್ರೆಗಳ ಹಾಗೂ ಇತರ ವ್ಯವಸ್ಥೆಗಳ ಎದುರುಗಡೆ ಸಾಲು ಸಾಲಾಗಿ ಇರುವ ಖಾಸಗಿ ಔಷಧ ಅಂಗಡಿಗಳೇ ಇದಕ್ಕೆ ಸಾಕ್ಷಿ!ಯಾಗಿದೆ. ನಮ್ಮ ದೇಶದಲ್ಲಿ ರಾಜಸ್ಥಾನ ರಾಜ್ಯ ಮಾತ್ರ ಇದನ್ನು ಜಾರಿಗೆ ತಂದಿದೆ. ನೇಪಾಳ ಹಾಗೂ ಥೈಲ್ಯಾಂಡ್ ಮುಂತಾದ ನಮ್ಮ ಸುತ್ತಲಿನ ದೇಶಗಳಲ್ಲಿ ಚಿಕಿತ್ಸೆಯು ಸಂಪೂರ್ಣ ಉಚಿತವಾಗಿ ಸಿಗುತ್ತದೆ ಎಂದರು.

ಸರ್ಕಾರ ರಾಜ್ಯದ 8 ಜಿಲ್ಲಾ ಆಸ್ಪತ್ರೆಗಳನ್ನು ಮಾದರಿಯಲ್ಲಿ ಖಾಸಗೀಕರಣ ಮಾಡಲಿಕ್ಕೆ ಮುಂದಾಗಿದ್ದು ಇದು ಜನ ವಿರೋಧಿ, ಸಂವಿಧಾನ ವಿರೋಧಿ. ಈ ರೀತಿ ಖಾಸಗಿಯವರಿಗೆ ಕೊಟ್ಟರೆ, ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವ ಬಡ ಜನರ ಆರೋಗ್ಯವನ್ನು ಕಾಪಾಡುವ ಬದಲು ಅವರನ್ನು ಕೊಂದಂತೆ ಆಗುತ್ತದೆ. ಮತ್ತು ಜನರಿಗಾಗಿ ಸೂಕ್ತ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಚಿಕಿತ್ಸೆ ನಿರಾಕರಣೆ, ಚಿಕಿತ್ಸೆ ದುಬಾರಿ ಆಗುವುದಕ್ಕೆ ದಾರಿ ಮಾಡಿಕೊಡುತ್ತದೆ. ಖಾಸಗಿ ವಲಯದಲ್ಲಿ ಆಸ್ಪತ್ರೆ ಶುಲ್ಕಗಳಿಗೆ ಯಾವುದೇ ಮಿತಿ ಇಲ್ಲದ ಕಾರಣ, ರೋಗಿಗಳು ಶೋಷಣೆಗೆ ಒಳಗಾಗುತ್ತಾರೆ. ಇದು ಆರೋಗ್ಯ ಸೇವೆಯನ್ನು ದುಬಾರಿಯಾಗಿ ಮಾಡುವುದಲ್ಲದೆ ಜನರನ್ನು ಬಡತನ ಮತ್ತು ಸಾಲದ ಕಡೆಗೆ ತಳ್ಳುತ್ತದೆ. ರೋಗ ಬಂತೆಂದರೆ ಒಂದೊಂದು ಕುಟುಂಬವೂ ಶೋಷಣೆಗೊಳಗಾಗುತ್ತದೆ. ಆಸ್ಪತ್ರೆಗಳಲ್ಲಿ ಅತಿಯಾದ ಶುಲ್ಕ ಹೇರುವುದು ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಎಲ್ಲಾ ಆಸ್ಪತ್ರೆ ಶುಲ್ಕಗಳ ಮೇಲೆ ಮಿತಿಯನ್ನು ಹಾಕುವ ಸಾಂವಿಧಾನಿಕ ಕರ್ತವ್ಯ ರಾಜ್ಯ ಸರ್ಕಾರದ್ದಾಗಿದೆ ಎಂದರು.

ಅರುಣ್ ಸಾಗರ್ ಮಾತನಾಡಿ ಫೆ. 9 ರಂದು ನಗರದ ಡಾ,ಬಿ,ಆರ್,ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಉಚಿತ ಆರೋಗ್ಯಕ್ಕಾಗಿ ಆರೋಗ್ಯ ಹಕ್ಕಿನ ಜಾಥಾ ನಡೆಯಲಿದ್ದು, ಇಲ್ಲಿದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದರು.

Leave a Reply

Your email address will not be published. Required fields are marked *