ಕಾರ್ಮಿಕ-ರೈತ ವಿರೋಧಿ ಕಾಯಿದೆಗಳ ವಿರೋಧ: ಚಿತ್ರದುರ್ಗದಲ್ಲಿ ಸಂಘಟನೆಗಳ ಭಾರೀ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 12

ಜನ, ಕಾರ್ಮಿಕ, ರೈತ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಗುರುವಾರ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆಯನ್ನು ಮಾಡುವುದರ ಮೂಲಕ ಸರ್ಕಾರವನ್ನು ಆಗ್ರಹಿಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿದ ಪ್ರತಿಭಟನೆ ನಡೆಸಿ ಓನಕೆ ಒಬವ್ವ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಾಣ ಮಾಡಿ ಪ್ರತಿಭಟನೆಯನ್ನು ನಡೆಸಲಾಯಿತು. ಹೊಸದಾಗಿ ಜಾರಿಗೆ ಬಂದಿರುವ ಕಾರ್ಮಿಕ ಕಾನೂನುಗಳು ಕಾರ್ಮಿಕರ ಪರವಾಗಿರದೇ ಬಂಡವಾಳ ಷಾಹಿಗಳ ಪರವಾಗಿದೆ. ಕಾರ್ಮಿಕರ ಪರವಾಗಿ ಇರದ ನೂತನ ಲೇಬರ್ ಕೋಡ್‍ಗಳು ಅಕ್ಷರಶಃ ಕಾರ್ಮಿಕರ ಪಾಲಿನ ಮರಣ ಶಾಸನವಾಗಿದೆ. ಸರ್ಕಾರದ ವಿರುದ್ಧ ದೇಶದ ಕೋಟ್ಯಂತರ ರೈತ ಕಾರ್ಮಿಕರು ಸಿಡಿದೆದ್ದು ಈ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಾರ್ವತ್ರಿಕ ಮುಷ್ಕರ ಕೇವಲ ಕಾರ್ಮಿಕರ, ರೈತರ, ಕೂಲಿಕಾರರ ದುಡಿಯುವ ಜನರ ಹೋರಾಟವಷ್ಟೇ ಅಲ್ಲ. ಇದು ಕೆಲಸದ ಹಕ್ಕು, ಬದುಕಿನ ಭದ್ರತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಗಾಗಿ ನಡೆಯುತ್ತಿರುವ ಸಾರ್ವತ್ರಿಕ ಮುಷ್ಕರವಾಗಿದೆ.

ಸಂಯುಕ್ತ ಹೋರಾಟ ಸಮಿತಿಯ ಜೆ.ಯಾದವರೆಡ್ಡಿ ಮಾತನಾಡಿ, ನೂತನವಾಗಿ ಜಾರಿಗೆ ತಂದಿರುವ ಮಸೂದೆಗಳನ್ನು ಕಾರ್ಮಿಕ ವಿರೋಧಿ ಲೇಬರ್ ಕೋಡ್‍ಗಳು ಹಾಗೂ ಜನ ವಿರೋಧಿ ವಾಪಾಸ್ ಪಡೆಯುವಂತೆ ಆಗ್ರಹಿಸಿ ಕಾರ್ಮಿಕರ ಉದ್ಯೋಗ ಮತ್ತು ಉದ್ಯೋಗ ಭದ್ರತೆಯ ` ಮೇಲೆ ತಿದ್ದುಪಡಿಯ ನೆಪದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ದಾಳಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕಿಂಗ್ ವಲಯದ ಪ್ರಮುಖ ನೌಕರರ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಹಾಗೂ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ.ಅನೇಕ ಮುಖಂಡರುಗಳ ತ್ಯಾಗ ಬಲಿದಾನಗಳಿಂದ ಜಾರಿಗೆ ಬಂದ ಕಾನೂನುಗಳನ್ನು ಕೇಂದ್ರ ಸರ್ಕಾರ ಬುಡಮೇಲು ಮಾಡಲು ಹೊರಟಿರುವು ದರಿಂದ ಕಾರ್ಮಿಕರಿಗೆ ಸಾಮಾಜಿಕ ಹಾಗೂ ವೇತನ ಭದ್ರತೆಯಿಲ್ಲ ದಂತಾಗಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ವಿಬಿಜಿರಾಮ್‍ಜಿ ಎಂದು ಬದಲಾಯಿಸಿರುವುದನ್ನು ಕೂಡಲೆ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದ ಅವರು. ನರೇಗಾ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲಿ ನೂರು ದಿನಗಳ ಉದ್ಯೋಗ ನೀಡಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ. ರೈತರು ಬೀಜ ಉತ್ಪಾದನೆ ಮಾಡುವಂತಿಲ್ಲ. ಕಂಪನಿಗಳಲ್ಲಿಯೇ ಖರೀಧಿಸಬೇಕೆಂಬ ನಿಯಮ ಹೇರಿರುವುದರಿಂದ ಕಾರ್ಮಿಕರು, ರೈತರ ಬದುಕು ನಾಶವಾಗುತ್ತಿರುವುದನ್ನು ಖಂಡಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.

ಸಿಪಿಐ. ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡುತ್ತ ವಿಕಸಿತ ಭಾರತವೆಂದು ಹೆಮ್ಮೆಯಿಂದ ಬೀಗುತ್ತಿರುವ ಕೇಂದ್ರ ಸರ್ಕಾರ ರೈತರು, ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ನಿರುದ್ಯೋಗ ಜಾಸ್ತಿಯಾಗಿದೆ. ಧರ್ಮ, ದೇವರ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ. ಮೊದಲು ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಒತ್ತು ಕೊಡಲಿ. ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಕಾರವೆತ್ತದೆ ಮೌನವಹಿಸಿರುವುದು ನೋವಿನ ಸಂಗತಿ. ಭದ್ರಾ ಮೇಲ್ದಂಡೆ ಯೋಜನೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದರು. ರಾಜ್ಯದ ಸಂಸದರುಗಳು ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲವೆಂದು ಕಿಡಿ ಕಾರಿದರು.

ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ ಕಾರ್ಪೊರೇಟ್ ಕಂಪನಿಗಳು ಹಾಗೂ ಉದ್ಯಮಿಗಳ ಪರವಾಗಿರುವ ಆಳುವ ಸರ್ಕಾರಗಳು ಕಾರ್ಮಿಕರು, ರೈತರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿ ರುವುದನ್ನು ಖಂಡಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತಿದೆ. ಭದ್ರಾಮೇಲ್ದಂಡೆ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಿಮೆ ಕೈಸೇರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಮಾತನಾಡುತ್ತ ಅಮೇರಿಕಾ ದಲ್ಲಿ ಬೆಳೆಯುವ ವಸ್ತುಗಳನ್ನು ನಮ್ಮ ದೇಶಕ್ಕೆ ತರಿಸಿಕೊಳ್ಳುವ ಒಪ್ಪಂದವನ್ನು ಪ್ರಧಾನಿ ಮೋದಿರವರು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ರೈತರಿಗೆ ತೊಂದರೆಯಾಗುತ್ತದೆ. ಭದ್ರಾಮೇಲ್ದಂಡೆ ಯೋಜನೆಗೆ ಕೂಡಲೆ ಹಣ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ರೈತ ಸಂಘದ ರಾಜ್ಯ ವಲಯ ಉಪಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಮಾತನಾಡುತ್ತ ರೈತರು ಬೆಳೆಯುವ ಬೆಳೆಗಳನ್ನು ಸರ್ಕಾರಗಳು ಖರೀಧಿ ಮಾಡದ ಕಾರಣ ಅನ್ನದಾತ ರೈತ ಸಂಕಷ್ಟ ಅನುಭವಿಸುವಂತಾಗಿದೆ. ರೈತರ ಫಲವತ್ತಾದ ಕೃಷಿ ಭೂಮಿಗಳನ್ನು ಬಲವಂತವಾಗಿ ಕಸಿದುಕೊಳ್ಳಬಾರದು. ಕೃಷಿ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕೆಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಟಿ.ಶಫಿವುಲ್ಲಾ ಸತ್ಯಕೀರ್ತಿ, ರವಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *