ಪಿಯುಸಿ ವಿದ್ಯಾರ್ಥಿಗಳ ‘ಲಾಂಗ್ ಡ್ರೈವ್’ ಹುಚ್ಚಿಗೆ 7 ಬಲಿ: ಹೊಸಕೋಟೆಯಲ್ಲಿ ಭೀಕರ ಸರಣಿ ಅಪಘಾತ.

ಹೊಸಕೋಟೆ: ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಬೆಂಗಳೂರಿನ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿಗಳ ಅತಿವೇಗದ ‘ಲಾಂಗ್ ಡ್ರೈವ್’ ಹುಚ್ಚೇ ಈ ಭೀಕರ ದುರಂತಕ್ಕೆ ಕಾರಣ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರಿನ ಕೊತ್ತನೂರು ಮೂಲದ ಆರು ಮಂದಿ ಪಿಯುಸಿ ವಿದ್ಯಾರ್ಥಿಗಳು ಎಕ್ಸ್​ಯುವಿ 700 (XUV 700) ಕಾರಿನಲ್ಲಿ ನೂತನ ಹೆದ್ದಾರಿಯಲ್ಲಿ ಜಾಲಿ ರೈಡ್‌ಗೆಂದು ಬಂದಿದ್ದರು. ಈ ವೇಳೆ ಕಾರನ್ನು ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಈ ಸರಣಿ ಅಪಘಾತಕ್ಕೆ ದಾರಿಯಾಗಿದೆ.

ಅಪಘಾತ ಸಂಭವಿಸಿದ್ದು ಹೇಗೆ? ಅತಿವೇಗವಾಗಿ ಬಂದ ಕಾರು ಮೊದಲು ಸ್ಥಳೀಯ ನಿವಾಸಿ ಗಗನ್ ಎಂಬವರ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ಮುಂದೆ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಕ್ಯಾಂಟರ್ ವಾಹನದ ಆಕ್ಸಲ್ ಕಟ್ ಆಗಿ ಸರ್ವೀಸ್ ರಸ್ತೆಗೆ ಉರುಳಿದೆ. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಮತ್ತೊಂದು ಬ್ರೆಝಾ (Brezza) ಕಾರು ಕೆಳಗೆ ಬಿದ್ದಿದ್ದ ಆಕ್ಸಲ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬ್ರೆಝಾ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

7 ಮಂದಿ ದುರ್ಮರಣ ಈ ಭೀಕರ ಸರಣಿ ಅಪಘಾತದಲ್ಲಿ ಬೈಕ್ ಸವಾರ ಗಗನ್ ಹಾಗೂ ಕಾರಿನಲ್ಲಿದ್ದ ಆರು ಮಂದಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​​ಪಿ ಚಂದ್ರಕಾಂತ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರ ಆಕ್ರೋಶ ಅಪಘಾತಕ್ಕೆ ಪ್ರಮುಖ ಕಾರಣ ವಿದ್ಯಾರ್ಥಿಗಳ ಅತಿವೇಗದ ಚಾಲನೆಯೇ ಆಗಿದ್ದರೂ, ಹೆದ್ದಾರಿಯ ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕ ವಿನ್ಯಾಸದ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಸ್ತೃತ ತನಿಖೆ ಮುಂದುವರಿಸಿದ್ದಾರೆ.

Loading

Leave a Reply

Your email address will not be published. Required fields are marked *