ನಮ್ಮ ದೇಹದ ನರಗಳ ಆರೋಗ್ಯ, ಶಕ್ತಿ ಉತ್ಪಾದನೆ ಮತ್ತು ಕೆಂಪು ರಕ್ತ ಕಣಗಳ ರಚನೆಗೆ ವಿಟಮಿನ್ ಬಿ-12 (Vitamin B-12) ಅತ್ಯಂತ ಅವಶ್ಯಕ. ಇದು ಜೀವಕೋಶಗಳಲ್ಲಿನ ಡಿಎನ್‌ಎ ಉತ್ಪಾದನೆಗೂ ನೆರವಾಗುತ್ತದೆ. ವಿಟಮಿನ್ ಬಿ-12 ಕೊರತೆಯಿಂದ ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆ (Megaloblastic anemia) ಉಂಟಾಗಿ, ತೀವ್ರ ಆಯಾಸ ಎದುರಾಗಬಹುದು.
ಆದರೆ, ನಮ್ಮ ದೇಹದಲ್ಲಿ ಈ ವಿಟಮಿನ್ ಮಟ್ಟ ಎಷ್ಟಿರಬೇಕು? ವಯಸ್ಸಿಗೆ ತಕ್ಕಂತೆ ಇದರ ಅಗತ್ಯತೆ ಹೇಗೆ ಬದಲಾಗುತ್ತದೆ? ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.
ವಿಟಮಿನ್ ಬಿ-12 ಮಟ್ಟವನ್ನು ಅಳೆಯುವುದು ಹೇಗೆ?
ರಕ್ತದಲ್ಲಿ ಇದರ ಮಟ್ಟವನ್ನು ಪ್ರತಿ ಮಿಲಿಲೀಟರ್‌ಗೆ ಪಿಕೋಗ್ರಾಮ್‌ಗಳಲ್ಲಿ (pg/mL) ಅಳೆಯಲಾಗುತ್ತದೆ.
- ಸಾಮಾನ್ಯ ಶ್ರೇಣಿ (Normal Range): 200-900 pg/mL
- ಗಡಿರೇಖೆ (Borderline): 200-300 pg/mL
- ಕೊರತೆ (Deficiency): 200 pg/mL ಗಿಂತ ಕಡಿಮೆ
ವಯಸ್ಸಿಗೆ ಅನುಗುಣವಾಗಿ ವಿಟಮಿನ್ ಬಿ-12 ಮಟ್ಟ ಎಷ್ಟಿರಬೇಕು?
- ಶಿಶುಗಳು ಮತ್ತು ಮಕ್ಕಳು (0-12 ವರ್ಷ): ಮೆದುಳು ಮತ್ತು ದೈಹಿಕ ಬೆಳವಣಿಗೆಗೆ 250-550 pg/mL ಅಗತ್ಯ. ಹಾಲುಣಿಸುವ ತಾಯಂದಿರು ತಮ್ಮ ದೇಹದಲ್ಲಿ ಬಿ-12 ಮಟ್ಟ ಸರಿಯಾಗಿರುವಂತೆ ಎಚ್ಚರವಹಿಸಬೇಕು.
- ಹದಿಹರೆಯದವರು (13-19 ವರ್ಷ): ಈ ವಯಸ್ಸಿನಲ್ಲಿ ಶಕ್ತಿ ಮತ್ತು ಅರಿವಿನ ಬೆಳವಣಿಗೆಗೆ 300 ರಿಂದ 550 pg/mL ನಡುವೆ ಇರಬೇಕು.
- ವಯಸ್ಕರು (20-59 ವರ್ಷ): ಚಯಾಪಚಯ ಕ್ರಿಯೆ ಮತ್ತು ನರಗಳ ಆರೋಗ್ಯ ಕಾಪಾಡಲು 200-900 pg/mL ಅಗತ್ಯವಿರುತ್ತದೆ. ಸಸ್ಯಾಹಾರಿಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
- ಹಿರಿಯ ನಾಗರಿಕರು (60+ ವರ್ಷ): ವಯಸ್ಸಾದಂತೆ ದೇಹದಲ್ಲಿ ಪೋಷಕಾಂಶ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವುದರಿಂದ 300-550 pg/mL ಮಟ್ಟ ಕಾಯ್ದುಕೊಳ್ಳುವುದು ಸೂಕ್ತ. ತೀವ್ರ ಕೊರತೆಯಿದ್ದರೆ ವೈದ್ಯರ ಸಲಹೆ ಮೇರೆಗೆ ಚುಚ್ಚುಮದ್ದು (Injection) ಪಡೆಯಬೇಕಾಗುತ್ತದೆ.
ಯಾವಾಗ ಪರೀಕ್ಷೆ ಮಾಡಿಸಬೇಕು? (ಕೊರತೆಯ ಲಕ್ಷಣಗಳು)
ಕೆಳಗಿನ ಲಕ್ಷಣಗಳು ಕಂಡುಬಂದರೆ ವಿಟಮಿನ್ ಬಿ-12 ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು:
- ನಿರಂತರ ಆಯಾಸ ಮತ್ತು ಶಕ್ತಿಯ ಕೊರತೆ.
- ಕೈ, ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ.
- ನೆನಪಿನ ಶಕ್ತಿ ಕುಂದುವುದು ಅಥವಾ ಗೊಂದಲ ಉಂಟಾಗುವುದು.
- ಚರ್ಮ ಹಳದಿಯಾಗುವುದು (ಕಾಮಾಲೆ ಲಕ್ಷಣ).
ಹೆಚ್ಚಿನ ನಿಗಾ ವಹಿಸಬೇಕಾದವರು: ಗರ್ಭಿಣಿಯರು, ಹಾಲುಣಿಸುವ ತಾಯಂದಿರು (ವಿಶೇಷವಾಗಿ ಸಸ್ಯಾಹಾರಿಗಳು), ಜೀರ್ಣಕಾರಿ ಸಮಸ್ಯೆ (IBS) ಹೊಂದಿರುವವರು ಮತ್ತು 60 ವರ್ಷ ಮೇಲ್ಪಟ್ಟವರು.
ಪರೀಕ್ಷೆ ಎಷ್ಟು ಬಾರಿ ಮಾಡಿಸಬೇಕು?
- ಸಾಮಾನ್ಯವಾಗಿ: ರೋಗಲಕ್ಷಣಗಳಿಲ್ಲದಿದ್ದರೂ ಸಸ್ಯಾಹಾರಿಗಳು ಮತ್ತು ವೃದ್ಧರು ಪ್ರತಿ 1-2 ವರ್ಷಗಳಿಗೊಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ.
- ಹೆಚ್ಚಿನ ಅಪಾಯದಲ್ಲಿರುವವರು: ಆಹಾರ ಮತ್ತು ಜೀರ್ಣಕ್ರಿಯೆ ಸಮಸ್ಯೆ ಇರುವವರು ಪ್ರತಿ 6-12 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಬೇಕು.
- ಚಿಕಿತ್ಸೆಯ ನಂತರ: ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದ 3-6 ತಿಂಗಳ ನಂತರ, ಚಿಕಿತ್ಸೆ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಯಲು ಮರುಪರೀಕ್ಷೆ ಮಾಡಿಸಬೇಕು.
ವಿಟಮಿನ್ ಬಿ-12 ಮಟ್ಟವನ್ನು ಹೆಚ್ಚಿಸುವ ವಿಧಾನಗಳು:
ರಕ್ತ ಪರೀಕ್ಷೆಯಲ್ಲಿ ಕೊರತೆ ಕಂಡುಬಂದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
- ಆಹಾರ ಕ್ರಮ: ಮಾಂಸಾಹಾರಿಗಳು ಮೊಟ್ಟೆ, ಮೀನು, ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸಬೇಕು.
- ಸಸ್ಯಾಹಾರಿಗಳಿಗೆ: ಬಲವರ್ಧಿತ ಧಾನ್ಯಗಳು (Fortified cereals) ಮತ್ತು ಸಸ್ಯ ಆಧಾರಿತ ಹಾಲು ಉತ್ತಮ ಆಯ್ಕೆ.
- ಪೂರಕಗಳು (Supplements): ಸೌಮ್ಯ ಕೊರತೆಗೆ ವೈದ್ಯರ ಸಲಹೆಯಂತೆ ಮಾತ್ರೆಗಳನ್ನು (Oral/Sublingual) ತೆಗೆದುಕೊಳ್ಳಬಹುದು. ತೀವ್ರ ಕೊರತೆಯಿದ್ದರೆ ಬಿ-12 ಚುಚ್ಚುಮದ್ದು ಅತ್ಯಗತ್ಯ.