ಬೆಂಗಳೂರು: ಯುದ್ಧದ ಕಾರ್ಮೋಡ ಕವಿದಿರುವ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ತ್ವರಿತ ಪ್ರತಿಕ್ರಿಯೆ ಘಟಕದೊಂದಿಗೆ (Rapid Response Cell) ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ನಿರಂತರ ಸಂಪರ್ಕದಲ್ಲಿದ್ದು, ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ವಿಮಾನಯಾನ ಸಂಪೂರ್ಣ ಸ್ಥಗಿತ: ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಅನೇಕ ದೇಶಗಳು ‘ನೋಟಾಮ್’ (NOTAM – Notice to Air Missions) ಜಾರಿಗೊಳಿಸಿವೆ. ನಾಗರಿಕ ವಿಮಾನಯಾನ ಸಚಿವಾಲಯದ ತಾಜಾ ಮಾರ್ಗಸೂಚಿಯ ಅನ್ವಯ, ಮಾರ್ಚ್ 2ರವರೆಗೆ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾದ ಕೆಲವು ಭಾಗಗಳು, ಜೋರ್ಡಾನ್, ಇರಾಕ್, ಬಹ್ರೇನ್, ಓಮನ್, ಕುವೈತ್, ಕತಾರ್ ಹಾಗೂ ಯುಎಇ ಮೇಲಿನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
24×7 ಕಾರ್ಯನಿರ್ವಹಿಸುತ್ತಿರುವ ತುರ್ತು ಕೇಂದ್ರಗಳು: ವಿಮಾನಗಳ ಹಾರಾಟ ರದ್ದಾಗಿರುವುದರಿಂದ ಯುಎಇ ಸೇರಿದಂತೆ ವಿವಿಧ ಮಧ್ಯಪ್ರಾಚ್ಯ ದೇಶಗಳಲ್ಲಿ ಅಪಾರ ಸಂಖ್ಯೆಯ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ನೇರ ನಿರ್ದೇಶನದ ಮೇರೆಗೆ, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಹಾಗೂ ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು (DEOCs) ದಿನದ 24 ಗಂಟೆಯೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ದೆಹಲಿಯಲ್ಲಿರುವ ಕರ್ನಾಟಕ ಭವನದ ಅಧಿಕಾರಿಗಳು ಕೇಂದ್ರದೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದ್ದಾರೆ.
ಸಂಕಷ್ಟದಲ್ಲಿರುವವರಿಗೆ ಮಾರ್ಗಸೂಚಿ: ವಿದೇಶದಲ್ಲಿ ಸಿಲುಕಿರುವ ಕನ್ನಡಿಗರು ಆಯಾ ದೇಶಗಳ ಸ್ಥಳೀಯ ಸರ್ಕಾರಗಳು ಹಾಗೂ ಭಾರತೀಯ ರಾಯಭಾರ ಕಚೇರಿ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ. ಸಹಾಯದ ಅಗತ್ಯವಿರುವವರು ‘ಸಾರಥಿ ಸಹಾಯತಾ‘ (Sarthi Sahayata) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಸಹಾಯವಾಣಿ ಸಂಖ್ಯೆಗಳನ್ನು ಎಲ್ಲಾ ಜಿಲ್ಲಾ ಕೇಂದ್ರಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಕೇಂದ್ರಕ್ಕೆ ರಾಜ್ಯ ಸರ್ಕಾರದ ಪತ್ರ: ಇದೇ ವೇಳೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರಿಗೆ ಪತ್ರ ಬರೆದಿದ್ದಾರೆ. ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸಕ್ಕಾಗಿ ತೆರಳಿರುವ ಕನ್ನಡಿಗರ ಸುರಕ್ಷತೆಗೆ ಆದ್ಯತೆ ನೀಡುವಂತೆ ಹಾಗೂ ಅಗತ್ಯವಿದ್ದರೆ ವಿಶೇಷ ವಿಮಾನಗಳ ಮೂಲಕ ಅವರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಟಿಕೆಟ್ ಮರುಹೊಂದಿಕೆಗೆ ಶುಲ್ಕ ವಿನಾಯಿತಿಗೆ ಆಗ್ರಹ: ವಿಮಾನಯಾನ ಇಲಾಖೆ ಕಾರ್ಯದರ್ಶಿಗೂ ಪತ್ರ ಬರೆದಿರುವ ರಾಜ್ಯ ಸರ್ಕಾರ, ವಿಮಾನ ರದ್ದತಿಯಿಂದಾಗಿ ಪರದಾಡುತ್ತಿರುವ ದೃಢೀಕೃತ ರಿಟರ್ನ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಉಚಿತ ಊಟ ಮತ್ತು ವಸತಿ ಕಲ್ಪಿಸುವಂತೆ ಮನವಿ ಮಾಡಿದೆ. ಅಲ್ಲದೆ, ಟಿಕೆಟ್ ಮರುಹೊಂದಿಕೆಗೆ (Rescheduling) ವಿಧಿಸುವ ಹೆಚ್ಚುವರಿ ಶುಲ್ಕವನ್ನು ರದ್ದುಪಡಿಸಬೇಕು ಹಾಗೂ ಪರಿಸ್ಥಿತಿ ತಿಳಿಯಾದ ತಕ್ಷಣ ಅವರನ್ನು ವಾಪಸ್ ಕರೆತರಲು ಅಗತ್ಯ ವಿಮಾನಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.