ಸಿದ್ದರಾಮಯ್ಯ ಬಜೆಟ್ ರಾಜ್ಯವನ್ನು ಸಾಲದ ಶೂಲಕ್ಕೇರಿಸುವ ‘ಅಭಿವೃದ್ಧಿ ಶೂನ್ಯ’ ಬಜೆಟ್: ಬಿಜೆಪಿ ವಕ್ತಾರ ನಾಗರಾಜ್ ಬೇದ್ರೆ ಟೀಕೆ

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ.07

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ರಾಜ್ಯವನ್ನು ಸಾಲದ ಶೂಲಕ್ಕೇರಿಸಿರುವ ಜೊತೆಗೆ ಈಗಾಗಲೇ ವಿಧಿಸಿರುವ ದುಬಾರಿ ತೆರಿಗೆಗಳ ಮೂಲಕ ಗಾಯದ ಮೇಲೆ ಬರೆ ಎಳೆದ ಅಭಿವೃದ್ಧಿ ಶೂನ್ಯ ಬಜೆಟ್ ಆಗಿದೆ ಚಿತ್ರದುರ್ಗ ಭಾರತೀಯ ಜನತಾ ಪಾರ್ಟಿಯ ವಕ್ತಾರ ನಾಗರಾಜ್ ಬೇದ್ರೇ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಬಜೆಟ್ ಗಾತ್ರ ದೊಡ್ಡದಾದರೂ ಹಣಕಾಸಿನ ಸ್ಥಿರತೆ ಇಲ್ಲ ಒಟ್ಟು ಬಜೆಟ್ ಸ್ವೀಕೃತಿ 4,47,240 ಕೋಟಿ ಎಂದು ಹೇಳಿದರೂ ಅದರ ಬಹುಪಾಲು ಸಾಲದಿಂದ ಕೂಡಿದೆ. 2026-27ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲ8.24.389 ಕೋಟಿ ಆಗಲಿದೆ. ಬಜೆಟ್‍ನಲ್ಲಿ 97,449 ಕೋಟಿ ವಿತ್ತೀಯ ಕೊರತೆ ಇದೆ. ರಾಜ್ಯದ ರಾಜಸ್ವ ಸ್ವೀಕೃತಿ 2.77,402 ಕೋಟಿ ಮಾತ್ರ. ಖರ್ಚುಗಳನ್ನು ಸಾಗಿ ಸಲು ಸರ್ಕಾರ ಸಾಲಕ್ಕೆ ಅವಲಂಬಿತವಾಗಿದೆ. ಯುವನಿಧಿ ಯೋಜನೆಯಲ್ಲಿ 3,08,267 ಜನರಿಗೆ ?913 ಕೋಟಿ ಭತ್ಯೆ ನೀಡಲಾಗಿದೆ. ಉದ್ಯೋಗ ಸೃಷ್ಟಿಸುವ ಬದಲು ಭತ್ಯೆ ನೀಡುವುದು ಮಾತ್ರವಾಗಿದೆ. 2025-26ರಲ್ಲಿ ಅಬಕಾರಿ ತೆರಿಗೆಯಿಂದ 36,492 ಕೋಟಿ ಸಂಗ್ರಹವಾಗಿದೆ. ಸರ್ಕಾರ ಮದ್ಯದ ಮೇಲೆ ಅವಲಂಬಿತ ವಾಗಿದೆ ಜನರ ಮೇಲೆ ತೆರಿಗೆ ಭಾರ ಹೆಚ್ಚುತ್ತಿದೆ ಎಂದು ದೂರಿದರು.  

ಮೋಟಾರು ವಾಹನ ತೆರಿಗೆಯಿಂದ 11,630 ಕೋಟಿ ಸಂಗ್ರಹ. ಜನರ ಮೇಲೆ ನಿರಂತರ ತೆರಿಗೆ ಒತ್ತಡ. ಸರ್ಕಾರ ಕೇವಲ 26,821 ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಾಗಿ ಹೇಳಿದೆ. ಆದರೆ ಉದ್ಯೋಗಗಳ ಬಗ್ಗೆ ಯಾವುದೇ ಖಚಿತ ಸಂಖ್ಯೆಗಳು ಇಲ್ಲವಾಗಿದೆ. ಸಿದ್ದರಾಮಯ್ಯ ರವರು ಇಂದು ಮಂಡಿಸಿದ ಅಯವ್ಯಯ ಸಾಲದ ಮೇಲೆ ನಿಂತಿರುವ ಬಜೆಟ್‍ಯಾಗಿದೆ. 2026-27ರಲ್ಲಿ ಸರ್ಕಾರ 1,32,000 ಕೋಟಿ ಹೊಸ ಸಾಲ ಪಡೆಯಲು ಯೋಜಿಸಿದೆ. ಇದು ಅಭಿವೃದ್ಧಿ ಬಜೆಟ್ ಅಲ್ಲ, ಸಾಲದ ಬಜೆಟ್ ಆಗಿದೆ.  ಕೇವಲ64 ಕೋಟಿ ವೆಚ್ಚದಲ್ಲಿ ಎರಡು ಶೀತಲಗೃಹಗಳು ನಿರ್ಮಿಸುವುದನ್ನು ದೊಡ್ಡ ಯೋಜನೆ ಎಂದು ಘೋಷಿಸಲಾಗಿದೆ. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಕೇವಲ 4,000 ಕೋಟಿ. ಇದು ರಾಜ್ಯದ ಅಗತ್ಯಗಳಿಗೆ ತುಂಬಾ ಕಡಿಮೆಯಾಗಿದೆ.  50 ಸರ್ಕಾರಿ ಕಾಲೇಜುಗಳ ದುರಸ್ತಿ ಮಾಡಲು ಕೇವಲ 100 ಕೋಟಿ – ಇದು ಪ್ರತಿ ಕಾಲೇಜಿಗೆ ತುಂಬಾ ಕಡಿಮೆ. ಕೃಷಿ ಕ್ಷೇತ್ರಕ್ಕೆ ದೊಡ್ಡ ಹೂಡಿಕೆ ಘೋಷಣೆ ಇಲ್ಲ: ಬದಲಿಗೆ ಸಣ್ಣ ಯೋಜನೆಗಳ ಘೋಷಣೆ ಮಾತ್ರ ಎಂದು ಆರೋಪಿಸಿದರು. 

ಅಧಿಕಾರಕ್ಕಾಗಿ ಜಾರಿಗೊಳಿಸಿದ್ದ ಗ್ಯಾರಂಟಿಗಳ ನಿರ್ವಹಣೆಗೆ ಪರದಾಡುತ್ತಿರುವ ರಾಜ್ಯ ಸರಕಾರ ಯುವ ನಿಧಿ ಗ್ಯಾರಂಟಿಗೆ ಎಳ್ಳು ನೀರು ಬಿಟ್ಟಂತಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಯಾವುದೇ ದೃಢ ಯೋಜನೆಗಳನ್ನು ರೂಪಿಸಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉಚಿತ ಯೋಜನೆಗಳಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ತೋರಿದ ಜೊತೆಗೆ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ದಿವ್ಯ ನಿರ್ಲಕ್ಷ್ಯ ಧೋರಣೆ ತಳೆದ ರಾಜಕೀಯ ಪ್ರೇರಿತ ಬಜೆಟ್ ಇದಾಗಿದೆ. ರಸ್ತೆ ಗುಂಡಿ ಮುಚ್ಚಲೂ ಹಣವಿಲ್ಲದ ರಾಜ್ಯ ಸರಕಾರ ಪ್ರಸಕ್ತ ಸಾಲಿನಲ್ಲಿ 1.32 ಲಕ್ಷ ಕೋಟಿ ರೂಪಾಯಿ ಸಾಲ ಮಾಡುವ ಮೂಲಕ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿದಂತಿದೆ. ರಾಜ್ಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ನಡೆಯುತ್ತಿರುವ ಪ್ರತಿಭಟನೆಗಳು ಅರಣ್ಯರೋಧನವಾಗಿದೆ. ಒಟ್ಟಾರೆಯಾಗಿ ರಾಜ್ಯದ ಹಿತವನ್ನು ಬಲಿಗೊಟ್ಟು ಯಾವುದೇ ಹೊಸತನವಿಲ್ಲದ, ಕೇವಲ ಸಾಲದ ಪ್ರಮಾಣ ಹೆಚ್ಚಿಸುವಲ್ಲಿ ದಾಖಲೆಗೈದ ನಿಷ್ಪ್ರಯೋಜಕ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *