ಬೆಂಗಳೂರು: ರಾಜ್ಯಾದ್ಯಂತ ಬೇಸಿಗೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ (ಏಪ್ರಿಲ್ 14 ರಿಂದ 18ರವರೆಗೆ) ತಾಪಮಾನದಲ್ಲಿ ಗಣನೀಯ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಒಂದು ಕಡೆ ಉಷ್ಣ ಮಾರುತಗಳ (Heatwave) ಅಬ್ಬರ ವಿರುವಾಗಲೇ, ಮತ್ತೊಂದೆಡೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಜಿಲ್ಲಾವಾರು ಹವಾಮಾನ ವರದಿ ಮತ್ತು ಮುನ್ಸೂಚನೆಯ ಸಂಪೂರ್ಣ ವಿವರ ಇಲ್ಲಿದೆ:
ಕರಾವಳಿ ಕರ್ನಾಟಕ: ಬಿಸಿ, ತೇವಾಂಶ ಮತ್ತು ಮಳೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಏಪ್ರಿಲ್ 15 ರಂದು ಬಿಸಿ ಹಾಗೂ ಅತಿಯಾದ ತೇವಾಂಶದ ವಾತಾವರಣ ಇರಲಿದ್ದು, ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಆದರೆ, ಏಪ್ರಿಲ್ 16 ಮತ್ತು 17 ರಂದು ಈ ಭಾಗದಲ್ಲಿ ಬಿಸಿಗಾಳಿ ಮುಂದುವರಿಯಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಂಪೂರ್ಣವಾಗಿ ಒಣಹವೆ ಮತ್ತು ಬಿಸಿಲಿನ ವಾತಾವರಣ ಇರಲಿದೆ.
ಉತ್ತರ ಕರ್ನಾಟಕ: ಉಷ್ಣ ಮಾರುತದ ಭೀತಿ
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೂರ್ಯನ ಪ್ರಖರತೆ ಹೆಚ್ಚಾಗಲಿದ್ದು, ಜನರಿಗೆ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ.
- ಬಿಸಿಗಾಳಿ (Heatwave) ಎಚ್ಚರಿಕೆ: ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತೀಕ್ಷ್ಣವಾದ ಉಷ್ಣ ಮಾರುತ ಬೀಸುವ ಸಾಧ್ಯತೆಯಿದೆ.
- ಮಳೆಯ ಮುನ್ಸೂಚನೆ: ಅತಿಯಾದ ಸೆಕೆಯ ನಡುವೆಯೂ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ರಾಯಚೂರು ಜಿಲ್ಲೆಗಳ ಒಂದೆರಡು ಕಡೆ ಬಿರುಗಾಳಿ ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ. ಏಪ್ರಿಲ್ 17ರಂದು ಕೂಡ ಗದಗ, ಬೆಳಗಾವಿ, ಧಾರವಾಡ ಭಾಗದಲ್ಲಿ ಸಾಧಾರಣ ಮಳೆಯಾಗಬಹುದು.
ದಕ್ಷಿಣ ಒಳನಾಡು ಮತ್ತು ಮಧ್ಯ ಕರ್ನಾಟಕ: ತಾಪಮಾನ ಏರಿಕೆ, ಅಲ್ಲಲ್ಲಿ ಮಳೆ
- ಮಳೆಯ ನಿರೀಕ್ಷೆ: ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 17ರಂದು ಕೂಡ ಮಲೆನಾಡು ಭಾಗದಲ್ಲಿ (ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ) ಮಳೆ ಮುಂದುವರಿಯುವ ಲಕ್ಷಣಗಳಿವೆ.
- ಒಣಹವೆ: ಕಲ್ಯಾಣ ಕರ್ನಾಟಕದ ಗಡಿ ಹಂಚಿಕೊಂಡಿರುವ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಸಾರ್ವಜನಿಕರಿಗೆ ಆರೋಗ್ಯ ಮುನ್ನೆಚ್ಚರಿಕೆಗಳು (Health Advisories)
ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಬಿಸಿಗಾಳಿ ಮತ್ತು ತಾಪಮಾನ ಏರಿಕೆಯಾಗುತ್ತಿರುವುದರಿಂದ, ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ:
- ನಿರ್ಜಲೀಕರಣ (Dehydration) ತಡೆಯಿರಿ: ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು ಕುಡಿಯುತ್ತಿರಿ. ನಿಂಬೆ ಪಾನಕ, ಮಜ್ಜಿಗೆ, ಎಳನೀರು, ಕಲ್ಲಂಗಡಿ ಹಣ್ಣಿನ ರಸದಂತಹ ನೈಸರ್ಗಿಕ ತಂಪು ಪಾನೀಯಗಳಿಗೆ ಹೆಚ್ಚು ಒತ್ತು ನೀಡಿ.
- ಮಧ್ಯಾಹ್ನದ ಬಿಸಿಲಿನಿಂದ ದೂರಿವಿರಿ: ಅತಿ ಹೆಚ್ಚು ತಾಪಮಾನ ಇರುವ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೇರ ಬಿಸಿಲಿಗೆ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ಅನಿವಾರ್ಯವಾಗಿ ಹೊರಹೋಗಬೇಕಾದರೆ ಛತ್ರಿ, ಟೋಪಿ ಅಥವಾ ಸನ್‌ಗ್ಲಾಸ್ ಬಳಸಿ.
- ಉಡುಪುಗಳ ಆಯ್ಕೆ: ತಿಳಿ ಬಣ್ಣದ, ಸಡಿಲವಾದ ಹತ್ತಿ (Cotton) ಬಟ್ಟೆಗಳನ್ನು ಧರಿಸುವುದು ಉತ್ತಮ. ಇದು ದೇಹಕ್ಕೆ ಗಾಳಿಯಾಡಲು ಬಿಡುತ್ತದೆ ಮತ್ತು ಬೆವರನ್ನು ಹೀರಿಕೊಳ್ಳುತ್ತದೆ.
- ವಯಸ್ಸಾದವರು ಹಾಗೂ ಮಕ್ಕಳ ಬಗ್ಗೆ ನಿಗಾ: ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರ ಮೇಲೆ ಬಿಸಿಗಾಳಿಯ ಪರಿಣಾಮ ಬೇಗ ಬೀರುವುದರಿಂದ, ಅವರನ್ನು ತಂಪಾದ ವಾತಾವರಣದಲ್ಲಿರುವಂತೆ ನೋಡಿಕೊಳ್ಳಿ.
- ಹೀಟ್‌ಸ್ಟ್ರೋಕ್ (Heatstroke) ಲಕ್ಷಣಗಳು: ವಿಪರೀತ ತಲೆನೋವು, ಆಯಾಸ, ತಲೆತಿರುಗುವಿಕೆ ಅಥವಾ ವಾಕರಿಕೆ ಕಂಡುಬಂದರೆ ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ವಿಶ್ರಾಂತಿ ಪಡೆಯಿರಿ ಮತ್ತು ಹತ್ತಿರದ ವೈದ್ಯರನ್ನು ಸಂಪರ್ಕಿಸಿ.


