ಜನರ ದಿಕ್ಕುತಪ್ಪಿಸುವ ಅಂಕಿ-ಅಂಶಗಳ ಕಟ್ಟುಕತೆ: ಬಿ.ಸಿ. ಹನುಮಂತೇಗೌಡ

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ. 7

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ಆಯವ್ಯಯವು ಜನಸಾಮಾನ್ಯರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಇದು ದಿಕ್ಕು ದಿಸೆಯಿಲ್ಲದ, ಕೇವಲ ಮತಬ್ಯಾಂಕ್ ರಾಜಕಾರಣ ದೃಷ್ಟಿಯಲ್ಲಿ ಸಿದ್ಧವಾಗಿರುವ, ಜನರ ದಿಕ್ಕು ತಪ್ಪಿಸುವ ಅಂಕಿ-ಅಂಶಗಳ ಕಟ್ಟು ಕಥೆಯಾಗಿದೆ ಎಂದು ಬಿಜೆಪಿ ಮುಖಂಡರಾದ ಬಿ.ಸಿ. ಹನುಮಂತೇಗೌಡ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಜೆಟ್ ಗಾತ್ರವನ್ನು 4.48 ಲಕ್ಷ ಕೋಟಿ ರೂ,ಗೆ ಏರಿಸಲಾಗಿದೆ. ಆದರೆ ಇದರಲ್ಲಿ ಬಹುಪಾಲು ಸಾಲದ ಮೂಲಕವೇ ಭರಿಸಲಾಗುತ್ತಿದೆ. ಈ ಸಾಲದ ಹೊರೆಯಿಂದ ಮುಂದಿನ ಪೀಳಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಗ್ಯಾರಂಟಿ ಯೋಜನೆಗಳ ಅಬ್ಬರದಲ್ಲಿ ರಾಜ್ಯದ ನೀರಾವರಿ, ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಕೆಲಸಗಳಿಗೆ ಅಗತ್ಯ ಇರುವಷ್ಟು ಅನುದಾನ ಸಿಕ್ಕಿಲ್ಲ. ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಅಭಿವೃದ್ಧಿ ಕೆಲಸಗಳು ಈ ಬಾರಿಯೂ ಕುಂಟುತ್ತಾ ಸಾಗಲಿವೆ ಎಂದು ದೂರಿದರು. 

ಬರ ಮತ್ತು ಪ್ರವಾಹದಿಂದ ಕಂಗೆಟ್ಟಿರುವ ರೈತರಿಗೆ ಸಾಲ ಮನ್ನಾ ಅಥವಾ ವಿಶೇಷ ಪ್ಯಾಕೇಜ್ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. 56,432 ಹುದ್ದೆಗಳ ನೇಮಕಾತಿ ಮತ್ತು ವಯೋಮಿತಿ ಸಡಿಲಿಕೆ ಘೋಷಣೆಗಳು ಕೇವಲ ಚುನಾವಣಾ ಗಿಮಿಕ್ ಆಗಿವೆ. ಖಾಲಿ ಹುದ್ದೆಗಳ ಭರ್ತಿಯ ಭರವಸೆಯನ್ನು ಕಳೆದ ಮೂರು ಬಜೆಟ್‍ಗಳಲ್ಲಿಯೂ ನೀಡಲಾಗಿದೆ. ಆದರೆ, ಈವರೆಗೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ವಯೋಮಿತಿ ಸಡಿಲಿಕೆ ಎಂಬುದು ಕೇವಲ ಯುವಕರನ್ನು ಹಾದಿ ತಪ್ಪಿಸುವ ತಂತ್ರವಾಗಿದೆ. ಬೆಂಗಳೂರಿನ ಟನಲ್ ರಸ್ತೆ ಮತ್ತು ಬಿಸಿನೆಸ್ ಕಾರಿಡಾರ್ ಯೋಜನೆಗಳು ಕೇವಲ ಕಾಗದದ ಮೇಲಿವೆ. ಈ ಯೋಜನೆಗಳಿಗೆ ಅಗತ್ಯವಿರುವ ಬೃಹತ್ ಮೊತ್ತವನ್ನು ಎಲ್ಲಿಂದ ತರುತ್ತಾರೆ ಎಂಬ ಸ್ಪಷ್ಟತೆ ಬಜೆಟ್‍ನಲ್ಲಿ ಇಲ್ಲ ಎಂದಿದ್ದಾರೆ.

ಜನರ ಮೇಲೆ ತೆರಿಗೆಗಳ ಹೊರೆ ಹೆಚ್ಚಾಗುವ ಸಾಧ್ಯತೆಯನ್ನು ಈ ಬಜೆಟ್ ಪರೋಕ್ಷವಾಗಿ ಸೂಚಿಸಿದೆ. ಈಗಾಗಲೇ ಬೆಲೆ ಏರಿಕೆಯಿಂದ ನಲುಗಿರುವ ಜನಸಾಮಾನ್ಯರಿಗೆ, ಈ ಬಜೆಟ್ ಯಾವುದೇ ಸಮಾಧಾನ ತಂದಿಲ್ಲ. ರಾಜ್ಯದ ಆರ್ಥಿಕ ಭವಿಷ್ಯವನ್ನು ಅಧೋಗತಿಗೆ ಕೊಂಡೊಯ್ಯುವ ರೀತಿಯಲ್ಲಿ ಮಂಡಿಸಲಾದ ಆಯವ್ಯಯವು, ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಬಜೆಟ್, ವಾಸ್ತವಿಕ ನೆಲೆ ಕಳೆದು ಕೊಂಡಿದ್ದು, ರಾಜ್ಯದ ಜನತೆಗೆ ನೀಡಿರುವ ತೀವ್ರ ನಿರಾಶಾದಾಯಕ ಬಜೆಟ್ ಎಂದು ಬಿಜೆಪಿ ಮುಖಂಡರಾದ ಬಿ.ಸಿ. ಹನುಮಂತೇಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *