ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್
ಚಿತ್ರದುರ್ಗ: ಮಾ.08
ಹೆಣ್ಣು ಜನ್ಮವೇ ಮಹಿಳೆಯರಿಗೆ ದೇವರು ಕೊಟ್ಟಿರುವ ಅತ್ಯಂತ ದೊಡ್ಡ ಗೌರವ. ನಾವು ಇಂದು ನೀಡುವ ಸನ್ಮಾನಗಳು, ಪ್ರಶಂಸೆಗಳು ಕೇವಲ ಅದರ ಸಾಂಕೇತಿಕ ರೂಪ ಮಾತ್ರ ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರು ತುರುವನೂರು ರಸ್ತೆಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಹಿಳೆ ಎಂದರೆ ಕೇವಲ ಒಂದು ವ್ಯಕ್ತಿಯಲ್ಲ; ಅವಳು ತಾಯಿ, ಅಕ್ಕ, ತಂಗಿ, ಪತ್ನಿ, ಗುರು, ಸ್ನೇಹಿತೆ ಎಂಬ ಹಲವಾರು ರೀತಿ ಗೌರವಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿದಿನವೂ ಅವರ ಪರಿಶ್ರಮವನ್ನು ಗುರುತಿಸಿ, ಅವರಿಗೆ ಸಮಾನ ಗೌರವ ಮತ್ತು ಅವಕಾಶಗಳನ್ನು ನೀಡುವುದು ನಮ್ಮ ಹೊಣೆಗಾರಿಕೆ. ಮಹಿಳೆಯರನ್ನು ಗೌರವಿಸುವ ಸಮಾಜವೇ ನಿಜವಾದ ಪ್ರಗತಿಯ ದಾರಿಯಲ್ಲಿ ಸಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾನ ಅಧ್ಯಕ್ಷೆ ಶ್ರೀಮತಿ ದಯಾವತಿಪುತ್ತೂರ್ಕರ್ ಮಾತನಾಡಿ ಸಮಾಜದಲ್ಲಿ ಮಹಿಳೆಯರು ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗ, ಆರೋಗ್ಯ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ದೊರಕಬೇಕು. ಮಹಿಳೆಯರ ಮೇಲೆ ನಡೆಯುವ ಅನ್ಯಾಯ, ಹಿಂಸೆ ಮತ್ತು ಭೇದಭಾವವನ್ನು ಕಡಿಮೆ ಮಾಡಲು ತಕ್ಷಣದ ಕ್ರಮ ಅಗತ್ಯ. ಸರ್ಕಾರ, ಸಂಘಟನೆಗಳು ಮತ್ತು ಪ್ರತಿಯೊಬ್ಬ ನಾಗರಿಕರೂ ಮಹಿಳಾ ಸಬಲೀಕರಣಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಅಗಮಿಸಿದ್ದ ಮಹಿಳೆಯರೆಲ್ಲ ಸೇರಿ ಕೇಕ್ ಕತ್ತರಿಸಿ ಪರಸ್ಪರ ಮಹಿಳಾ ದಿನಾಚರಣೆಯ ಶುಭಕೋರಿದರು. ಇದೇ ಸಂಧರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶ್ರೀಮತಿ ಲಲಿತಬೇದ್ರೆ ವನಜಾಕ್ಷಮ್ಮ, ಅಂಬುಜಾಕ್ಷಿ, ಭಾಗ್ಯಲಕ್ಣ್ಮೀ, ಅನಿತ, ಅರುಣ, ಸುಧಮ್ಮ, ಸುಕನ್ಯ, ಮಂಜುಳಾ, ವಸಂತಲಕ್ಷ್ಮೀ ಶಿವಕುಮಾರ್, ಮಲ್ಲಿಕಾರ್ಜುನ ಚಾರ್ ಇನ್ನಿತರರು ಭಾಗವಹಿದ್ದರು.