ನವದೆಹಲಿ: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರೋಚಕ ಟಿ20 ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿಯುವ ಮೂಲಕ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಮಿಂಚಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತ ಸತತ ಎರಡನೇ ಬಾರಿ ವಿಶ್ವಕಪ್ ಎತ್ತಿ ಹಿಡಿದ ಸಾಧನೆ ಮಾಡಿದ್ದು, ತವರಿನಲ್ಲೇ ಪ್ರಶಸ್ತಿ ಗೆದ್ದ ಏಕೈಕ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದು ಟೀಂ ಇಂಡಿಯಾದ ಮೂರನೇ ಟಿ20 ವಿಶ್ವಕಪ್ ಗೆಲುವಾಗಿದೆ.
ವೀಕ್ಷಣೆಯಲ್ಲೂ ವಿಶ್ವದಾಖಲೆ ಬರೆದ ಫೈನಲ್ ಪಂದ್ಯ! ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಹೈ-ವೋಲ್ಟೇಜ್ ಪಂದ್ಯ ಕೇವಲ ಮೈದಾನದಲ್ಲಷ್ಟೇ ಅಲ್ಲ, ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲೂ ಹೊಸ ಇತಿಹಾಸ ಸೃಷ್ಟಿಸಿದೆ. ಜಿಯೋಹಾಟ್ಸ್ಟಾರ್ (JioHotstar) ಲೈವ್ ಸ್ಟ್ರೀಮಿಂಗ್ನಲ್ಲಿ ಏಕಕಾಲಕ್ಕೆ ಬರೋಬ್ಬರಿ 82.1 ಕೋಟಿ ಕ್ರೀಡಾಭಿಮಾನಿಗಳು ಪಂದ್ಯವನ್ನು ವೀಕ್ಷಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಭಾರತ ನೀಡಿದ್ದ 255 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್, 19ನೇ ಓವರ್ನಲ್ಲಿ ತನ್ನ ಕೊನೆಯ ವಿಕೆಟ್ ಕಳೆದುಕೊಂಡು 96 ರನ್ಗಳ ಅಂತರದಿಂದ ಶರಣಾಯಿತು. ಈ ಗೆಲುವಿನ ಕ್ಷಣದಲ್ಲಿ ಜಿಯೋಹಾಟ್ಸ್ಟಾರ್ನಲ್ಲಿ 74.5 ಕೋಟಿ ಲೈವ್ ವೀಕ್ಷಕರಿದ್ದರು. ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದ ಹೊತ್ತಿಗೆ ಈ ಸಂಖ್ಯೆ 82.1 ಕೋಟಿಗೆ ಜಿಗಿದು ದಾಖಲೆ ಬರೆಯಿತು.
ಕ್ಷಣಕ್ಷಣಕ್ಕೂ ಏರುತ್ತಲೇ ಇತ್ತು ವೀಕ್ಷಕರ ಸಂಖ್ಯೆ: ಪಂದ್ಯದ ಆರಂಭಕ್ಕೂ ಮುನ್ನ ನಡೆದ ಖ್ಯಾತ ಗಾಯಕ ರಿಕಿ ಮಾರ್ಟಿನ್ ಅವರ ಸಂಗೀತ ಕಾರ್ಯಕ್ರಮವನ್ನು 2.1 ಕೋಟಿ ಜನರು ವೀಕ್ಷಿಸಿದರೆ, ಟಾಸ್ ಪ್ರಕ್ರಿಯೆ ವೇಳೆ ಈ ಸಂಖ್ಯೆ 4.2 ಕೋಟಿಗೆ ತಲುಪಿತ್ತು. ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ 6.5 ಕೋಟಿ ಜನರು ಲೈವ್ನಲ್ಲಿದ್ದರು. ಭಾರತದ ಬ್ಯಾಟರ್ಗಳ ಅಬ್ಬರ ಹೆಚ್ಚಾದಂತೆ ವೀಕ್ಷಕರ ಸಂಖ್ಯೆಯೂ ಏರುತ್ತಾ ಸಾಗಿತು. ಇನ್ನಿಂಗ್ಸ್ ವಿರಾಮದ ವೇಳೆಗೆ 44.3 ಕೋಟಿ ಕ್ರೀಡಾಭಿಮಾನಿಗಳು ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಕಿವೀಸ್ ಪಡೆ ರನ್ ಚೇಸ್ ಆರಂಭಿಸುವ ಹೊತ್ತಿಗೆ 49.9 ಕೋಟಿ ಹಾಗೂ ಮೊದಲ ಓವರ್ ಮುಕ್ತಾಯದ ವೇಳೆಗೆ 50.3 ಕೋಟಿ ವೀಕ್ಷಕರು ಲಾಗ್ ಇನ್ ಆಗಿದ್ದರು.
ಹಳೆಯ ದಾಖಲೆಗಳೆಲ್ಲವೂ ಉಡೀಸ್! ಈ ಫೈನಲ್ ಪಂದ್ಯವು ಈ ಹಿಂದಿನ ಎಲ್ಲಾ ವೀಕ್ಷಣಾ ದಾಖಲೆಗಳನ್ನು ಅಳಿಸಿಹಾಕಿದೆ. ಇದೇ ಜಿಯೋಹಾಟ್ಸ್ಟಾರ್ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯವನ್ನು 6.5 ಕೋಟಿ ಜನ ಏಕಕಾಲದಲ್ಲಿ ವೀಕ್ಷಿಸಿದ್ದರು.
ಇನ್ನು 2023ರ ನವೆಂಬರ್ 20ರಂದು ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯವು 5.9 ಕೋಟಿ ಗರಿಷ್ಠ ವೀಕ್ಷಣೆ ಕಂಡಿತ್ತು. ಹಾಗೆಯೇ, 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಡಿಸ್ನಿ+ಹಾಟ್ಸ್ಟಾರ್ನಲ್ಲಿ 5.3 ಕೋಟಿ ಜನರು ವೀಕ್ಷಿಸಿದ್ದು ಈ ಹಿಂದಿನ ದೊಡ್ಡ ದಾಖಲೆಯಾಗಿತ್ತು. ಇದೀಗ 82.1 ಕೋಟಿ ವೀಕ್ಷಕರೊಂದಿಗೆ ಈ ಎಲ್ಲಾ ದಾಖಲೆಗಳು ಪತನಗೊಂಡಿವೆ.
