LPG vs PNG: ಎಲ್‌ಪಿಜಿ ಮತ್ತು ಪಿಎನ್‌ಜಿ(PNG) ನಡುವಿನ ಪ್ರಮುಖ ವ್ಯತ್ಯಾಸಗಳೇನು? ಯಾವುದು ಹೆಚ್ಚು ಸುರಕ್ಷಿತ?

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ (LPG) ಬುಕಿಂಗ್ ಸಮಸ್ಯೆ, ವಿಳಂಬ ಡೆಲಿವರಿ ಗ್ರಾಹಕರನ್ನು ಹೈರಾಣಾಗಿಸುತ್ತಿದೆ. ಸರ್ಕಾರವು ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಹೇಳಿದರೂ, ತಳಮಟ್ಟದಲ್ಲಿ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಇದೇ ವೇಳೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಸುತ್ತಿರುವ ಮನೆಗಳಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಗ್ಯಾಸ್ ಪೂರೈಕೆಯಾಗುತ್ತಿದೆ. ಸ್ವತಃ ಪ್ರಧಾನಮಂತ್ರಿಯವರೇ ಪಿಎನ್‌ಜಿ ಬಳಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹಾಗಾದರೆ, ಎಲ್‌ಪಿಜಿ ಮತ್ತು ಪಿಎನ್‌ಜಿ ನಡುವಿನ ಮೂಲ ವ್ಯತ್ಯಾಸವೇನು? ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿ.

ಎಲ್‌ಪಿಜಿ ಮತ್ತು ಪಿಎನ್‌ಜಿ: ಮೂಲ ವ್ಯತ್ಯಾಸವೇನು?

  • ಎಲ್‌ಪಿಜಿ (LPG): ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ಎಂಬುದು ಕಚ್ಚಾ ತೈಲ ಸಂಸ್ಕರಣೆಯ ಉಪ ಉತ್ಪನ್ನವಾಗಿದೆ. ಈ ಅನಿಲವನ್ನು ದ್ರವೀಕರಿಸಿ, ಸಿಲಿಂಡರ್‌ಗಳಲ್ಲಿ ತುಂಬಿಸಿ ಮನೆಮನೆಗೆ ಸಾಗಾಟ ಮಾಡಲಾಗುತ್ತದೆ.
  • ಪಿಎನ್‌ಜಿ (PNG): ಪೈಪ್ಡ್ ನ್ಯಾಚುರಲ್ ಗ್ಯಾಸ್ ಎಂಬುದು ಶುದ್ಧ ನೈಸರ್ಗಿಕ ಅನಿಲ. ನಲ್ಲಿಯ ಮೂಲಕ ಮನೆಗೆ ನೀರು ಪೂರೈಕೆಯಾಗುವ ರೀತಿಯಲ್ಲೇ, ಈ ಗ್ಯಾಸ್ ಅನ್ನು ಭೂಗತ ಕೊಳವೆಗಳ (Pipes) ಮೂಲಕ ನೇರವಾಗಿ ಅಡುಗೆಮನೆಗೆ ಸರಬರಾಜು ಮಾಡಲಾಗುತ್ತದೆ.

ಪಿಎನ್‌ಜಿ ಪೂರೈಕೆಯಲ್ಲಿ ಅಡೆತಡೆಗಳಿಲ್ಲ ಏಕೆ? ದೇಶದಲ್ಲಿ ಸುಮಾರು 32 ಕೋಟಿಗೂ ಅಧಿಕ ಮನೆಗಳು ಎಲ್‌ಪಿಜಿ ಸಂಪರ್ಕ ಹೊಂದಿವೆ. ಆದರೆ, ಭಾರತಕ್ಕೆ ಬೇಕಾದ ಎಲ್‌ಪಿಜಿಯಲ್ಲಿ ಶೇ. 60ಕ್ಕೂ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅದರಲ್ಲಿಯೂ ಶೇ. 80ರಷ್ಟು ಕೇವಲ ಕೊಲ್ಲಿ ರಾಷ್ಟ್ರಗಳ (Gulf countries) ಮೇಲೆಯೇ ಅವಲಂಬಿತವಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಅಥವಾ ಯುದ್ಧದಂತಹ (ಉದಾಹರಣೆಗೆ: ಇರಾನ್ ಬಿಕ್ಕಟ್ಟು) ಸಂದರ್ಭಗಳಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗುತ್ತದೆ.

ಆದರೆ, ಪಿಎನ್‌ಜಿ ಕಥೆ ಭಿನ್ನವಾಗಿದೆ. ಭಾರತಕ್ಕೆ ಅಗತ್ಯವಿರುವ ಪಿಎನ್‌ಜಿಯಲ್ಲಿ ಶೇ. 50ರಷ್ಟು ನಮ್ಮ ದೇಶದಲ್ಲೇ ಉತ್ಪಾದನೆಯಾಗುತ್ತದೆ. ಉಳಿದ ಭಾಗವನ್ನು ಆಮದು ಮಾಡಿಕೊಂಡರೂ, ಕೇವಲ ಒಂದು ಪ್ರದೇಶವನ್ನು ನೆಚ್ಚಿಕೊಳ್ಳದೆ ಅಮೆರಿಕ, ಆಸ್ಟ್ರೇಲಿಯಾದಂತಹ ವಿವಿಧ ರಾಷ್ಟ್ರಗಳಿಂದ ಪಡೆಯಲಾಗುತ್ತದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ತೀರಾ ವಿರಳ. ಪ್ರಸ್ತುತ ದೇಶದಲ್ಲಿ ಒಂದೂವರೆ ಕೋಟಿಗೂ ಅಧಿಕ ಮನೆಗಳು ಪಿಎನ್‌ಜಿ ಸಂಪರ್ಕ ಹೊಂದಿದ್ದು, ಇದರ ಜಾಲ ವೇಗವಾಗಿ ವಿಸ್ತರಣೆಯಾಗುತ್ತಿದೆ.

ಎಲ್‌ಪಿಜಿಗಿಂತ ಪಿಎನ್‌ಜಿ ಏಕೆ ಉತ್ತಮ?

  1. ಸುರಕ್ಷತೆ ಹೆಚ್ಚು: ಪಿಎನ್‌ಜಿ ಅನಿಲವು ಗಾಳಿಗಿಂತ ಹಗುರವಾಗಿರುತ್ತದೆ. ಒಂದು ವೇಳೆ ಸೋರಿಕೆಯಾದರೂ ಅದು ತಕ್ಷಣವೇ ಗಾಳಿಯಲ್ಲಿ ಬೆರೆತು ಆವಿಯಾಗುತ್ತದೆ. ಆದರೆ ಎಲ್‌ಪಿಜಿ ಗಾಳಿಗಿಂತ ಭಾರವಾಗಿರುವುದರಿಂದ, ಸೋರಿಕೆಯಾದರೆ ನೆಲದ ಮೇಲೆ ಶೇಖರಣೆಗೊಂಡು ಬೆಂಕಿ ಅವಘಡಗಳ ಅಪಾಯ ಹೆಚ್ಚಿರುತ್ತದೆ.
  2. ಬುಕಿಂಗ್ ಟೆನ್ಷನ್ ಇಲ್ಲ: ಸಿಲಿಂಡರ್ ಖಾಲಿಯಾದಾಗ ಬುಕ್ ಮಾಡುವುದು, ಡೆಲಿವರಿಗಾಗಿ ಕಾಯುವುದು, ತೂಕ ಪರೀಕ್ಷಿಸುವುದು- ಈ ಯಾವ ತಲೆನೋವುಗಳೂ ಪಿಎನ್‌ಜಿಯಲ್ಲಿ ಇರುವುದಿಲ್ಲ. ಇದು 24/7 ಲಭ್ಯವಿರುತ್ತದೆ.
  3. ಬಳಸಿದಷ್ಟೇ ಬಿಲ್ (Postpaid): ವಿದ್ಯುತ್ ಅಥವಾ ನೀರಿನ ಬಿಲ್ ಮಾದರಿಯಲ್ಲಿ, ನೀವು ಎಷ್ಟು ಗ್ಯಾಸ್ ಬಳಸುತ್ತೀರೋ ಅಷ್ಟಕ್ಕೆ ಮಾತ್ರ ತಿಂಗಳ ಕೊನೆಯಲ್ಲಿ ಮೀಟರ್ ಆಧಾರದ ಮೇಲೆ ಬಿಲ್ ಪಾವತಿಸಬಹುದು.
  4. ಪರಿಸರ ಸ್ನೇಹಿ: ಇದು ಸಂಪೂರ್ಣವಾಗಿ ಶುದ್ಧವಾಗಿ ಉರಿಯುವ ನೈಸರ್ಗಿಕ ಅನಿಲವಾಗಿದ್ದು, ಪರಿಸರಕ್ಕೆ ಪೂರಕವಾಗಿದೆ.

ಪಿಎನ್‌ಜಿ ಸಂಪರ್ಕ ಪಡೆಯುವುದು ಹೇಗೆ? ಭಾರತದ ಪ್ರಮುಖ ನಗರಗಳಲ್ಲಿ ಜಿಎಐಎಲ್ (GAIL), ಇಂಡಿಯನ್ ಆಯಿಲ್, ಬಿಪಿಸಿಎಲ್, ಅದಾನಿ ಟೋಟಲ್ ಗ್ಯಾಸ್, ಐಜಿಎಲ್‌ನಂತಹ ಸಂಸ್ಥೆಗಳು ಪಿಎನ್‌ಜಿ ಸಂಪರ್ಕವನ್ನು ಒದಗಿಸುತ್ತಿವೆ. ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಂತಹ ನಗರಗಳಲ್ಲಿ GAIL ಸಂಸ್ಥೆಯು ಈ ಸೇವೆಯನ್ನು ನೀಡುತ್ತಿದೆ.

ನೀವು ಸಂಪರ್ಕ ಪಡೆಯಲು ಬಯಸಿದರೆ, GAIL ಅಥವಾ ನಿಮ್ಮ ನಗರದಲ್ಲಿ ಸೇವೆ ನೀಡುತ್ತಿರುವ ಅಧಿಕೃತ ಗ್ಯಾಸ್ ವಿತರಕರ ವೆಬ್‌ಸೈಟ್‌ಗೆ ಭೇಟಿ ನೀಡಿ. ನಿಮ್ಮ ಪ್ರದೇಶದಲ್ಲಿ (ಪಿನ್‌ಕೋಡ್ ಮೂಲಕ) ಪಿಎನ್‌ಜಿ ಜಾಲವಿದೆಯೇ ಎಂದು ಪರಿಶೀಲಿಸಿ, ನೇರವಾಗಿ ಆನ್‌ಲೈನ್ ಮೂಲಕವೇ ಹೊಸ ಕನೆಕ್ಷನ್‌ಗೆ ಅರ್ಜಿ ಸಲ್ಲಿಸಬಹುದು.

Leave a Reply

Your email address will not be published. Required fields are marked *