SSLC Exams 2026:ಸರ್ಕಾರದ ‘ಗ್ರೇಡ್’ ತೀರ್ಮಾನಕ್ಕೆ ಬ್ರೇಕ್; ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಅಂಕವೇ ಅಂತಿಮ ಎಂದ ಹೈಕೋರ್ಟ್.

ಬೆಂಗಳೂರು: ಪ್ರಸಕ್ತ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನವೊಂದನ್ನು ನೀಡಿದೆ. ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ‘ಗ್ರೇಡ್’ (Grade) ವ್ಯವಸ್ಥೆಯ ಬದಲಾಗಿ, ಹಿಂದಿನಂತೆಯೇ ‘ಅಂಕ’ಗಳನ್ನು (Marks) ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಪರೀಕ್ಷೆಯ ಕೊನೆಯ ಹಂತದಲ್ಲಿ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದ ಶಾಲಾ ಶಿಕ್ಷಣ ಇಲಾಖೆಗೆ ಈ ಆದೇಶದಿಂದ ತೀವ್ರ ಹಿನ್ನಡೆಯಾಗಿದೆ.

ಚಿಕ್ಕಮಗಳೂರಿನ ವಿದ್ಯಾರ್ಥಿನಿ ಸಹನಾ ಆರ್. ನಾಯ್ಕ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ಸರ್ಕಾರದ ಈ ಹೊಸ ಗ್ರೇಡಿಂಗ್ ನಿಯಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್‌ ಅವರಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠವು, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರಕ್ಕೆ ಈ ಸ್ಪಷ್ಟ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ನ್ಯಾಯಾಲಯದಲ್ಲಿ ನಡೆದ ವಾದ-ವಿವಾದವೇನು? ಅರ್ಜಿದಾರರ ಪರ ವಕೀಲರಾದ ಆರ್.ವಿ. ನಾಯ್ಕ್ ಅವರು ನ್ಯಾಯಪೀಠದ ಮುಂದೆ ಪ್ರಬಲ ವಾದ ಮಂಡಿಸಿದರು. “ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ (KSEAB) ಹಿಂದಿನ ಮಾರ್ಗಸೂಚಿ ಹಾಗೂ ಸುತ್ತೋಲೆಗಳ ಪ್ರಕಾರ, ತೃತೀಯ ಭಾಷಾ ವಿಷಯಗಳಿಗೆ 100 ಅಂಕಗಳನ್ನು (ಲಿಖಿತ ಪರೀಕ್ಷೆಗೆ 80 ಹಾಗೂ ಶಾಲಾ ಆಂತರಿಕ ಪರೀಕ್ಷೆಗೆ 20 ಅಂಕ) ನಿಗದಿಪಡಿಸಲಾಗಿದೆ. ಆದರೆ, 2026ರ ಮಾರ್ಚ್ 28ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಏಕಾಏಕಿ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಪರೀಕ್ಷೆ ನಡೆಯುತ್ತಿರುವ ಈ ನಿರ್ಣಾಯಕ ಹಂತದಲ್ಲಿ ಇಂತಹ ದಿಢೀರ್ ತೀರ್ಮಾನ ಕೈಗೊಂಡಿರುವುದು ಅವೈಜ್ಞಾನಿಕ,” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರೇಡ್ ಅಡ್ಡಿ ಮುಂದುವರಿದು ವಾದಿಸಿದ ವಕೀಲರು, “ಕೇಂದ್ರ ಲೋಕಸೇವಾ ಆಯೋಗ (UPSC), ಬ್ಯಾಂಕಿಂಗ್ ಹಾಗೂ ಕೇಂದ್ರ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೌಲ್ಯಮಾಪನಕ್ಕಾಗಿ ಅಂಕಗಳನ್ನಷ್ಟೇ ಪರಿಗಣಿಸಲಾಗುತ್ತದೆ, ಗ್ರೇಡಿಂಗ್‌ ವ್ಯವಸ್ಥೆಯನ್ನಲ್ಲ. ಒಂದು ವೇಳೆ ರಾಜ್ಯ ಸರ್ಕಾರವು ತೃತೀಯ ಭಾಷೆಗೆ ಕೇವಲ ಗ್ರೇಡ್ ನೀಡಿದರೆ, ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಹಾಗೂ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ದುಷ್ಪರಿಣಾಮ ಬೀರಲಿದೆ,” ಎಂದು ಪೀಠದ ಗಮನಕ್ಕೆ ತಂದರು. ಈ ವಾದವನ್ನು ನ್ಯಾಯಪೀಠವು ಪುರಸ್ಕರಿಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ಗ್ರೇಡಿಂಗ್ ಕುರಿತಂತೆ ಸರ್ಕಾರ ಅಧಿಕೃತ ಅಧಿಸೂಚನೆ ಅಥವಾ ಸುತ್ತೋಲೆ ಹೊರಡಿಸಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ಸದ್ಯಕ್ಕೆ ಕೇವಲ ಕರಡು ಅಧಿಸೂಚನೆಯನ್ನು ಮಾತ್ರ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಪಿಐಎಲ್ ವಜಾ ಹಾಗೂ ದಂಡ: ಇದೇ ವಿಚಾರವಾಗಿ, ಶಿಕ್ಷಣ ಸಚಿವರ ಹೇಳಿಕೆಯನ್ನು ಆಕ್ಷೇಪಿಸಿ ಬೆಂಗಳೂರಿನ ಎಚ್.ಎನ್. ಚಂದನಾ ಹಾಗೂ ಎಸ್. ವೆಂಕಟೇಶ್ ಎಂಬುವವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಆದರೆ, ಏಪ್ರಿಲ್ 10ರಂದು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠವು ಆ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೆ, ಅರ್ಜಿದಾರರಿಗೆ 1 ಲಕ್ಷ ರೂ. ದಂಡವನ್ನೂ ವಿಧಿಸಿತ್ತು ಎಂಬುದು ಇಲ್ಲಿ ಗಮನಾರ್ಹ. ಇದೀಗ ಏಕಸದಸ್ಯ ಪೀಠವು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ಅಂಕಗಳನ್ನು ನೀಡುವಂತೆ ನಿರ್ದೇಶಿಸಿದೆ.

Leave a Reply

Your email address will not be published. Required fields are marked *