2025-26ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಹಿಂದಿ ಸೇರಿದಂತೆ ಇತರೆ 3ನೇ ಭಾಷೆಗಳ ಮೌಲ್ಯಮಾಪನದಲ್ಲಿ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತರಲು ಮುಂದಾಗಿದ್ದ ರಾಜ್ಯ ಸರ್ಕಾರದ ನಡೆಗೆ ನ್ಯಾಯಾಲಯ ಬ್ರೇಕ್ ಹಾಕಿದೆ. ಬದಲಾಗಿ, ಹಳೆಯ ಪದ್ಧತಿಯಂತೆ ಅಂಕಗಳನ್ನು ನೀಡುವ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು, ಏಪ್ರಿಲ್ 15ರ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಪರೀಕ್ಷಾ ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲಿ ಯಾವ ನಿಯಮಗಳು ಜಾರಿಯಲ್ಲಿದ್ದವೋ, ಅದೇ ನಿಯಮಗಳ ಪ್ರಕಾರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಬೇಕು. ನಿಯಮಗಳಿಂದ ಅರ್ಧ ದಾರಿಯಲ್ಲಿ ಹಿಂದೆ ಸರಿಯಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತೃತೀಯ ಭಾಷೆಗೆ ಗ್ರೇಡಿಂಗ್ ಪದ್ಧತಿ ಅಳವಡಿಸುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ನೀಡಿದ್ದ ಹೇಳಿಕೆ ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಗೊಂದಲ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸಹನಾ ಆರ್ ನಾಯ್ಕ್ ಹಾಗೂ ಉಡುಪಿ ಜಿಲ್ಲೆಯ ಅನುಷಾ ಮತ್ತು ಸುಧೀಕ್ಷಾ ಎಂಬ 3 ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2025ರ ಅಕ್ಟೋಬರ್ 28ರಂದು ಹೊರಡಿಸಿದ್ದ ಸುತ್ತೋಲೆಯ ಪ್ರಕಾರವೇ ಮೌಲ್ಯಮಾಪನ ಪ್ರಕ್ರಿಯೆ ನಡೆಯಬೇಕು ಎಂದು ಅವರು ಮನವಿ ಮಾಡಿದ್ದರು.
ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಸರ್ಕಾರಿ ವಕೀಲರು, ಪರೀಕ್ಷೆಯ ದಿನಾಂಕದಂದು ಚಾಲ್ತಿಯಲ್ಲಿದ್ದ ನಿಯಮಗಳಂತೆಯೇ ಮೌಲ್ಯಮಾಪನ ಮಾಡಲಾಗುವುದು ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಿದರು. ಇದನ್ನು ದಾಖಲಿಸಿಕೊಂಡ ಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಅಗತ್ಯ ಕಾನೂನುಬದ್ಧ ತಿದ್ದುಪಡಿಗಳನ್ನು ತಂದು ಗ್ರೇಡಿಂಗ್ ಪದ್ಧತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾದರೆ, ಅದಕ್ಕೆ ನ್ಯಾಯಾಲಯ ಅಡ್ಡಿಯಾಗುವುದಿಲ್ಲ ಎಂಬುದನ್ನೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಮಹತ್ವದ ತೀರ್ಪಿನಿಂದಾಗಿ 2025-26ನೇ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಆತಂಕ ದೂರವಾಗಿದೆ. 3ನೇ ಭಾಷೆಯ ಫಲಿತಾಂಶವು ಎಂದಿನಂತೆ ಅಂಕಗಳ ರೂಪದಲ್ಲಿಯೇ ಪ್ರಕಟವಾಗುವುದು ಖಚಿತವಾಗಿದೆ.

