ರೋಟರಿ ಕ್ಲಬ್ ಹಾಗೂ ಯಕ್ಷ ಕಲಾ ಬಳಗದಿಂದ ಚಿತ್ರದುರ್ಗದಲ್ಲಿ ‘ಭಕ್ತ ಮಯೂರ ಧ್ವಜ’ ತಾಳಮದ್ದಳೆ ಕಾರ್ಯಕ್ರಮ.
ಚಿತ್ರದುರ್ಗ :
ಯಕ್ಷಗಾನ ತಾಳಮದ್ದಳೆ ಎಂಬುದು ಕೇವಲ ಮನರಂಜನೆಯ ಕಲೆಯಲ್ಲ, ಬದಲಾಗಿ ಅದು ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ಮೌಲ್ಯಗಳು ಹಾಗೂ ಜೀವನದ ಆದರ್ಶಗಳನ್ನು ಜನರಿಗೆ ತಲುಪಿಸುವ ಅಪರೂಪದ ಕಲಾ ಪ್ರಕಾರವಾಗಿದೆ ಎಂದು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ಆಫ್ ಚಿತ್ರದುರ್ಗ, ಯಕ್ಷ ಕಲಾ ಬಳಗ, ಚಿತ್ರದುರ್ಗ, ಹಾಗೂ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ ಅವರು, ವೇಷಭೂಷಣ ಮತ್ತು ನೃತ್ಯವಿಲ್ಲದೆ ಕೇವಲ ಭಾಗವತರ ಗಾಯನ, ಚಂಡೆ–ಮದ್ದಳೆಯ ನಾದ ಹಾಗೂ ಅರ್ಥಪೂರ್ಣ ಸಂವಾದಗಳ ಮೂಲಕ ಪುರಾಣ ಕಥೆಗಳನ್ನು ಜೀವಂತವಾಗಿ ಪ್ರಸ್ತುತಪಡಿಸುವ ವಿಶಿಷ್ಟ ಕಲಾರೂಪವೇ ತಾಳಮದ್ದಳೆ. ಇದು ಕಲಾವಿದರ ಜ್ಞಾನ, ವಾಕ್ಚಾತುರ್ಯ, ಸಾಹಿತ್ಯಪ್ರಜ್ಞೆ ಮತ್ತು ತಕ್ಷಣದ ವಿಚಾರಶಕ್ತಿಯನ್ನು ಅನಾವರಣಗೊಳಿಸುವ ಅದ್ಭುತ ವೇದಿಕೆಯಾಗಿದೆ. ‘ಭಕ್ತ ಮಯೂರ ಧ್ವಜ’ ಪ್ರಸಂಗವು ಭಕ್ತಿ, ತ್ಯಾಗ, ಸತ್ಯನಿಷ್ಠೆ ಮತ್ತು ಧರ್ಮಪಾಲನೆಯ ಶ್ರೇಷ್ಠ ಆದರ್ಶಗಳನ್ನು ಸಾರುವ ಅಮೂಲ್ಯ ಕಥೆಯಾಗಿದೆ. ಇಂತಹ ಪ್ರಸಂಗಗಳು ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಮಾಜ ಸೇವೆಯ ಜೊತೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕೂ ರೋಟರಿ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಚಿತ್ರದುರ್ಗ ಯಕ್ಷ ಕಲಾ ಬಳಗದ ಅಧ್ಯಕ್ಷ ಅನಂತಕೃಷ್ಣ ಅವರು ಕಾರ್ಯಕ್ರಮ ಆಯೋಜನೆಗೆ ಶ್ರಮಿಸಿದ ಎಲ್ಲಾ ಆಯೋಜಕರಿಗೆ, ಕಲಾವಿದರಿಗೆ, ಸಹಕಾರ ನೀಡಿದ ದಾನಿಗಳಿಗೆ ಹಾಗೂ ಸಾಂಸ್ಕೃತಿಕ ಅಭಿಮಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನಮ್ಮ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಸೇತುವೆಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ನ ಸಂಯೋಜಕ ವಿದ್ವಾನ್ ಅನಂತ ಪದ್ಮನಾಭ ಫಾಟಕ್, ರೋಟರಿ ಕ್ಲಬ್ ಚಿತ್ರದುರ್ಗ ಕಾರ್ಯದರ್ಶಿ ರೊ. ಮಂಜುನಾಥ್ ಕೆ ಜಿ, ರೊ. ಲಕ್ಷ್ಮಣ್ ಎಂ.ಆರ್, ಸಾಹಿತಿ ಬಿ. ರಾಜಶೇಖರಪ್ಪ, ಇನ್ನರ್ ವೀಲ್ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷೆ ರಾಧಾ ಸತೀಶ್ ಹಾಗೂ ಕಲಾವಿದರಾದ ಅನಂತ ಹೆಗಡೆ ದಂತಳಿಗೆ, ವಿಶ್ವೇಶ್ವರ ಭಟ್ ಸುಣ್ಣಂಬಳ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಭಟ್, ಗಣೇಶ ಭಟ್ ಸುಂಕಸಾಳ, ಸುಹಾಸ್ ಮರಾಠೆ ಹಾಗೂ ಅನೇಕ ಸಾಹಿತ್ಯಾಸಕ್ತರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j