ವರದಿ ಮತ್ತು ಪೋಟೋ ಕೃಪೆ, ಸುರೇಶ್ ಪಟ್ಟಣ್
ಚಿತ್ರದುರ್ಗ ಏ 29
ನನ್ನ ವಿಧಾನಸಭಾ ಮತ ಕ್ಷೇತ್ರದ 8 ಕೆರೆಗಳಿಗೆ ಭದ್ರ ನೀರು ಹರಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.ಬೆಂಗಳೂರಿನ ಕೃಷ್ಣ ನಿವಾಸದಲ್ಲಿ ಮುಖ್ಯ ಮಂತ್ರಿಗಳನ್ನು ಬುಧವಾರ ಭೇಟಿ ನೀಡಿ ಕರೆಗಳನ್ನು ತುಂಬಿಸುವ ಯೋಜನೆ ಬಗ್ಗೆ ಚರ್ಚಿಸಿದ್ದಾರೆ.
ಭದ್ರ ಮೇಲ್ದಂಡೆ ಯೋಜನೆಯಲ್ಲಿರುವ ಚಿತ್ರದುರ್ಗ ತಾಲ್ಲೂಕಿನ ಒಟ್ಟು 28966 ಹೆಚ್ಚುವರಿ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸಿ 09 ಕೆರೆಗಳನ್ನು ಮಾತ್ರ ತುಂಬಿಸಲು ಡಿ.ಪಿ.ಆರ್‍ನಲ್ಲಿ ಯೋಜಿಸಲಾಗಿರುತ್ತದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಬರುವ 03 ಕೆರೆಗಳಾದ ಕಾತ್ರಾಳು ಕೆರೆ, ಮುದ್ದಾಪುರ ಕೆರೆ ಮತ್ತು ಯಳಗೋಡು ಕೆರೆಗಳಿಗೆ ಒಟ್ಟು 0.147 ಟಿ.ಎಂ.ಸಿ ನೀರನ್ನು ತುಂಬಿಸಲು ಜಗಳೂರು ಶಾಖಾ ಕಾಲುವೆ-2 (ಚಿತ್ರದುರ್ಗ ಬ್ಲಾಕ್) ಕಾಮಗಾರಿಯಲ್ಲಿ ಯೋಚಿಸಲಾಗಿರುತ್ತದೆ. ಆದರೆ ಈ ಮೂರು ಕರೆಗಳು ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಕೈಗೊಳ್ಳಲಾಗಿರುವ ಭರಮಸಾಗರ ಏತ ನೀರಾವರಿ ಯೋಜನೆಯಲ್ಲಿ ಸೇರ್ಪಡೆಗೊಂಡಿದ್ದು, ಕೆರೆಗಳಿಗೆ ಈಗಾಗಲೇ ಪೈಪ್ ಅಳವಡಿಕೆ ಕಾಮಗಾರಿಯೂ ಕೂಡ ಪೂರ್ಣಗೊಂಡಿರುತ್ತದೆ. ಪ್ರಸ್ತುತ ಈ ಮೂರು ಕೆರೆಗಳನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವತಿಯಿಂದ ಕೈಗೆತ್ತಿಕೊಳ್ಳುವುದರಿಂದ ಕೈಬಿಡಲು ಈಗಾಗಲೇ ಅನುಮೋದನೆ ದೊರೆತಿರುತ್ತದೆ.


ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಠದ ಕುರುಬರಹಟ್ಟಿ ಕೆರೆ, ಕಾಟಿಹಳ್ಳಿ ಕೆರೆ, ಸಿದ್ದಾಪುರ ಕೆರೆ, ಮಾನಂಗಿ ಕೆರೆ, ಹುಲ್ಲೂರು ಕೆರೆ, ತಿಮ್ಮಣ್ಣನಾಯಕನ ಕೆರೆ, ನಂದೀಪುರ ಕೆರೆ ಮತ್ತು ಅನ್ನೇಹಾಳು ಕೆರೆ ಒಟ್ಟು ಎಂಟು ಕೆರೆಗಳು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸೇರ್ಪಡೆಯಾಗದೇ ಇರುವುದರಿಂದ ಈ ಭಾಗದ ರೈತರುಗಳು ಹಾಗೂ ಗ್ರಾಮಸ್ಥರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಈ ಭಾಗದ ಗ್ರಾಮಗಳು. ಬರಗಾಲ ಪೀಡಿತ ಪ್ರದೇಶವಾಗಿದ್ದು ಈ ಎಂಟು ಕೆರೆಗಳನ್ನು ತುಂಬಿಸುವುದರಿಂದ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಅಂರ್ತಜಲ ಮಟ್ಟ ಹೆಚ್ಚಾಗುವುದಲ್ಲದೇ ಜನ ಜಾನುವಾರುಗಳಿಗೆ ಕೂಡ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ ಎಂದು ಶಾಸಕ ಕೆ ಸಿ ವೀರೇಂದ್ರ ಪಪ್ಪಿ ರವರು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟರಾದ ದೊಡ್ಡಣ್ಣ, ಸುರೇಶ್ ಬಾಬು ಉಪಸ್ಥಿತರಿದ್ದರು.

