NEET-UG- 20267 ರಿಂದ 10 ದಿನಗಳಲ್ಲಿ ನೀಟ್ ಮರುಪರೀಕ್ಷೆ ವೇಳಾಪಟ್ಟಿ ಪ್ರಕಟ; ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಅವರು ರದ್ದಾಗಿರುವ ನೀಟ್-ಯುಜಿ (NEET-UG 2026) ಪರೀಕ್ಷೆಯ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಮುಂದಿನ 7 ರಿಂದ 10 ದಿನಗಳ ಒಳಗೆ ಮರುಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಅವರು ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಖ್ಯಾಂಶಗಳು:

  • ಹೊಸ ಶುಲ್ಕವಿಲ್ಲ, ಹಳೆಯ ಶುಲ್ಕ ವಾಪಸ್: ಮರುಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಜೊತೆಗೆ, ಮೊದಲ ಪರೀಕ್ಷೆಗೆ ಕಟ್ಟಲಾಗಿದ್ದ ಶುಲ್ಕವನ್ನು ಅಭ್ಯರ್ಥಿಗಳಿಗೆ ಮರುಪಾವತಿ ಮಾಡಲಾಗುವುದು.
  • ಮರು-ನೋಂದಣಿ ಅಗತ್ಯವಿಲ್ಲ: ವಿದ್ಯಾರ್ಥಿಗಳು ಮರುಪರೀಕ್ಷೆಗಾಗಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅಥವಾ ನೋಂದಣಿ ಮಾಡುವ ಅವಶ್ಯಕತೆಯಿಲ್ಲ. ಈ ಹಿಂದೆ ನಿಗದಿಪಡಿಸಲಾಗಿದ್ದ ಪರೀಕ್ಷಾ ಕೇಂದ್ರಗಳಲ್ಲೇ ಮರುಪರೀಕ್ಷೆಗಳು ನಡೆಯಲಿವೆ.
  • ಕಠಿಣ ಕ್ರಮದ ಭರವಸೆ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಂಸ್ಥೆ ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಿಬಿಐ (CBI) ತನಿಖಾ ದಳವನ್ನು ಒತ್ತಾಯಿಸಿದೆ. ಎನ್‌ಟಿಎ ಆಂತರಿಕ ಸಿಬ್ಬಂದಿ ಶಾಮೀಲಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಡಿಜಿ ಎಚ್ಚರಿಸಿದ್ದಾರೆ.

ಅಕ್ರಮ ತಡೆಗೆ ಹೆಚ್ಚಿನ ನಿಗಾ: 2024ರಲ್ಲೂ ಇದೇ ರೀತಿಯ ಆರೋಪಗಳು ಕೇಳಿಬಂದಿದ್ದವು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಶ್ನೆಪತ್ರಿಕೆ ಸೋರಿಕೆ ವ್ಯವಸ್ಥೆಯು ಸಂಪೂರ್ಣವಾಗಿ ನಿಲ್ಲಬೇಕು. ನಡೆದಿರುವುದು ದೊಡ್ಡ ತಪ್ಪು, ಹಾಗಾಗಿ ನೈತಿಕ ಜವಾಬ್ದಾರಿ ಹೊತ್ತು ಪರೀಕ್ಷೆಯನ್ನು ರದ್ದುಗೊಳಿಸಿದ್ದೇವೆ. ಮುಂಬರುವ ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಲೋಪದೋಷಗಳಾಗದಂತೆ ಕಟ್ಟೆಚ್ಚರ ವಹಿಸಲಾಗುವುದು,” ಎಂದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅಭಯ ನೀಡಿದ್ದಾರೆ. ಇದೇ ಸಂದರ್ಭದಲ್ಲಿ, ಪರೀಕ್ಷಾ ರದ್ದತಿ ಹಾಗೂ ಅಕ್ರಮಗಳ ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಿರಾಕರಿಸಿದ್ದಾರೆ.

ಹಿನ್ನೆಲೆ: ದೇಶದಾದ್ಯಂತ ಎಂಬಿಬಿಎಸ್ (MBBS), ಬಿಡಿಎಸ್ (BDS) ಸೇರಿದಂತೆ ಇತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 3ರಂದು ನೀಟ್-ಯುಜಿ 2026 ಪರೀಕ್ಷೆಯನ್ನು ನಡೆಸಲಾಗಿತ್ತು. ಭಾರೀ ಅಕ್ರಮಗಳು ವರದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿ, ತನಿಖೆಯ ಹೊಣೆಯನ್ನು ಸಿಬಿಐಗೆ ಒಪ್ಪಿಸಿದೆ. ಈ ಪರೀಕ್ಷೆಯನ್ನು ದೇಶದ 551 ಹಾಗೂ ಅಂತಾರಾಷ್ಟ್ರೀಯ ಮಟ್ಟದ 14 ನಗರಗಳು ಸೇರಿದಂತೆ ಒಟ್ಟು 5,400ಕ್ಕೂ ಅಧಿಕ ಕೇಂದ್ರಗಳಲ್ಲಿ ಆಯೋಜಿಸಲಾಗಿತ್ತು. ಸರಿಸುಮಾರು 22.79 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

Leave a Reply

Your email address will not be published. Required fields are marked *