ಚಿತ್ರದುರ್ಗ ಮೇ. 21
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿರುವ ಮರಗಳನ್ನು ಕಡಿದು ಮಹಿಳಾ ಕಾಲೇಜು ನಿರ್ಮಾಣ ಮಾಡಲು ಅನುಮತಿ ನೀಡಿರುವುದನ್ನು ವಿರೋಧಿಸಿದ ಪರಿಸರ ವಾದಿಗಳು ಗುರುವಾರ ಪ್ರತಿಭಟನೆಯನ್ನು ನಡೆಸಿ ಮರಗಳನ್ನು ಕಡಿದು ಕಾಲೇಜು ನಿರ್ಮಾಣ ಮಾಡುವುದರ ಬೇಡ ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಚಿತ್ರದುರ್ಗದ ಕೇಂದ್ರ ಭಾಗದಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿರುವ 200 ಮರಗಳನ್ನು ಕಡಿದು ಮಹಿಳಾ ಕಾಲೇಜು ನಿರ್ಮಾಣ ಮಾಡಲು ಅನುಮತಿ ನೀಡಿರುವ ಬಗ್ಗೆ ವಿಷಯ ತಿಳಿದು ನಮಗೆಲ್ಲಾ ಅಘಾತವಾಗಿದೆ. 200 ಕ್ಕಿಂತ ಹೆಚ್ಚು ಮರಗಳನ್ನ ನಾಶ ಮಾಡಿ, ಅಲ್ಲಿ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ಕಟ್ಟುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಹಾಗೂ ಅಮೂಲ್ಯವಾದ ಸಸ್ಯ, ಪ್ರಾಣಿ, ಜಲಚರಗಳನ್ನ ಕಳೆದುಕೊಳ್ಳುತ್ತೇವೆ. ಹೆಚ್ಚುತ್ತಿರುವ ತಾಪಮಾನ ಚಿತ್ರದುರ್ಗ ನಗರವನ್ನ ಬಿಸಿಯಾಗಿಸುತ್ತಿದೆ, ಪರಿಸರ ಉಳಿಸಬೇಕಾಗಿದ್ದಂತಹ ಜಿಲ್ಲಾಡಳಿತ, ಕಾಲೇಜು ಶಿಕ್ಷಣ ಇಲಾಖೆ, ಪರಿಸರ ವಿರೋಧಿ ಕೆಲಸ ಮಾಡುತ್ತಿರು ವುದು ಶೋಚನೀಯವಾಗಿದೆ ಎಂದು ತಿಳಿಸಿದ್ದಾರೆ.
ಒಂದು ಸರ್ಕಾರಿ ಕಾಲೇಜಿನ ಮುಂಭಾಗದಲ್ಲಿ ಇನ್ನೊಂದು ಸರ್ಕಾರಿ ಕಾಲೇಜನ್ನ ತೆಗೆಯುವುದರಿಂದ ಎರಡು ಕಾಲೇಜುಗಳಿಗೂ ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದು, ಯಾವುದಾದರೂ ಒಂದು ಕಾಲೇಜನ್ನು ಮುಚ್ಚಲು ಸಿದ್ಧಗೊಳಿಸಿದಂತಾಗುತ್ತದೆ, ಪುರುಷ ವಿದ್ಯಾರ್ಥಿಗಳು ಓದುತ್ತಿರುವಂತ ಕಾಲೇಜಿನ ಮುಂಭಾಗದಲ್ಲಿ ಮಹಿಳಾ ಕಾಲೇಜನ್ನ ತೆಗೆಯುವುದು ಅಷ್ಟು ಸುರಕ್ಷಿತವಲ್ಲ, ಅವು ವಿದ್ಯಾರ್ಥಿಗಳ ಮಧ್ಯೆ ಜಗಳಕ್ಕೆ ಕಾರಣವಾಗುತ್ತದೆ, ಹಿಂದೆಲ್ಲ ಕಲಾ ಕಾಲೇಜು ಮತ್ತು ವಿಜ್ಞಾನ ಕಾಲೇಜು ಒಟ್ಟಿಗೆ ಇದ್ದಾಗ, ವಿದ್ಯಾರ್ಥಿಗಳ ಮಧ್ಯೆ ಮನಸ್ತಾಪಗಳಾಗಿ, ಜಗಳಗಳಾಗಿ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಹರಸಾಹಸ ಪಡುತ್ತಿದ್ದರು. ಅದೇ ರೀತಿ ಈಗ ಮತ್ತೊಮ್ಮೆ ಸೃಷ್ಟಿಯಾಗುವುದು ಒಳ್ಳೆಯದಲ್ಲ. ಈಗಾಗಲೇ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬರುತ್ತಿದೆ, ಇಂತಹ ಸಂದರ್ಭದಲ್ಲಿ ಮತ್ತೊಂದು ಹೊಸ ಕಾಲೇಜನ್ನು ಅದರ ಮುಂಭಾಗದಲ್ಲಿ ಕಟ್ಟುವುದು ಅನ್ಯಾಯಕರ.ಮಹಿಳಾ ಕಾಲೇಜನ್ನು ಆಯ್ಕೆ ಮಾಡಿರುವ ಸ್ಥಳದ ಅಕ್ಕಪಕ್ಕದಲ್ಲಿ ಖಾಲಿ ಜಾಗಗಳಿದ್ದು ಅಲ್ಲಿ ಅದನ್ನು ನಿರ್ಮಾಣ ಮಾಡಿದರೆ ಪರಿಸರವು ಉಳಿದೀತು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವೂ ಆಗುತ್ತದೆ ಎಂದಿದ್ದಾರೆ.
ಒಂದು ಐತಿಹಾಸಿಕ ಹೆಸರಿರುವ ಕಾಲೇಜಿನ ಮುಂಭಾಗದಲ್ಲಿ ಇನ್ನೊಂದು ಕಾಲೇಜನ್ನು ಕಟ್ಟಿದರೆ, ಅದರಲ್ಲೂ ಬಹು ಮಹಡಿಯ ಕಟ್ಟಡ ಕಟ್ಟಿದರೆ, ಈಗ ಇರುವ ವಿಜ್ಞಾನ ಕಾಲೇಜಿನ ಸೌಂದರ್ಯವೂ ಹಾಳಾಗುತ್ತದೆ ಹಾಗೂ ಅದು ಮುಂದೆ ಬೆಳವಣಿಗೆ ಆಗಲು ಸಹ ಅನಾನುಕೂಲಕರವಾಗುತ್ತದೆ. ಈಗ ಆಯ್ಕೆಯಾಗಿರುವ ಜಾಗದ ಪಕ್ಕದಲ್ಲಿ ಖಾಲಿ ಜಾಗವಿದ್ದು, ಅಲ್ಲಿ ಆ ಕಾಲೇಜನ್ನ ನಿರ್ಮಾಣ ಮಾಡಿದರೆ, ಎರಡು ಕಾಲೇಜಿನ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಮರಗಳ ಆಶ್ರಯ ದೊರಕುತ್ತದೆ. ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಎಲ್ಲ ಕಡೆ ಮರ ನೆಟ್ಟರೆ ನಾವು ಚಿತ್ರದುರ್ಗ ಜಿಲ್ಲೆಯಲ್ಲಿ ಮರಗಳನ್ನು ಕಡಿಯುವ ಯೋಜನೆ ಹಾಕಿಕೊಂಡಿರುವುದು ದುಃಖಕರವಾಗಿದೆ. ಕಾಲೇಜಿ ನಿರ್ಮಾಣದ ಬಗ್ಗೆ ಮತ್ತೊಮ್ಮೆ ಸ್ಥಳ ವೀಕ್ಷಣೆ ಮಾಡಿ ಇದರ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ, ಮಹಿಳಾ ಕಾಲೇಜನ್ನು ಪಕ್ಕದಲ್ಲಿ ಖಾಲಿ ಇರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಜಾಗದಲ್ಲಿ ಅಥವಾ ಇನ್ನಿತರ ಸೂಕ್ತವಾದ ಜಾಗದಲ್ಲಿ ನಿರ್ಮಾಣ ಮಾಡುವಂತೆ ತಾವುಗಳು ನಿರ್ದೇಶನ ನೀಡಬೇಕೆಂದು, ಹೆಚ್ಚುತ್ತಿರುವ ತಾಪಮಾನ, ಪರಿಸರ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಮನವರಿಕೆ ಮಾಡಿಕೊಡಬೇಕೆಂದು ನಾವು ಚಿತ್ರದುರ್ಗ ನಾಗರಿಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಪರವಾಗಿ, ಮನವಿಯನ್ನು ಮಾಡಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಪತ್ರಾಂಕಿತ ಕಚೇರಿ ಸಹಾಯಕರಾದ ತನುಜಾ ಸವದತ್ತಿ ಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪರಿಸರವಾದಿ ಎಚ್.ಎಸ್.ಕೆ.ಸ್ವಾಮಿ, ಕಲಾವಿದ ನಾಗರಾಜ್ ಬೇದ್ರೇ, ನಿವೃತ್ತ ಪಿಎಸ್ ಐ, ನಾಗರಾಜ್, ಪರಿಸರ ವನ್ಯಜೀವಿ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಮಾಲತೇಶ್ ಅರಸ್, ತೇಜು ಮೂರ್ತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.