ರಾಜ್ಯ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ಹೈಕಮಾಂಡ್ ಆಫರ್‌ಗೆ ಮಣಿದು ಸಿಎಂ ಸ್ಥಾನ ತ್ಯಜಿಸಲು ಸಿದ್ದು ನಿರ್ಧಾರ?

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಇದೀಗ ತೀವ್ರ ಕುತೂಹಲ ಘಟ್ಟ ತಲುಪಿವೆ. ದೆಹಲಿಯಲ್ಲಿ ಹೈಕಮಾಂಡ್ ಜೊತೆ ನಡೆದ ಸುದೀರ್ಘ ಸಭೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ಗರಿಗೆದರಿವೆ.

ದೆಹಲಿಯಲ್ಲಿ 6 ಗಂಟೆಗಳ ಮ್ಯಾರಾಥಾನ್ ಸಭೆ: ಕಾಂಗ್ರೆಸ್ ವರಿಷ್ಠರ ನೇತೃತ್ವದಲ್ಲಿ ನವದೆಹಲಿಯಲ್ಲಿ ಸತತ ಆರು ಗಂಟೆಗಳ ಕಾಲ ಮಹತ್ವದ ಸಭೆ ನಡೆದಿದ್ದು, ಇದರಲ್ಲಿ ರಾಜ್ಯದ ನಾಯಕತ್ವ ಬದಲಾವಣೆಯ ಕುರಿತು ಗಂಭೀರ ಚರ್ಚೆಗಳು ನಡೆದಿವೆ. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಸಭಾ ಸ್ಥಾನದ ಆಫರ್ ನೀಡಿದ್ದು, ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಆಗಮಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಪ್ತರೊಂದಿಗೆ ರಹಸ್ಯ ಸಭೆ – ರಾಜೀನಾಮೆಗೆ ಮುಂದು? ರಾಹುಲ್ ಗಾಂಧಿ ಅವರ ಈ ಪ್ರಸ್ತಾಪಕ್ಕೆ ಸಭೆಯಲ್ಲಿ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ, ಸಭೆ ಮುಗಿದ ತಕ್ಷಣವೇ ಸಚಿವ ಕೆ.ಜೆ. ಜಾರ್ಜ್ ಅವರ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ತಮ್ಮ ಆಪ್ತ ಸಚಿವರು ಹಾಗೂ ಶಾಸಕರೊಂದಿಗೆ ಮಹತ್ವದ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಚರ್ಚೆಯ ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಆಪ್ತರ ಒತ್ತಾಯಕ್ಕೆ ಮಣಿಯದ ಸಿದ್ದರಾಮಯ್ಯ: ಸಿಎಂ ನಿರ್ಧಾರದಿಂದ ಕಂಗಾಲಾದ ಅವರ ಆಪ್ತ ಶಾಸಕರು ಮತ್ತು ಸಚಿವರು, “ಯಾವುದೇ ಕಾರಣಕ್ಕೂ ತಾವು ರಾಜೀನಾಮೆ ನೀಡಬಾರದು. ನಿಮ್ಮ ಪರವಾಗಿ ನಾವೇ ಖುದ್ದಾಗಿ ರಾಹುಲ್ ಗಾಂಧಿ ಅವರ ಬಳಿ ಮಾತನಾಡುತ್ತೇವೆ” ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ ಆಪ್ತರ ಈ ಒತ್ತಾಯವನ್ನು ನಯವಾಗಿಯೇ ತಳ್ಳಿಹಾಕಿರುವ ಸಿದ್ದರಾಮಯ್ಯ, “ನಾನು ರಾಹುಲ್ ಗಾಂಧಿ ಅವರ ಮಾತನ್ನು ಮೀರಿ ನಡೆಯಲು ಸಾಧ್ಯವಿಲ್ಲ. ನಾನು ರಾಜೀನಾಮೆ ನೀಡುತ್ತೇನೆ. ನಿಮಗೆ ಬೇಕಿದ್ದರೆ ನೀವು ಹೋಗಿ ಅವರ ಬಳಿ ಮಾತನಾಡಿ” ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *