
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 06
ಇಂದಿನ ದಿನಮಾನದಲ್ಲಿ ಪರಿಸರ ಹಾಗೂ ಮನಸ್ಥಿತಿಗಳು ಕಲುಷಿತವಾಗಿವೆ, ನಾವುಗಳು ಬೇರೆಯವರು ಹಾಕಿದ ಮರಗಳಲ್ಲಿ ಇಂದು ನೆರಳನ್ನು ಪಡೆಯುತ್ತಿದ್ದೇವೆ ಇದೆ ರೀತಿ ಮುಂದಿನ ಪೀಳಿಗೆ ಇಂದು ನಾವು ಹಾಕಿದ ಮರಗಳಲ್ಲಿ ನೆರಳನ್ನು ಪಡೆಯುವಂತಾಗಬೇಕಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವ ಕುಮಾರ ಸ್ವಾಮಿಗಳು ಹೇಳಿದರು.
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಸ್.ಜೆ.ಎಂ.ವಿದ್ಯಾಪೀಠ ಹಾಗೂ ಎಸ್.ಜೆ.ಎಂ. ವಿಶ್ವವಿದ್ಯಾಲಯದವತಿಯಿಂದ ಬ್ಯಾಂಕ್ ಕಾಲೋನಿ ಸಂಯುಕ್ತಾಶ್ರಯದಲ್ಲಿ ಶನಿವಾರ ವಿಶ್ವಪರಿಸರ ದಿನಾಚರಣೆ ಯ ಅಂಗವಾಗಿ ಆಯೋಜಿಸಲಾಗಿರುವ ಸಸಿ ನೆಡುವ ಸಪ್ತಾಹದ ಕಾರ್ಯಕ್ರಮದಡಿಯಲ್ಲಿ ನಗರದ ಹೊರ ವಲಯದ ಬ್ಯಾಂಕ್ ಕಾಲೋನಿಯಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಪರಿಸರ ಬೆಳಸುವ ಕಾರ್ಯ ಇಂದಿನ ಕೆಲವು ದಿನಗಳಿಗೆ ಮಾತ್ರ ಸೀಮೀತವಾಗದೆ ಇದು ನಿರಂತರವಾಗಿ ನಡೆಯುವ ಕಾರ್ಯವಾಗಬೇಕಿದೆ ಆಗ ಮಾತ್ರ ಪರಿಸರ ಸಂರಕ್ಷಣೆಯಾಗುತ್ತದೆ ಎಂದರು.
ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠವೂ ವರ್ಷವೀಡಿ ಸಮಾಜದ ಹಿತದೃಷ್ಟಿಯಿಂದ ವಿನೂತನ ಹಾಗೂ ವಿಶೇಷ ಅಭಿಯಾನದಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತ ಬಂದಿದೆ. ಈಗಾಗಲೇ ಆರು ದಿನಗಳಿಂದ ನಿರಂತರವಾಗಿ ಸಸಿ ನೆಡುವ ಸಪ್ತಾಹ ಕಾರ್ಯಕ್ರಮವನ್ನು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ, ಅರಣ್ಯ ಇಲಾಖೆ, ಶಾಲಾ-ಕಾಲೇಜುಗಳು ಹಾಗೂ ಸಂಘ-ಸಂಸ್ಥೆಗಳು ಜೊತೆಯಾಗಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಪ್ರಸ್ತುತ ನಾವೆಲ್ಲ ಭವಿಷ್ಯದ ಪೀಳಿಗೆಯ ಬಗ್ಗೆ ಎಚ್ಚರ ವಹಿಸಬೇಕಿದೆ.
ಮೊದಲು ನಾವು ಪರಿಸರವನ್ನು ಸಂರಕ್ಷಿಸಿದರೆ ಮುಂದಿನ ಪೀಳಿಗೆಯು ಸಹ ಪರಿಸರ ಸಂರಕ್ಷಿಸುವ ಪ್ರೀತಿಸುವ ಗುಣವನ್ನು ಬೆಳಸಿಕೊಳ್ಳುತ್ತದೆ. ಆದ್ದರಿಂದ ಈ ಸಸಿ ನೆಡುವ ಕಾರ್ಯಕ್ರಮ ಕೇವಲ ಔಪಚಾರಿಕವಾಗದೇ ಕಾರ್ಯಗತವಾಗಬೇಕು. ನಾವು ಗಿಡಗಳನ್ನು ನೆಟ್ಟಿದ್ದೇವೆ ಅವುಗಳನ್ನು ಸಂರಕ್ಷಿಸುವ ಕೆಲಸ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಎಂದರು.
ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವಿರೇಶ್ ಮಾತನಾಡಿ, ಮರುಘಾಮಠ ಯಾವುದೆ ಕೆಲಸವನ್ನು ಮಾಡಿದರೂ ಸಹಾ ಉತ್ತಮವಾದ ತಂಡವನ್ನು ಕಟ್ಟಿಕೊಂಡು ಯಾವುದೇ ಲೋಪ ಇಲ್ಲದೆ ಕೆಲಸವನ್ನು ಮಾಡುತ್ತದೆ, ಇದರಿಂದ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಚಿತ್ರದುರ್ಗವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವಲ್ಲಿ ಮಠದ ಪಾತ್ರ ಹೆಚ್ಚಾಗಿದೆ. ಚಿತ್ರದುರ್ಗದ ಹಲವಡೆಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಜನತೆಯಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವಂತ ಕಾರ್ಯವನ್ನು ಮಾಡುತ್ತಿದೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಣ ಇಲಾಖೆಯ ಅಧಿಕಾರಿ ಮಲ್ಲಣ್ಣ ಮಾತನಾಡಿದರು, ವೇದಿಕೆಯಲ್ಲಿ ಶ್ರೀಮತಿ ಲತಾ ಉಮೇಶ್, ರೆಡ್ಡಿ ಭಾಗವಹಿಸಿದ್ದರು. ಉಮೇಶ್ ಪತ್ತರ್ ಪ್ರಾರ್ಥಿಸಿದರೆ, ಉಮೇಶ್ ಸ್ವಾಗತಿಸಿದರು, ನಾಗರಾಜ್ ಸಂಗಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಕಾಲೋನಿಯಲ್ಲಿನ ಆಟದ ಮೈದಾನಕ್ಕೆ ಮುರುಘಾರಾಜೇಂದ್ರ ಆಟದ ಮೈದಾನದ ನಾಮ ಫಲಕವನ್ನು ಡಾ. ಬಸವ ಕುಮಾರ ಸ್ವಾಮಿಗಳು ಉದ್ಘಾಟಿಸಿದರು.