ದೇವರಾಜ್ ಅರಸು 64ನೇ ಪುಣ್ಯಸ್ಮರಣೆ: ಸಾಮಾಜಿಕ ನ್ಯಾಯದ ಹರಿಕಾರನಿಗೆ ಕಾಂಗ್ರೆಸ್ ನಾಯಕರ ನಮನ.

ಚಿತ್ರದುರ್ಗ ಜೂ. 06

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸು ಹಾಗೂ ಸಿದ್ದರಾಮಯ್ಯ ರವರು ಹಿಂದುಳಿದ ವರ್ಗಗಳ ಎರಡು ಕಣ್ಣುಗಳು ಇದ್ದಂತೆ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ತಿಳಿಸಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸು ರವರ 64ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರಸುರವರು ತಮ್ಮ ಅಧಿಕಾರದ ಅವಧಿಯಲ್ಲಿ ಸಣ್ಣ ಸಣ್ಣ ಜಾತಿಗಳನ್ನು ಗುರುತಿಸಿ ಅವರಿಗೆ ಟೀಕೆಟ್ ನೀಡಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ರಾಜಕೀಯ ಸ್ಥಾನವನ್ನು ಕಲ್ಪಿಸಿದ ಧೀಮಂತ ರಾಜಕಾರಣಿ ಯಾಗಿದ್ದರು, ಶೋಷಿತರಿಗೆ ನೊಂದವರಿಗೆ ಧ್ವನಿಯಾಗುವುದರ ಮೂಲಕ ಹಸಿರುಕ್ರಾಂತಿಯನ್ನು ಮಾಡಿ ಜನತೆ ಹಸಿವನ್ನು ನೀಗಿಸಿದ್ದರು, ಇಂದಿರಾಗಾಂಧಿಯವರ ಆಪ್ತರಾಗಿದ್ದ ಅವರು ಅವರ ಚುನಾವಣೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು ಎಂದರು.

1972-1977ರ ಅವಧಿಯಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಂದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೊದಲ ವ್ಯಕ್ತಿ ದೇವರಾಜ್ ಅರಸು. ಹಿಂದಿನ 25 ವರ್ಷಗಳ ಕಾಲ ಅಂದರೆ 1947 ರಿಂದ 1972 ರವರೆಗೆ, ಹಿಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಪ್ರಬಲ ಒಕ್ಕಲಿಗ ಅಥವಾ ಲಿಂಗಾಯತ ಸಮುದಾಯಗಳ ವ್ಯಕ್ತಿಗಳು ಮಾತ್ರ ಹೊಂದಿದ್ದರು. ಹೀಗಾಗಿ, ದೇವರಾಜ್ ಅರಸು ಅವರು ಆಗಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಬೆಂಬಲದೊಂದಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. 1972-1977ರ ಅವಧಿಯಲ್ಲಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕ/ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಇವರು. 2025 ರ ಹೊತ್ತಿಗೆ, ಅವರು ಕರ್ನಾಟಕದ ಅತಿ ಹೆಚ್ಚು ಕಾಲ (7 ವರ್ಷ 238 ದಿನಗಳು.) ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ,ತಾಜ್ ಪೀರ್ ಮಾತನಾಡಿ, ಡಿ. ದೇವರಾಜ ಅರಸು ರವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಹಿಂದುಳಿದ ವರ್ಗಗಳು, ದಲಿತರು ಮತ್ತು ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸಿದ `ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಪ್ರಸಿದ್ಧರಾಗಿದ್ದರು.ಇವರು ಎರಡು ಅವಧಿಗೆ (1972-1977 ಮತ್ತು 1978-1980) ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.ಸುಮಾರು 8 ವರ್ಷಗಳ ಕಾಲ ಸತತವಾಗಿ ಮುಖ್ಯಮಂತ್ರಿಯಾಗಿದ್ದು, ರಾಜ್ಯದಲ್ಲಿ ಸುದೀರ್ಘ ಆಡಳಿತ ನಡೆಸಿದ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರು.ಇಂದಿರಾ ಗಾಂಧಿಯವರ ನಾಯಕತ್ವದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿ ಕೊಂಡಿದ್ದರು ಎಂದರು.

ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಗೇಣಿದಾರರು ಮತ್ತು ಭೂಹೀನ ರೈತರಿಗೆ ಭೂಮಿಯ ಒಡೆತನವನ್ನು ನೀಡಿದರು.ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಎಲ್.ಜಿ. ಹಾವನೂರು ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದರು.1973 ರ ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಜೀತ ಪದ್ಧತಿ ಮತ್ತು ದಲಿತರು ಮಲಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮಗಳನ್ನು ಕೈಗೊಂಡರು ಎಂದು ತಿಳಿಸಿದರು.

ಡಿ. ದೇವರಾಜ್ ಅರಸು ಒಬ್ಬ ಸಮಾಜ ಸುಧಾರಕ. ಅರಸು ಬಡವರ ಪರವಾಗಿ ಹೋರಾಡಿದರು ಮತ್ತು ಕರ್ನಾಟಕದಲ್ಲಿ ಮೌನ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಅವರು ಬಡವರ ಧ್ವನಿಯಾಗಿದ್ದರು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ನಿಂತರು.ಅವರು ಮುನ್ನಡೆಸಿದ ಭೂ ಸುಧಾರಣೆಗಳು, ಅದರಲ್ಲಿ ಭೂಮಿಯನ್ನು ಉಳುಮೆ ಮಾಡುವವನು ಮಾಲೀಕನಾದವು, ಅನುಕರಣೀಯವಾಗಿತ್ತು. ಇದು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಿತು, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿತು. ಶ್ರೀಮಂತ ಬಡ್ಡಿದಾರರ ಹಿಡಿತದಿಂದ ಬಡ ಜನರನ್ನು ದೂರವಿಡುವಲ್ಲಿ ಅವರು ಮಾಡಿದ ಸಾಧನೆಗಳಿಗಾಗಿ ಅರಸು ಅವರನ್ನು ಸ್ಮರಿಸಬೇಕು. ಅವರ ಕ್ರಮಗಳು ಹಲವಾರು ಬದಲಾವಣೆಗಳನ್ನು ತಂದವು ಎಂದು ತಾಜ್ ಪೀರ್ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ, ಮಧುಗೌಡ, ಮುದಸಿರ್, ಪ್ರಕಾಶ್ ಖಾಸಿಂಆಲಿ, ವಾಸಿಂ, ರಂಗಸ್ವಾಮಿ, ಶಾಂತವೀರ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *