ಚಿತ್ರದುರ್ಗ| ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಐತಿಹಾಸಿಕವಾಗಲಿ: ಕಾಂಗ್ರೆಸ್ ಮುಖಂಡರ ಕರೆ.

ಚಿತ್ರದುರ್ಗ ಜೂ. 14

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್ ರವರು ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ವನ್ನು ಎಲ್ಲರು ಸೇರಿ ಯಶಸ್ವಿಗೂಳಿಸಬೇಕಿದೆ, ಇದಕ್ಕಾಗಿ ಜೂ, 21 ರಂದು ಬೆಂಗಳೂರಿನ ಅರಮನೆ ಮೈದಾನ ದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಹಸ್ರ ಪಕ್ಷದ ಕಾರ್ಯಕರ್ತರು ಮುಖಂಡರು ಆಗಮಿಸಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಮುರಳಿಧರ ಹಾಲಪ್ಪ ಕರೆ ನೀಡಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸಂಜೆ ನಡೆದ ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಪೂರ್ವ ಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಟ್ಟಾಳು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ, ನಾಲ್ಕು ಬಾರಿ ರಾಜ್ಯಸಭೆಗೆ ನೇಮಕಗೊಂಡಿದ್ದ ಸಂಘಟನಾ ಚತುರ ಬಿ.ಕೆ.ಹರಿಪ್ರಸಾದ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅವರ ನಾಯಕತ್ವ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಸಾಮಾನ್ಯ ಕಾರ್ಯಕರ್ತ, ವಿದ್ಯಾರ್ಥಿ ನಾಯಕನಾಗಿದ್ದ ಬಿ.ಕೆ.ಹರಿಪ್ರಸಾದ್‍ರವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ತಪ್ಪದೆ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಬೇಕು. ಜಿಲ್ಲೆಯ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರುಗಳು ಜನರನ್ನು ಕರೆತರಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಭಾರಿ ಸಂಖ್ಯೆಯಲ್ಲಿ ಜನ ಸೇರಿ ಶಕ್ತಿ ಪ್ರದರ್ಶಿಸಬೇಕಿದೆ. ರಾಜ್ಯ ಸರ್ಕಾರ ಈಗಾಗಲೆ ಮೂರು ವರ್ಷಗಳನ್ನು ಪೂರೈಸಿದ್ದು, ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷದ ಗೆಲುವಿಗೆ ಕಾರ್ಯಕರ್ತರು ಈಗಿನಿಂದಲೇ ಸಿದ್ದರಾಗಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಬಿ.ಕೆ.ಹರಿಪ್ರಸಾದ್‍ರವರು ಜೂ.21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪದಗ್ರಹಣ ಸ್ವೀಕರಿಸುತ್ತಿರುವ ಸಮಾರಂಭಕ್ಕೆ ಜಿಲ್ಲೆಯಿಂದ ಐದು ಸಾವಿರ ಜನ ಭಾಗವಹಿಸಲಿದ್ದಾರೆ. ಸರ್ಕಾರದ ಪಂಚ ಗ್ಯಾರೆಂಟಿಯಿಂದ ರಾಜ್ಯ ಹಸಿವು, ಬಡತನ ಮುಕ್ತವಾಗಿದೆ. ಇದನ್ನು ಸಹಿಸದೆ ಬಿಜೆಪಿ.ಯವರು ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸುತ್ತಿರುವುದರಲ್ಲಿ ಅರ್ಥವಿಲ್ಲ. ಬಿಹಾರ ಸೇರಿದಂತೆ ಅನೇಕ ರಾಜ್ಯಗಳು ನಮ್ಮ ಯೋಜನೆಗಳನ್ನು ಕಾಪಿ ಮಾಡಿ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದಿವೆ. ಪ್ರಜಾಪ್ರಭುತ್ವಕ್ಕೆ ಇದು ಮಾರಕ ಎಂದು ವಿರೋಧಿಗಳಿಗೆ ಹೆಚ್.ಆಂಜನೇಯ ತಿರುಗೇಟು ನೀಡಿ ಎಂಎಲ್‍ಸಿ. ಚುನಾವಣೆಯಲ್ಲಿ ಪಕ್ಷದ ನಿಷ್ಟಾವಂತರಿಗೆ ಅವಕಾಶ ನೀಡಬೇಕು. ಸದ್ಯದಲ್ಲಿಯೇ ಎಐಸಿಸಿ. ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಬಳಿ ನಿಯೋಗ ಹೊರಟು ನಮ್ಮ ಅಹವಾಲು ಸಲ್ಲಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಸಂಸದರಾದ ಬಿ.ಎನ್,ಚಂದ್ರಪ್ಪ, ಮಾಜಿ ಶಾಸಕರಾದ ಶ್ರೀಮತಿ ಜಯಮ್ಮ ಬಾಲರಾಜ್, ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್, ಆದಿ ಜಾಂಭವ ನಿಗಮದ ಜಿ.ಎಸ್.ಮಂಜುನಾಥ್, ಆರ್,ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್ ಕುಮಾರ್, ಎನ್.ಡಿ.ಕುಮಾರ್ ಚೇತನ, ಗ್ಯಾರೆಂಟಿ ಶಿವಣ್ಣ, ಭೂತೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *