ಇತ್ತೀಚಿನ ದಿನಗಳಲ್ಲಿ ಟಿವಿ ನೋಡುತ್ತಾ, ಮೊಬೈಲ್ ಬಳಸುತ್ತಾ ಅಥವಾ ಸ್ನೇಹಿತರೊಂದಿಗೆ ಮಾತನಾಡುತ್ತಾ ತಡರಾತ್ರಿಯವರೆಗೆ ಎಚ್ಚರವಿರುವುದು ಸಾಮಾನ್ಯವಾಗಿದೆ. ಈ ವೇಳೆ ಟೈಮ್‌ಪಾಸ್‌ಗಾಗಿ ಕುರುಕುಲು ತಿಂಡಿ, ಬಿಸ್ಕತ್ತು ಅಥವಾ ಇನ್ನಿತರ ಆಹಾರಗಳನ್ನು ಸೇವಿಸುವ ಅಭ್ಯಾಸ ಹಲವರಿಗಿರುತ್ತದೆ. ಆದರೆ, ಮಲಗುವ ಮುನ್ನ ಅಥವಾ ಮಧ್ಯರಾತ್ರಿಯಲ್ಲಿ ಹೀಗೆ ಆಹಾರ ಸೇವಿಸುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ತಡರಾತ್ರಿಯ ಅನಗತ್ಯ ಕ್ಯಾಲೊರಿಗಳು ದೇಹದಲ್ಲಿ ಕೊಬ್ಬಾಗಿ ಶೇಖರಣೆಯಾಗಿ, ತೂಕ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಹಾಗಾದರೆ, ರಾತ್ರಿ ಮಲಗುವ ಮುನ್ನ ಯಾವೆಲ್ಲಾ ಆಹಾರಗಳನ್ನು ನಾವು ಕಡ್ಡಾಯವಾಗಿ ತಪ್ಪಿಸಬೇಕು ಎಂಬುದರ ಮಾಹಿತಿ ಇಲ್ಲಿದೆ:
ರಾತ್ರಿ ಹೊತ್ತು ನೀವು ತ್ಯಜಿಸಬೇಕಾದ ಪ್ರಮುಖ ಆಹಾರಗಳು:
- ಸಿಹಿತಿಂಡಿಗಳು ಮತ್ತು ಸಕ್ಕರೆಯುಕ್ತ ಪಾನೀಯಗಳು: ರಾತ್ರಿ ಊಟದ ನಂತರ ಚಾಕೊಲೇಟ್, ಐಸ್ ಕ್ರೀಮ್ ಅಥವಾ ಸಿಹಿತಿಂಡಿಗಳನ್ನು ತಿಂದರೆ ಬೇಗ ನಿದ್ದೆ ಬರುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ವಾಸ್ತವವಾಗಿ, ಅತಿಯಾದ ಸಕ್ಕರೆ ಅಂಶವಿರುವ ಆಹಾರಗಳು ಹಾಗೂ ಎನರ್ಜಿ ಡ್ರಿಂಕ್‌ಗಳು ನಮ್ಮ ನಿದ್ರೆಯ ಗುಣಮಟ್ಟವನ್ನು ಹಾಳುಮಾಡುತ್ತವೆ. ಆದ್ದರಿಂದ ರಾತ್ರಿ ವೇಳೆ ಸಿಹಿಯಿಂದ ಆದಷ್ಟು ದೂರವಿರುವುದು ಒಳಿತು.
- ಜಿಡ್ಡಿನಂಶವಿರುವ ಹಾಗೂ ಜಂಕ್ ಫುಡ್‌ಗಳು: ಬರ್ಗರ್, ಪಿಜ್ಜಾ, ಕೇಕ್‌ನಂತಹ ಅತಿ ಹೆಚ್ಚು ಕೊಬ್ಬಿನಂಶವಿರುವ (High-fat) ಆಹಾರಗಳು ಜೀರ್ಣವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಇವು ಜೀರ್ಣಕ್ರಿಯೆಯ ವೇಗವನ್ನು ಕುಂಠಿತಗೊಳಿಸುವುದರಿಂದ, ಮರುದಿನ ಬೆಳಗ್ಗೆ ಎದ್ದಾಗ ದೇಹದಲ್ಲಿ ವಿಪರೀತ ಆಯಾಸ ಮತ್ತು ಆಲಸ್ಯ ಕಾಡಬಹುದು.
- ಕೆಫೀನ್ ಮತ್ತು ಆಮ್ಲೀಯ ಪದಾರ್ಥಗಳು: ತಂಪು ಪಾನೀಯಗಳು (Soft drinks) ಹಾಗೂ ಸಿಟ್ರಸ್ ಹಣ್ಣಿನ ಜ್ಯೂಸ್‌ಗಳು ಆಮ್ಲೀಯ ಗುಣವನ್ನು ಹೊಂದಿರುತ್ತವೆ, ಇವು ರಾತ್ರಿ ವೇಳೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು. ಇದರ ಜೊತೆಗೆ ನೈಟ್ ಶಿಫ್ಟ್ ಮಾಡುವವರು ನಿದ್ರೆ ಮತ್ತು ಆಯಾಸ ತಡೆಯಲು ಹೆಚ್ಚು ಕಾಫಿ, ಟೀ ಕುಡಿಯುತ್ತಾರೆ. ಇದರಿಂದ ನಿದ್ರಾಹೀನತೆ ಉಂಟಾಗುವುದರ ಜೊತೆಗೆ ದೇಹದ ತೂಕವೂ ಹೆಚ್ಚಾಗುವ ಅಪಾಯವಿದೆ.
- ಮಸಾಲೆಯುಕ್ತ ಹಾಗೂ ಅಧಿಕ ಪ್ರೋಟೀನ್ ಆಹಾರಗಳು: ಕೆಂಪು ಮಾಂಸ, ಚಿಕನ್, ಮೊಟ್ಟೆ, ಚೀಸ್ ಮುಂತಾದ ಅತಿ ಹೆಚ್ಚು ಪ್ರೋಟೀನ್ ಹಾಗೂ ಮಸಾಲೆಯುಕ್ತ ಆಹಾರಗಳನ್ನು ರಾತ್ರಿ ಹೊತ್ತು ಜೀರ್ಣಿಸಿಕೊಳ್ಳಲು ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲ ಮತ್ತು ನೀರಿನ ಅಗತ್ಯವಿರುತ್ತದೆ. ಇದರಿಂದ ಹೊಟ್ಟೆ ಭಾರವಾದಂತಾಗಿ ಅಜೀರ್ಣ ಸಮಸ್ಯೆ ಎದುರಾಗುತ್ತದೆ. ರಾತ್ರಿ ಊಟ ಯಾವಾಗಲೂ ಹಗುರವಾಗಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
- ರಾತ್ರಿ ವೇಳೆ ಮೊಸರಿನ ಬಳಕೆ ಬೇಡ: ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಮೊಸರಿನಲ್ಲಿ ಸಕ್ಕರೆ ಅಂಶ ಇರಬಹುದು. ಇದು ಆರೋಗ್ಯಕ್ಕೆ ಅಷ್ಟು ಸೂಕ್ತವಲ್ಲ. ರಾತ್ರಿ ವೇಳೆ ಮೊಸರನ್ನು ತಿನ್ನುವ ಬದಲು ಮಜ್ಜಿಗೆಯ ಬಳಕೆ ಉತ್ತಮ. ಅನಿವಾರ್ಯವಾದರೆ ಮನೆಯಲ್ಲೇ ತಯಾರಿಸಿದ ತಾಜಾ ಮೊಸರನ್ನು ಮಿತವಾಗಿ ಬಳಸಬಹುದು.
ವೈದ್ಯಕೀಯ ಸೂಚನೆ (Disclaimer): ಮೇಲೆ ನೀಡಲಾದ ಎಲ್ಲಾ ಮಾಹಿತಿಯು ಸಾಮಾನ್ಯ ಅರಿವು ಹಾಗೂ ಅಧ್ಯಯನಗಳ ಆಧಾರದ ಮೇಲೆ ಒದಗಿಸಲಾಗಿದೆ. ಇದು ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ. ನಿಮ್ಮ ದೇಹದ ಪ್ರಕೃತಿಗೆ ಅನುಗುಣವಾಗಿ ಆಹಾರ ಕ್ರಮವನ್ನು ಬದಲಾಯಿಸುವ ಮುನ್ನ ಪರಿಣಿತ ವೈದ್ಯರು ಅಥವಾ ಪೌಷ್ಟಿಕಾಂಶ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
https://whatsapp.com/channel/0029VbDbOsBD8SE2H0L3d40j
