ಸಾವಿನಲ್ಲೂ ಸಾರ್ಥಕತೆ: ದಿವಂಗತ ರಾಣಾ ಪ್ರತಾಪ ಸಿಂಹ ಪುಣ್ಯಸ್ಮರಣೆ ಅಂಗವಾಗಿ ಅರ್ಥಪೂರ್ಣ ರಕ್ತದಾನ ಶಿಬಿರ

ಸಮಗ್ರ ಸುದ್ದಿ ವರದಿ, ಚಿತ್ರದುರ್ಗ (ಜುಲೈ 06):

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಪ್ರಮುಖ ಮುಖಂಡರಾದ ಟೈಗರ್ ತಿಪ್ಪೇಸ್ವಾಮಿ ಅವರ ದ್ವಿತೀಯ ಪುತ್ರ ರಾಣಾ ಪ್ರತಾಪ ಸಿಂಹ (ಪ್ರತ್ತು) ಜೂನ್ 18 ರಂದು ಅಕಾಲಿಕವಾಗಿ ನಿಧನರಾಗಿದ್ದರು. ಸಾವಿನ ಭರಿಸಲಾಗದ ನೋವಿನಲ್ಲೂ ಅವರ ನೇತ್ರದಾನ ಮಾಡುವ ಮೂಲಕ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದರು. ಇದೀಗ ಅವರ ಪುಣ್ಯಸ್ಮರಣೆ ಕಾರ್ಯವನ್ನೂ ಸಮಾಜಮುಖಿಯಾಗಿ ಆಚರಿಸುವ ಮೂಲಕ ಕುಟುಂಬದವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೋಮವಾರ ತಮ್ಮ ಸ್ವಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಭೋಜನದ ವೇಳೆ, ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಸೀಮಿತವಾಗದೆ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಭಾಗವಹಿಸಿ ಬರೋಬ್ಬರಿ 21 ಯೂನಿಟ್ ರಕ್ತದಾನ ಮಾಡಿದರು.

ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ಪರದಾಡುವ ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಸತ್ಕಾರ್ಯದ ಮೂಲಕ ಮೃತರ ಆತ್ಮಕ್ಕೆ ವಿಶಿಷ್ಟ ರೀತಿಯಲ್ಲಿ ಶಾಂತಿ ಕೋರಲಾಯಿತು.

ಮೃತರ ಕುಟುಂಬದ ಈ ಮಾನವೀಯ ಕಳಕಳಿ ಹಾಗೂ ರಕ್ತದಾನ ಮಾಡಿದ ಯುವಕರ ಕಾರ್ಯವನ್ನು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ನಗರದ ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಟೈಗರ್ ತಿಪ್ಪೇಸ್ವಾಮಿ ಅವರ ಕುಟುಂಬಸ್ಥರು, ಆಪ್ತರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *