ಸಮಗ್ರ ಸುದ್ದಿ ವರದಿ, ಚಿತ್ರದುರ್ಗ (ಜುಲೈ 06):
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲದ ಸಮೀಪವಿರುವ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಹರಳಯ್ಯ ಸ್ವಾಮೀಜಿ ಅವರ ಮೇಲೆ ಭಾನುವಾರ ರಾತ್ರಿ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಠದ ಜಾಗದ ವಿಚಾರವಾಗಿ ಈ ಅಮಾನವೀಯ ಕೃತ್ಯ ನಡೆದಿದ್ದು, ಘಟನೆಯಿಂದ ಭಕ್ತರಲ್ಲಿ ಆತಂಕ ಮನೆಮಾಡಿದೆ.
ಘಟನೆಯ ವಿವರ: ಭಾನುವಾರ ರಾತ್ರಿ ಹರಳಯ್ಯ ಸ್ವಾಮೀಜಿ ಅವರು ಮಠದಲ್ಲಿ ವಿಶ್ರಮಿಸುತ್ತಿದ್ದ ವೇಳೆ ಏಕಾಏಕಿ ಒಳನುಗ್ಗಿದ ಸಿದ್ದೇಶ್ ಎಂಬ ವ್ಯಕ್ತಿ, ಜಾಗದ ವಿಚಾರವಾಗಿ ಕ್ಯಾತೆ ತೆಗೆದಿದ್ದಾನೆ. ವಾಗ್ವಾದದ ನಡುವೆ ಸ್ವಾಮೀಜಿಯವರ ಎದೆಗೆ ಜಾಡಿಸಿ ಒದ್ದಿರುವ ಆರೋಪಿ, ಕೋಲುಗಳಿಂದ ಮನಬಂದಂತೆ ಥಳಿಸಿದ್ದಾನೆ. ದಾಳಿಯ ತೀವ್ರತೆಗೆ ಸ್ವಾಮೀಜಿಯವರ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗಾಯಾಳು ಹರಳಯ್ಯ ಸ್ವಾಮೀಜಿ, “ಆರೋಪಿಯು ‘ಮಾದಿಗರಿಗೆ ಮಠ ಯಾಕೆ ಬೇಕು?’ ಎಂದು ಜಾತಿ ನಿಂದನೆ ಮಾಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ, ಮುಂದೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ” ಎಂದು ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಪೊಲೀಸ್ ಠಾಣೆಯಲ್ಲೂ ದಾಳಿ, ಪೊಲೀಸರ ನಿರ್ಲಕ್ಷ್ಯ: ಹಲ್ಲೆಗೊಳಗಾದ ಬಳಿಕ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಾಗ, ಅಲ್ಲಿಗೂ ಹಿಂಬಾಲಿಸಿ ಬಂದ ಆರೋಪಿ ಸಿದ್ದೇಶ್ ಮತ್ತೆ ಹಲ್ಲೆ ನಡೆಸಿದ್ದಾನೆ ಎಂದು ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಹಿಂದೆಯೂ ಇಂತಹ ಘಟನೆ ನಡೆದಿದ್ದರೂ ಐಮಂಗಲ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದಲೇ ಆರೋಪಿ ಮತ್ತೆ ಈ ಕೃತ್ಯ ಎಸಗಿದ್ದಾನೆ. ಕರ್ತವ್ಯ ಲೋಪ ಎಸಗಿರುವ ಪಿಎಸ್‌ಐ ಹಾಗೂ ಇಬ್ಬರು ಪೊಲೀಸರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೊಡ್ಡ ಸ್ವಾಮೀಜಿಗಳ ಕೈವಾಡದ ಶಂಕೆ: “ನನ್ನ ಮೇಲಿನ ಈ ದಾಳಿಯ ಹಿಂದೆ ದೊಡ್ಡ ದೊಡ್ಡ ಸ್ವಾಮೀಜಿಗಳ ಕೈವಾಡವಿದೆ. ಅವರ ಕುಮ್ಮಕ್ಕಿನಿಂದಲೇ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಸೂಕ್ತ ಸಂದರ್ಭ ಬಂದಾಗ ಆ ಸ್ವಾಮೀಜಿಗಳ ಹೆಸರುಗಳನ್ನು ಖಂಡಿತವಾಗಿಯೂ ಬಯಲು ಮಾಡುತ್ತೇನೆ” ಎಂದು ಹರಳಯ್ಯ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಗೊಂಡಿರುವ ಸ್ವಾಮೀಜಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: