ರೈತರ ಆರ್ಥಿಕ ಸಬಲೀಕರಣದಲ್ಲಿ ಸಹಕಾರಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದು: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

ಸಮಗ್ರ ಸುದ್ದಿ ವರದಿ, ಚಿತ್ರದುರ್ಗ (ಜುಲೈ 06):

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರೈತರ ಆರ್ಥಿಕ ಸದೃಢತೆ ಹಾಗೂ ಸಮಗ್ರ ಅಭಿವೃದ್ಧಿಯಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ ತಿಳಿಸಿದ್ದಾರೆ.

ಸೋಮವಾರ ನಗರದ ಎಬಿಸಿ ಬುಕ್ ಸೆಂಟರ್ ಸಮೀಪವಿರುವ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (PCARD) ನವೀಕೃತ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಹಾಗೂ ಕೃಷಿ ಯಂತ್ರೋಪಕರಣಗಳ ಖರೀದಿಗೆ ಅಗತ್ಯ ಆರ್ಥಿಕ ನೆರವು ಒದಗಿಸುವ ಮೂಲಕ ರೈತರನ್ನು ಖಾಸಗಿ ಸಾಲದ ಶೂಲದಿಂದ ಪಾರು ಮಾಡುವಲ್ಲಿ ಸಹಕಾರಿ ಬ್ಯಾಂಕ್‌ಗಳು ಶ್ರಮಿಸುತ್ತಿವೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್‌ನ ಸದಸ್ಯತ್ವ ಪಡೆದು, ಲಭ್ಯವಿರುವ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು,” ಎಂದು ಅವರು ಕರೆ ನೀಡಿದರು.

ರೂ. 10 ಲಕ್ಷ ಅನುದಾನ ಘೋಷಣೆ: ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದ ಶಾಸಕರು, ಪ್ರಾಥಮಿಕ ಸಹಕಾರಿ ಕೃಷಿ ಬ್ಯಾಂಕ್‌ನ ಅಭಿವೃದ್ಧಿಗಾಗಿ ಸ್ಥಳದಲ್ಲೇ 10 ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಣೆ ಮಾಡಿದರು.

ಕೆಂಗಲ್ ಹನುಮಂತಯ್ಯನವರು ಹಾಕಿದ್ದ ಅಡಿಪಾಯ: ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕಿನ ನಿರ್ದೇಶಕರಾದ ಜೆ. ಶಿವಪ್ರಕಾಶ್, “ಸ್ವಾತಂತ್ರ್ಯ ಪೂರ್ವದಲ್ಲೇ ಚಿತ್ರದುರ್ಗದಲ್ಲಿ ಸ್ಥಾಪನೆಯಾದ ಈ ಬ್ಯಾಂಕಿಗೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಅಡಿಪಾಯ ಹಾಕಿದ್ದರು. ರೈತರ ದೂರದೃಷ್ಟಿಯನ್ನಿಟ್ಟುಕೊಂಡು ಅಂದು ರೂಪಿಸಿದ ಸಾಲ ಸೌಲಭ್ಯದ ವ್ಯವಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಶ್ರಮದಿಂದ ಬ್ಯಾಂಕು ಅತ್ಯುತ್ತಮ ಲಾಭಾಂಶದಲ್ಲಿ ಮುನ್ನಡೆಯುತ್ತಿದ್ದು, ಆ ಲಾಭಾಂಶವು ನೇರವಾಗಿ ರೈತರ ಆರ್ಥಿಕ ಅಭಿವೃದ್ಧಿಗೆ ಬಳಕೆಯಾಗುತ್ತಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾದ ಪಿ.ಜೆ. ಶಿವಪ್ರಸಾದ್, ಉಪಾಧ್ಯಕ್ಷರಾದ ಎಂ.ಎಸ್. ಶರಣಪ್ಪ, ನಿರ್ದೇಶಕರುಗಳಾದ ರವಿ, ಜಗದೀಶ್, ವಿಜಯಕುಮಾರ್, ಸತೀಶ್, ಮಾರುತಿ, ಮೌನೇಶ್, ಕೊಟ್ರೇಶ್, ಪದ್ಮ, ವನಜಾಕ್ಷಮ್ಮ, ಸುನಿಲ್ ನಾಗಪ್ಪ ಹಾಗೂ ಸರ್ಕಾರಿ ನಾಮನಿರ್ದೇಶಿತ ಸದಸ್ಯ ನಿರಂಜನ್ ಮೂರ್ತಿ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *