ಬಾಡಿಗೆದಾರರಿಗೆ ಬೆಸ್ಕಾಂನಿಂದ ಗುಡ್ ನ್ಯೂಸ್: ಗೃಹಜ್ಯೋತಿ ಯೋಜನೆಗೆ ಯಾವುದೇ ಕುತ್ತಿಲ್ಲ!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಬಾಡಿಗೆದಾರರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಪ್ರಸ್ತುತ ನಡೆಯುತ್ತಿರುವ ಆಧಾರ್ ಪರಿಶೀಲನಾ ಪ್ರಕ್ರಿಯೆಯಿಂದಾಗಿ ಯಾವುದೇ ಕಾರಣಕ್ಕೂ ಬಾಡಿಗೆದಾರರ ಗೃಹಜ್ಯೋತಿ ಸೌಲಭ್ಯ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಜುಲೈ 1ರಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ನೈಜ ಫಲಾನುಭವಿಗಳನ್ನು ಗುರುತಿಸಲು ಹಾಗೂ ಆಧಾರ್ ವಿವರಗಳನ್ನು ನವೀಕರಿಸಲು ವಿಶೇಷ ಅಭಿಯಾನವನ್ನು ಶುರು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಹಳೆಯ ಬಾಡಿಗೆದಾರರ ಆಧಾರ್ ಲಿಂಕ್ ಆಗಿದ್ದರೆ, ಪ್ರಸ್ತುತ ಸಿಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ಕಡಿತಗೊಳ್ಳಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿತ್ತು. ಈ ಗೊಂದಲಗಳಿಗೆ ತೆರೆ ಎಳೆದಿರುವ ಬೆಸ್ಕಾಂ, ಯೋಜನೆ ನಿರಂತರವಾಗಿ ಮುಂದುವರಿಯಲಿದ್ದು, ಗ್ರಾಹಕರು ಯಾವುದೇ ಗಾಳಿಗೆ ಕಿವಿಗೊಡಬಾರದು ಎಂದು ಅಭಯ ನೀಡಿದೆ.

ಹೊಸ ಪರಿಶೀಲನೆ ಹೇಗೆ ನಡೆಯಲಿದೆ? ಹಾಲಿ ಮನೆಯಲ್ಲಿ ವಾಸವಿರುವವರ ನೈಜ ಮಾಹಿತಿಯನ್ನು ಮಾತ್ರ ಈ ಸಮೀಕ್ಷೆಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಈ ನವೀಕರಣ ಪ್ರಕ್ರಿಯೆಯಿಂದಾಗಿ ಗೃಹಜ್ಯೋತಿ ಯೋಜನೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಅಥವಾ ಸ್ಥಗಿತಗೊಳ್ಳುವುದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪರಿಶೀಲನೆಗೂ ಮುನ್ನ ಹಾಗೂ ನಂತರವೂ ಉಚಿತ ವಿದ್ಯುತ್ ಪೂರೈಕೆ ಎಂದಿನಂತೆ ಇರಲಿದೆ.

ಬೆಸ್ಕಾಂ ಕಚೇರಿಗೆ ಅಲೆಯುವಂತಿಲ್ಲ!

  • ಆಧಾರ್ ವಿವರ ನೀಡಲು ಅಥವಾ ದಾಖಲೆಗಳನ್ನು ನವೀಕರಿಸಲು ಫಲಾನುಭವಿಗಳು ಬೆಸ್ಕಾಂ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ.
  • ಬೆಸ್ಕಾಂನ ಮೀಟರ್ ರೀಡರ್‌ಗಳು ಹಾಗೂ ಕ್ಷೇತ್ರ ಸಿಬ್ಬಂದಿಯೇ ಖುದ್ದಾಗಿ ಮನೆ ಬಾಗಿಲಿಗೆ ಬಂದು ಮಾಹಿತಿ ಕಲೆಹಾಕಲಿದ್ದಾರೆ.
  • ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಬಾಡಿಗೆದಾರರು ತಮ್ಮ ಬಾಡಿಗೆ ಅಥವಾ ಲೀಸ್ (ಗೇಣಿ) ಕರಾರು ಪತ್ರ ಹಾಗೂ ಸೂಕ್ತ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ.
  • ಗ್ರಾಹಕರು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಮೀಕ್ಷಾ ತಂಡಕ್ಕೆ ಸಹಕರಿಸಬೇಕು ಹಾಗೂ ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ನೆರವಾಗಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಪರ್ಕಿಸಿ: ಆಧಾರ್ ನವೀಕರಣ ಅಥವಾ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದಲ್ಲಿ, ಸಾರ್ವಜನಿಕರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

  • ಮುಖ್ಯ ಸಹಾಯವಾಣಿ ಸಂಖ್ಯೆ: 1912
  • ವಿಶೇಷ ಸಹಾಯವಾಣಿ ಸಂಖ್ಯೆಗಳು: 9480816111, 9480816112, 9480816113 ಹಾಗೂ 9480816114
  • ಸಮಯ: ಈ ಮೇಲಿನ ಸಂಖ್ಯೆಗಳು ಪ್ರತಿದಿನ ಮುಂಜಾನೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಲಭ್ಯವಿರುತ್ತದೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *