ವಯನಾಡು (ಕೇರಳ): ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿಯ ಮೀನಾಕ್ಷಿ ಸೇತುವೆ ಬಳಿ ಭೀಕರ ಭೂಕುಸಿತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಮಣ್ಣು ಕುಸಿಯುತ್ತಿರುವ ಮತ್ತು ಪ್ರಾಣಭಯದಿಂದ ಜನರು ದಿಕ್ಕಾಪಾಲಾಗಿ ಓಡುತ್ತಿರುವ ಎದೆಝಲ್ಲೆನಿಸುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಯನಾಡು ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಬೆಸೆಯುವ ಉದ್ದೇಶಿತ ಸುರಂಗ ರಸ್ತೆ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೇ ಈ ದುರಂತ ಸಂಭವಿಸಿದೆ. ಭಾರಿ ಮಳೆಯಿಂದಾಗಿ ರಸ್ತೆಗೆ ಏಕಾಏಕಿ ಮಣ್ಣು ಮತ್ತು ಅವಶೇಷಗಳು ಜರಿದು ಬಿದ್ದಿವೆ. ಈ ವೇಳೆ ಬೃಹತ್ ಇಂಧನ ಟ್ಯಾಂಕರ್ ಲಾರಿಯೊಂದು ಮಣ್ಣಿನ ಅಲೆಗೆ ಸಿಲುಕಿ ಕೊಚ್ಚಿ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇಬ್ಬರು ಸಾವು, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
ಭೂಕುಸಿತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವುದನ್ನು ಕೇರಳದ ಆರೋಗ್ಯ ಸಚಿವ ಕೆ. ಮುರಳೀಧರನ್ ದೃಢಪಡಿಸಿದ್ದಾರೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಅವರನ್ನು ಮೆಪ್ಪಾಡಿಯ ವಿಮ್ಸ್ (WIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳೆಲ್ಲರೂ ಹೊರರಾಜ್ಯದ ಕಾರ್ಮಿಕರಾಗಿದ್ದಾರೆ.
ಘಟನೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸ್, ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ತುರ್ತು ಪರಿಸ್ಥಿತಿ ಎದುರಿಸಲು ತೃಶ್ಯೂರ್ನಲ್ಲಿರುವ ರಕ್ಷಣಾ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.
ಗುತ್ತಿಗೆದಾರನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ?
ಈ ಭೀಕರ ದುರಂತಕ್ಕೆ ಕೇವಲ ಮಳೆ ಕಾರಣವಲ್ಲ, ಬದಲಾಗಿ ಕಾಮಗಾರಿ ಗುತ್ತಿಗೆದಾರನ ಬೇಜವಾಬ್ದಾರಿಯೇ ಮುಖ್ಯ ಕಾರಣ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಗಂಭೀರ ಆರೋಪ ಮಾಡಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಸಂಗ್ರಹವಾಗಿದ್ದ ಭಾರಿ ಪ್ರಮಾಣದ ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸುವಂತೆ ಜೂನ್ 20ರಂದೇ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಮತ್ತು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಆದರೆ, ಗುತ್ತಿಗೆದಾರ ಈ ಆದೇಶವನ್ನು ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಸಂತ್ರಸ್ತರಿಗೆ ನೆರವು, ವಯನಾಡಿಗೆ ‘ರೆಡ್ ಅಲರ್ಟ್’
ಘಟನೆ ನಡೆದ ತಕ್ಷಣವೇ ಸ್ಥಳೀಯರು ಧಾವಿಸಿ ಬಂದು ಹಲವು ಕಾರ್ಮಿಕರನ್ನು ರಕ್ಷಿಸಿದ್ದಾರೆ. ಸಂತ್ರಸ್ತರಿಗಾಗಿ ಚುಲ್ಲಿಕ್ಕಾ ಸರ್ಕಾರಿ ಎಲ್ಪಿ ಶಾಲೆಯಲ್ಲಿ ತುರ್ತು ಪರಿಹಾರ ಕೇಂದ್ರವನ್ನು (Relief Camp) ತೆರೆಯಲಾಗಿದೆ.
ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಗಾಗಿ ತಕ್ಷಣವೇ ವಯನಾಡಿಗೆ ತೆರಳುವಂತೆ ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಹಾಗೂ ಕೃಷಿ ಸಚಿವ ಟಿ. ಸಿದ್ದಿಕ್ ಅವರಿಗೆ ಸಿಎಂ ಸೂಚಿಸಿದ್ದಾರೆ. ಈ ನಡುವೆ, ವಯನಾಡಿನ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ‘ರೆಡ್ ಅಲರ್ಟ್’ ಘೋಷಿಸಿದ್ದು, ಇದು ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯುಂಟುಮಾಡಿದೆ.