July 28 Daily Horoscope: ದೈನಂದಿನ ಪಂಚಾಂಗ ಹಾಗೂ ದ್ವಾದಶ ರಾಶಿಗಳ ಫಲಾಫಲ.

ದೈನಂದಿನ ಪಂಚಾಂಗ (ಜುಲೈ 28)ಶಾಲಿವಾಹನ ಶಕೆ 1949ನೇ ಪರಾಭವ ನಾಮ ಸಂವತ್ಸರದ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಮಂಗಳವಾರದ ದಿನದ ವಿಶೇಷತೆಗಳು ಹೀಗಿವೆ.

  • ಸೌರ ಮಾಸ: ಕರ್ಕಾಟಕ
  • ಮಹಾನಕ್ಷತ್ರ: ಪುಷ್ಯಾ
  • ನಿತ್ಯನಕ್ಷತ್ರ: ಉತ್ತರಾಷಾಢ
  • ಯೋಗ: ಆಯುಷ್ಮಾನ್
  • ಕರಣ: ಭದ್ರ
  • ಸೂರ್ಯೋದಯ ಹಾಗೂ ಸೂರ್ಯಾಸ್ತ: ಬೆಳಗ್ಗೆ 06:05 ಹಾಗೂ ಸಂಜೆ 06:46
  • ಇಂದಿನ ಶುಭಾಶುಭ ಸಮಯಗಳು:
  • ರಾಹು ಕಾಲ: 15:35 ರಿಂದ 17:12
  • ಯಮಗಂಡ ಕಾಲ: 09:16 ರಿಂದ 10:51
  • ಗುಳಿಕ ಕಾಲ: 12:26 ರಿಂದ 14:01

ದ್ವಾದಶ ರಾಶಿಗಳ ಇಂದಿನ ಭವಿಷ್ಯ

ಮೇಷ ರಾಶಿ:
ಸ್ನೇಹಿತರ ಮಾತನ್ನು ನಂಬಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರ. ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಅಪೂರ್ಣ ಕೆಲಸಗಳತ್ತ ಹೆಚ್ಚು ಗಮನಹರಿಸಿ, ಕಾರ್ಯಗಳನ್ನು ಮುಂದೂಡುವುದು ಸೂಕ್ತವಲ್ಲ. ನಿಮ್ಮಿಂದ ಯಾವುದೇ ದೊಡ್ಡ ತಪ್ಪುಗಳಾಗದಂತೆ ಎಚ್ಚರವಹಿಸಿ. ದೈಹಿಕ ಆಯಾಸ ನಿವಾರಿಸಲು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಆತುರದ ನಿರ್ಧಾರಗಳಿಗಿಂತ ಮೌನವೇ ಒಳಿತು. ಪ್ರಣಯ ವಿಚಾರಗಳಿಗೆ ಈ ದಿನ ಶುಭದಾಯಕವಾಗಿದೆ. ನೀರಿನಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ.
ವೃಷಭ ರಾಶಿ:
ಮಹಿಳೆಯರಿಂದ ವಿರೋಧ ಎದುರಿಸಬೇಕಾದೀತು. ಹಣಕಾಸಿನ ಚಿಂತೆ ಕಾಡಲಿದ್ದು, ಸ್ನೇಹಿತರು ನಿಮ್ಮ ಕಷ್ಟ ಅರಿತು ಸಹಾಯಕ್ಕೆ ಬರಲಿದ್ದಾರೆ. ನಿಮ್ಮ ಬಗ್ಗೆ ನೀವೇ ಹೊಗಳಿಕೊಳ್ಳುವುದು ಅಷ್ಟೊಂದು ಸಮಂಜಸವಲ್ಲ. ತಂದೆಯ ಮಾತುಗಳು ಕಹಿಯೆನಿಸಿದರೂ, ಅದನ್ನು ಲಘುವಾಗಿ ಪರಿಗಣಿಸಿ ಸುಮ್ಮನಾಗುವುದು ಉತ್ತಮ. ನಿಮ್ಮ ಹೊಸ ಆಲೋಚನೆ ಅಥವಾ ಆವಿಷ್ಕಾರಗಳ ಕುರಿತು ಭಿನ್ನಾಭಿಪ್ರಾಯಗಳು ಮೂಡಬಹುದು. ಹಣಕಾಸಿನ ನೆರವಿನಿಂದ ಕೆಲವು ಸಮಸ್ಯೆಗಳು ಪರಿಹಾರವಾಗಲಿವೆ.
ಮಿಥುನ ರಾಶಿ:
ಅನಾರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬರಲಿದೆ. ಉದ್ಯಮಿಗಳಿಗೆ ವ್ಯಾಪಾರದಲ್ಲಿನ ಸಣ್ಣ ಬದಲಾವಣೆಗಳಿಂದ ಕೆಲವು ಕಾರ್ಮಿಕರು ಕೆಲಸ ಬಿಡುವ ಸಾಧ್ಯತೆ ಇದೆ. ಸಂಗಾತಿಯನ್ನು ಟೀಕಿಸುವ ಪ್ರವೃತ್ತಿ ನಿಮ್ಮಲ್ಲಿ ಮೂಡಬಹುದು. ರಾಜಕೀಯ ವ್ಯಕ್ತಿಗಳು ತುರ್ತಾಗಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಹೊಸ ವಾಹನ ಖರೀದಿಗೆ ಮುಂದಾಗುವಿರಿ. ನಿಮ್ಮ ದ್ವಂದ್ವ ನಿಲುವು ಕುಟುಂಬದವರಿಗೆ ಕಿರಿಕಿರಿಯುಂಟು ಮಾಡಬಹುದು. ಅಗತ್ಯವಿರುವವರಿಂದ ನಿಮಗೆ ಬೇಕಾದ ಸಹಾಯವನ್ನು ಕೇಳಿ ಪಡೆಯುವಿರಿ.
ಕರ್ಕಾಟಕ ರಾಶಿ:
ಇಂದು ದೂರದ ಪ್ರಯಾಣ ಕೈಗೊಳ್ಳುವುದು ಸೂಕ್ತವಲ್ಲ. ಯಾರೊಂದಿಗೆ ಏನು ಮಾತನಾಡುತ್ತಿದ್ದೀರಿ ಎಂಬ ಅರಿವು ಇರಲಿ; ನಿಮ್ಮ ಕೆಲವು ಮಾತುಗಳು ವೈಷಮ್ಯಕ್ಕೆ ಕಾರಣವಾಗಬಹುದು. ಹೊಸ ಕೆಲಸ ಹುಡುಕುವ ಭರದಲ್ಲಿ ವಂಚನೆಗೆ ಒಳಗಾಗುವ ಅಪಾಯವಿದೆ. ನಿಮ್ಮ ಕರ್ತವ್ಯಗಳನ್ನು ಮರೆಯದೆ ನಿಭಾಯಿಸಿ. ಸಣ್ಣಪುಟ್ಟ ಅಪಾಯಗಳಿಂದ ಪಾರಾಗಿ ನೆಮ್ಮದಿ ಕಂಡುಕೊಳ್ಳುವಿರಿ. ದುರಭ್ಯಾಸಗಳಿಗೆ ಬಲಿಯಾಗುವ ಸಾಧ್ಯತೆಗಳಿದ್ದು, ಎಚ್ಚರಿಕೆ ಅಗತ್ಯ.
ಸಿಂಹ ರಾಶಿ:
ಇಂದು ನಿಮ್ಮ ಸುತ್ತಮುತ್ತ ಕೊಂಚ ಆತಂಕದ ವಾತಾವರಣವಿರಲಿದೆ. ವೃತ್ತಿಜೀವನದ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರುವುದು ಒಳಿತು. ಅತಿಯಾದ ಮಾತುಗಾರಿಕೆ ತಲೆನೋವು ತರಿಸಬಹುದು. ನಿಮ್ಮ ಆದಾಯವನ್ನು ತಿಳಿದು ಇತರರು ಲೇವಡಿ ಮಾಡುವ ಸಾಧ್ಯತೆ ಇದೆ. ಕೆಲಸದ ನಿಮಿತ್ತ ಅಲೆದಾಟದಿಂದ ದಣಿಯುವಿರಿ. ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಿಕೊಳ್ಳಲು ಯತ್ನಿಸಿ. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ದುಸ್ಸಾಹಸಕ್ಕೆ ಕೈಹಾಕುವುದು ಒಳ್ಳೆಯದಲ್ಲ.
ಕನ್ಯಾ ರಾಶಿ:
ನಿಮ್ಮ ಅತಿಯಾದ ಸಲುಗೆಯೇ ದ್ವೇಷಕ್ಕೆ ತಿರುಗುವ ಅಪಾಯವಿದೆ. ದಾಂಪತ್ಯ ಕಲಹಗಳು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ, ತಾಳ್ಮೆ ಇರಲಿ. ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ. ನೀವು ಇತರರ ಮೇಲೆ ತೋರುವ ಸಹಾನುಭೂತಿ ಕೆಲವರಿಗೆ ಹಿಡಿಸದಿರಬಹುದು. ಸಂಗಾತಿಯ ಒತ್ತಡಕ್ಕೆ ಮಣಿದು ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಪ್ರಚಾರದ ಗೀಳು ನಿಮ್ಮನ್ನು ಆವರಿಸಬಹುದು. ಖ್ಯಾತಿ ಗಳಿಸುವ ಹಂಬಲ ನಿಮ್ಮಲ್ಲಿ ಹೆಚ್ಚಾಗಲಿದೆ.
ತುಲಾ ರಾಶಿ:
ನಿಮ್ಮನ್ನು ಇಷ್ಟಪಡುವವರೊಂದಿಗೆ ಸ್ವಲ್ಪ ಸಮಯ ಕಳೆಯಬೇಕಾಗುತ್ತದೆ. ನಿಮ್ಮ ಯೋಜನೆಗಳಿಗೆ ಸಂಗಾತಿಯಿಂದ ಬೆಂಬಲ ದೊರೆಯಲಿದೆ, ಆದರೆ ಅದರ ಯಶಸ್ಸಿಗೆ ಹೆಚ್ಚಿನ ಶ್ರಮದ ಅಗತ್ಯವಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಿಹಿಸುದ್ದಿಯನ್ನು ಸ್ನೇಹಿತರಿಂದ ತಿಳಿಯುವಿರಿ. ಯಾರ ಬಗ್ಗೆಯೂ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬೇಡಿ. ಸುಳ್ಳು ಹೇಳಿದರೆ ಸಿಕ್ಕಿಬೀಳುವಿರಿ. ದಿನಸಿ ಅಥವಾ ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ:
ಅಪರಿಚಿತ ಕರೆಗಳಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಸಂಪೂರ್ಣ ಮಾಹಿತಿ ಇಲ್ಲದೆ ಯಾವುದೇ ಕೆಲಸಕ್ಕೆ ಮುಂದುವರಿಯದಿರಿ. ವ್ಯವಹಾರದಲ್ಲಿ ನಿಮ್ಮ ತಿಳುವಳಿಕೆಯ ಕೊರತೆ ಅರಿವಿಗೆ ಬರಲಿದೆ. ಸಂಗಾತಿಯ ಮೂಲಕ ನಿಮಗೂ ಸಮಾಜದಲ್ಲಿ ಗೌರವ ಪ್ರಾಪ್ತವಾಗಲಿದೆ. ವೈವಾಹಿಕ ಜೀವನದ ಚಿಂತೆಗಳು ಕಾಡಬಹುದು. ಮಹಿಳೆಯೊಬ್ಬರ ಕಾರಣದಿಂದ ಸಂಕಷ್ಟಕ್ಕೆ ಸಿಲುಕುವಿರಿ. ಪೂರ್ವಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆಪ್ತರನ್ನು ಅನುಮಾನಿಸಿದರೆ ಎಲ್ಲವೂ ಹಾಳಾಗಬಹುದು.
ಧನು ರಾಶಿ:
ನಿಮಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಇದು ಅಸಹನೆ ಮೂಡಿಸಬಹುದು. ಅಧರ್ಮದ ಹಾದಿಯಲ್ಲಿ ಸಾಗುವ ಯೋಚನೆ ಬರಬಹುದು. ಖರ್ಚು-ವೆಚ್ಚಗಳು ಹೆಚ್ಚಾಗಲಿವೆ. ವಾಹನ ದುರಸ್ತಿಯಿಂದಾಗಿ ಆರ್ಥಿಕ ಹೊರೆ ಬೀಳಲಿದೆ. ಹಳೆಯ ಪ್ರೇಮ ಪ್ರಕರಣಗಳು ಮರುಕಳಿಸಬಹುದು. ಸಂಗಾತಿಯನ್ನು ಹೆಚ್ಚು ಪ್ರೀತಿಸುವಿರಿ. ವಿವಾಹ ನಿಶ್ಚಯದ ಮಾತುಕತೆಗಳಿಂದ ಸಂತಸ. ಹೊರಗಿನ ಆಹಾರ ಸೇವನೆ ಆನಂದ ನೀಡಲಿದೆ. ಯಾವುದೇ ಕಾರಣಕ್ಕೂ ಉದ್ವೇಗಕ್ಕೆ ಒಳಗಾಗಬೇಡಿ.
ಮಕರ ರಾಶಿ:
ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಬಹುದು. ನಿಮಗೆ ಬರಬೇಕಿದ್ದ ಹಣ ಕೈಸೇರಲಿದೆ. ಹಣದಿಂದ ಎಲ್ಲವೂ ಸಾಧ್ಯವಿಲ್ಲ ಎಂಬ ಸತ್ಯ ಅರಿವಾಗಿ, ಅದರ ಮೇಲಿನ ವ್ಯಾಮೋಹ ಕಡಿಮೆಯಾಗಲಿದೆ. ಉದ್ವೇಗದಲ್ಲಿ ಏನನ್ನಾದರೂ ಮಾತನಾಡಿ ಪಶ್ಚಾತ್ತಾಪ ಪಡುವಿರಿ. ಆಪ್ತರಿಗೆ ಆರ್ಥಿಕ ಸಹಾಯ ಮಾಡಬೇಕಾಗಿ ಬರಬಹುದು. ಇತರರನ್ನು ಹಾಸ್ಯ ಮಾಡುವಿರಿ. ದ್ರವ್ಯ ವಸ್ತುಗಳ ವ್ಯಾಪಾರದಲ್ಲಿ ಲಾಭ. ನಿಮ್ಮ ಕುಂದುಕೊರತೆಗಳ ಕಡೆ ಗಮನ ಹರಿಸಿ. ಪ್ರಭಾವಿ ವ್ಯಕ್ತಿಗಳ ನೆರವಿನಿಂದ ತೊಂದರೆಗಳು ನಿವಾರಣೆಯಾಗಲಿವೆ. ಇಷ್ಟವಿಲ್ಲದ ಕೆಲಸದಲ್ಲಿ ಪ್ರಯತ್ನ ಮುಂದುವರಿಸುವುದು ಸರಿಯಲ್ಲ.
ಕುಂಭ ರಾಶಿ:
ನಿತ್ಯದ ಕೆಲಸಗಳೇ ನಿಮಗೆ ಪ್ರಮುಖವಾಗಿ, ಉಳಿದವೆಲ್ಲವೂ ಗೌಣವಾಗಲಿವೆ. ಮೋಜು-ಮಸ್ತಿಗಾಗಿ ಹಣ ವ್ಯಯಿಸುವಿರಿ. ಉದ್ಯೋಗ ಬದಲಾವಣೆಯ ಯೋಚನೆಯನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವಿರಿ. ಮನೆ ಕಟ್ಟುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಕೆಲಸಗಳು ನ್ಯಾಯಸಮ್ಮತವಾಗಿರಲಿ. ಕಾಲ್ಪನಿಕ ಲೋಕದಲ್ಲಿ ವಿಹರಿಸುವಿರಿ. ಕೌಟುಂಬಿಕ ವಿಚಾರಗಳಲ್ಲಿ ಆಸಕ್ತಿ ತೋರುವಿರಿ. ಪುಣ್ಯಾತ್ಮರ ಅಥವಾ ಸಜ್ಜನರ ಒಡನಾಟ ಅನಿರೀಕ್ಷಿತವಾಗಿ ಲಭಿಸಲಿದೆ.
ಮೀನ ರಾಶಿ:
ಮಕ್ಕಳ ನಡವಳಿಕೆ ಅಥವಾ ಅವರ ಜೀವನ ಶೈಲಿ ಕಂಡು ಬೇಸರವಾಗಬಹುದು. ಯಾರೊಂದಿಗೂ ವಾಗ್ವಾದಕ್ಕೆ ಇಳಿಯಬೇಡಿ. ನಿಯಮಾನುಸಾರ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸ್ವತಂತ್ರ ಚಿಂತನೆಗಳು ನಿಮಗೆ ಖುಷಿ ನೀಡಲಿವೆ. ಕಲಾವಿದರಿಗೆ ವಿವಿಧ ಕಡೆಗಳಿಂದ ಒತ್ತಡಗಳು ಬರಲಿವೆ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಹಿರಿಯರೊಂದಿಗೆ ಚರ್ಚೆ ನಡೆಸುವಿರಿ. ವ್ಯವಹಾರದ ಮಾತುಗಳನ್ನು ಬಿಟ್ಟು ಬೇರೆ ವಿಚಾರಗಳನ್ನು ಮಾತನಾಡಲು ಸಂಯಮ ಇರುವುದಿಲ್ಲ. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j



Leave a Reply

Your email address will not be published. Required fields are marked *