ಚಿತ್ರದುರ್ಗ ಜು. 29
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಬುದ್ಧನ ಜ್ಞಾನ ಇಡೀ ಜಗತ್ತಿಗೆ ಪರಿಚಿತವಾಗಿದೆ. ಅದೇ ರೀತಿ ಬುದ್ಧನ ಜ್ಞಾನ, ಸಮಾನತೆ, ಮಾನವೀಯತೆ ಮತ್ತು ಶಿಕ್ಷಣದ ಸಂದೇಶವನ್ನು ಅಸ್ಪೃಶ್ಯರ ಹಟ್ಟಿಗಳಿಗೂ ತಲುಪಿಸಿ ಜ್ಞಾನದ ದೀಪ ಬೆಳಗಿಸುವ ಕಾರ್ಯವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕಿದೆ ಎಂದು ಶ್ರೀ ಬಸವ ಮಾದರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಮಾದರಾ ಚೆನ್ನಯ್ಯ ಸ್ವಾಮೀಜಿಗಳು ತಿಳಿಸಿದರು.
ನಗರದ ಹೂರ ವಲಯದ ಶ್ರೀ ಬಸವ ಮಾದರ ಚೆನ್ನಯ್ಯ ಗುರುಪೀಠದ ಸಭಾಂಗಣದಲ್ಲಿ ಬುಧವಾರ ನಡೆದ ಗುರುಪೂರ್ಣಿಮೆ ಆಚರಣೆ, ಶ್ರೀ ಮಾದರ ಚೆನ್ನಯ್ಯ ಮಹಿಳಾ ಮಾತಾ ಸಮಿತಿ ಪದಗ್ರಹಣ ಹಾಗೂ ಗುರು ವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಶ್ರೀಗಳು ಗೌತಮ ಬುದ್ಧನು ತನ್ನ ಸಂಪತ್ತಿನ ಅರಮನೆಯನ್ನು ತೊರೆದು ಬೋಧಿವೃಕ್ಷದ ಕೆಳಗೆ ತಪಸ್ವಿಯಾಗಿ ಕುಳಿತು ಜ್ಞಾನೋದಯನ ಪಡೆದು ಇಡೀ ನಾಡಿಗೆ ಜ್ಞಾನದ ಬೆಳಕನ್ನ ನೀಡಿರುವ ಗುರುವಿಗೆ ನಮನ ಸಲ್ಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಗುರುಪೂರ್ಣಿಮೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಮಹತ್ವವನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ಜೀವನಕ್ಕೆ ಜ್ಞಾನ, ಸಂಸ್ಕಾರ ಮತ್ತು ಸನ್ಮಾರ್ಗವನ್ನು ತೋರಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿರುವ ಗುರುಪೂರ್ಣಿಮೆಯ ಆಚರಣೆ ಪ್ರತಿಯೊಬ್ಬರ ಬದುಕಿನಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ ಸಮಾಜದಲ್ಲಿ ಮಹಿಳೆಯರ ನಾಯಕತ್ವ, ಸಂಘಟನೆ, ಶಿಕ್ಷಣ, ಸ್ವಾವಲಂಬನೆ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಬೇಕು. ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಮಾಜಮುಖಿ ಚಟುವಟಿಕೆಗಳ ಮೂಲಕ ಸಮಾನತೆ, ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಸಮಿತಿ ಮಾಡಬೇಕೆಂದು ಕರೆ ನೀಡಿದರು.
ಶ್ರೀ ಮಾದರ ಚೆನ್ನಯ್ಯ ಮಾತಾ ಸಮಿತಿ ಜಿಲ್ಲಾಧ್ಯಕ್ಷೆ ಮಂಜುಳಾ ಸ್ವಾಮಿ ಮಾತನಾಡಿ, ಶ್ರೀ ಮಾದರ ಚೆನ್ನಯ್ಯ ಮಾತಾ ಸಮಿತಿಯು ರಾಜ್ಯಾದ್ಯಂತ ತನ್ನ ಸಂಘಟನೆಯನ್ನು ವಿಸ್ತರಿಸಿಕೊಂಡಿದ್ದು, ಮಹಿಳೆಯರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಶೋಷಣೆ, ಅನ್ಯಾಯ ಹಾಗೂ ದಬ್ಬಾಳಿಕೆಗಳ ವಿರುದ್ಧ ಸಮಿತಿಯು ಸದಾ ಧೈರ್ಯವಾಗಿ ನಿಲ್ಲಲಿದೆ. ಯಾವುದೇ ಮಹಿಳೆ ಅನ್ಯಾಯಕ್ಕೆ ಒಳಗಾದರೆ ಆಕೆಗೆ ಕಾನೂನು ನೆರವು, ನೈತಿಕ ಬೆಂಬಲ ಹಾಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಮಿತಿ ಸದಾ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.
ಸಮಾಜದಲ್ಲಿ ಮಹಿಳೆಯರು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಸ್ವ ಉದ್ಯೋಗ, ನಾಯಕತ್ವ ಹಾಗೂ ಸಾಮಾಜಿಕ ಜಾಗೃತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು. ಯುವತಿಯರು ಆತ್ಮವಿಶ್ವಾಸ ಬೆಳೆಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿ ಶ್ರೀ ಮಾದರ ಚೆನ್ನಯ್ಯ ಅವರ ತತ್ವಾದರ್ಶಗಳಾದ ಸಮಾನತೆ, ಮಾನವೀಯತೆ, ಶಿಕ್ಷಣ ಮತ್ತು ಸೇವಾ ಮನೋಭಾವವನ್ನು ಪ್ರತಿಯೊಂದು ಮನೆಗೂ ತಲುಪಿಸುವ ನಿಟ್ಟಿನಲ್ಲಿ ಮಹಿಳಾ ಮಾತಾ ಸಮಿತಿ ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ಗುರು ಪೂರ್ಣಿಮೆ ಅಂಗವಾಗಿ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಯವರಿಗೆ ಭಕ್ತಾದಿಗಳು ಪಾದಪೂಜೆಯನ್ನು ನೆರವೇರಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದರ ಚೆನ್ನಯ್ಯ ಗುರು ಪೀಠದ ವ್ಯವಸ್ಥಾಪಕರಾದ ರವಿ ಮಲ್ಲಾಪುರ, ಮಾದರ ಚೆನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪರಶುರಾಮ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್, ಚಿತ್ರದುರ್ಗದ ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕ ಮುರಳಿಧರ್, ಸಪಾಯಿ ಕರ್ಮಚಾರಿ ಮಾಜಿ ರಾಜ್ಯದ್ಯಕ್ಷರಾದ ಹನುಮಂತಪ್ಪ ಬಳ್ಳಾರಿ, ಶ್ರೀ ಮಾದರ ಚೆನ್ನಯ್ಯ ಮಾತಾ ಸಮಿತಿ ಪದಾಧಿಕಾರಿಗಳಾದ ಲಕ್ಷ್ಮಿ, ವಿಜಯಲಕ್ಷ್ಮಿ, ಅಂಬಿಕಾ, ರಾಧಾ, ಮಹೇಶ್ವರಿ, ರತ್ನ, ಐಶ್ವರ್ಯ, ಭವಾನಿ, ಸೌಮ್ಯ, ಲಕ್ಕಮ್ಮ, ಸುನಿತಾ, ಈರಮ್ಮ, ಕವಿತಾ, ನಿರ್ಮಲ, ಗೀತಾ ಹಾಗೂ ಮಾದರ ಚೆನ್ನಯ್ಯ ಸೇವಾ ಸಮಿತಿ ಪದಾಧಿಕಾರಿಗಳಾದ ರವಿ ಕುಮಾರ್, ನಾಗರಾಜ್, ದೇವರಾಜ್, ಮಂಜುನಾಥ್, ನವೀನ್, ಅನಿಲ್ ಹಾಗೂ ಇತರರು ಇದ್ದರು
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j