ಮಳೆಗಾಲದ ಆಗಮನವು ವಾತಾವರಣವನ್ನು ತಂಪುಗೊಳಿಸಿದರೂ, ತನ್ನೊಂದಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನೂ ಹೊತ್ತು ತರುತ್ತದೆ. ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳ ಬಗ್ಗೆ ನಾವು ಎಷ್ಟು ಎಚ್ಚರಿಕೆ ವಹಿಸುತ್ತೇವೆಯೋ, ಅದೇ ರೀತಿ ನಾವು ಸೇವಿಸುವ ಆಹಾರ ಮತ್ತು ನೀರಿನ ಬಗ್ಗೆಯೂ ಈ ಋತುವಿನಲ್ಲಿ ತೀವ್ರ ನಿಗಾ ವಹಿಸುವುದು ಅತ್ಯಗತ್ಯ. ನಿರ್ಲಕ್ಷ್ಯ ವಹಿಸಿದರೆ ‘ಫುಡ್ ಪಾಯಿಸನ್’ (ಆಹಾರ ವಿಷವಾಗುವಿಕೆ) ನಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು.
ಫುಡ್ ಪಾಯಿಸನ್ ಎಂದರೆ ಏನು? ಮಳೆಗಾಲದಲ್ಲೇ ಇದರ ಹಾವಳಿ ಏಕೆ?
ಕಲುಷಿತ ನೀರು ಅಥವಾ ಆಹಾರದ ಮೂಲಕ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್‌ಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ ಫುಡ್ ಪಾಯಿಸನ್ ಉದ್ಭವಿಸುತ್ತದೆ.
ಮಳೆಗಾಲದ ತೇವಾಂಶ ಭರಿತ ವಾತಾವರಣವು ಈ ರೋಗಕಾರಕ ಸೂಕ್ಷ್ಮಾಣುಜೀವಿಗಳು ಅತಿ ವೇಗವಾಗಿ ಬೆಳೆಯಲು ಹೇಳಿ ಮಾಡಿಸಿದಂತಿದೆ. ಬೇಯಿಸಿದ ಆಹಾರವನ್ನು ದೀರ್ಘಕಾಲದವರೆಗೆ ಕೋಣೆಯ ಉಷ್ಣಾಂಶದಲ್ಲಿ ಹೊರಗೆ ಇಡುವುದು, ಸರಿಯಾಗಿ ಬೇಯಿಸದ ಆಹಾರ ಸೇವನೆ ಮತ್ತು ಕಲುಷಿತ ನೀರು ಕುಡಿಯುವುದರಿಂದ ಇದು ಸುಲಭವಾಗಿ ಹರಡುತ್ತದೆ. ಜೊತೆಗೆ, ಮಳೆಗಾಲದಲ್ಲಿ ಹೆಚ್ಚಾಗುವ ನೊಣಗಳು ಕಸದಿಂದ ಬ್ಯಾಕ್ಟೀರಿಯಾಗಳನ್ನು ತಂದು ಆಹಾರದ ಮೇಲೆ ವರ್ಗಾಯಿಸುವುದರಿಂದಲೂ ಸೋಂಕಿನ ಅಪಾಯ ದುಪ್ಪಟ್ಟಾಗುತ್ತದೆ.
ಫುಡ್ ಪಾಯಿಸನ್‌ನ ಪ್ರಮುಖ ಲಕ್ಷಣಗಳು
ಸಾಮಾನ್ಯವಾಗಿ ಸೋಂಕು ತಗುಲಿದ ಕೆಲವೇ ಗಂಟೆಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:
- ಹೊಟ್ಟೆ ನೋವು, ವಾಂತಿ ಮತ್ತು ಭೇದಿ.
- ಜ್ವರ, ಆಯಾಸ ಮತ್ತು ವಾಕರಿಕೆ.
- ತಲೆತಿರುಗುವಿಕೆ ಮತ್ತು ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು (ನಿರ್ಜಲೀಕರಣ).
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು? ಸಾಮಾನ್ಯವಾಗಿ ಸಾಕಷ್ಟು ವಿಶ್ರಾಂತಿ ಮತ್ತು ದ್ರವಾಹಾರ ಸೇವನೆಯಿಂದ ಇದು ಗುಣಮುಖವಾಗುತ್ತದೆ. ಆದರೆ ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು, ವಿಪರೀತ ಜ್ವರ, ನಿರಂತರವಾಗಿ ವಾಂತಿಯಾಗುತ್ತಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು. ಮುಖ್ಯವಾಗಿ ಗರ್ಭಿಣಿಯರು, ವಯಸ್ಸಾದವರು ಹಾಗೂ ಚಿಕ್ಕ ಮಕ್ಕಳಿಗೆ ಈ ಸೋಂಕಿನ ಅಪಾಯ ಹೆಚ್ಚಿರುವುದರಿಂದ ಅವರ ಬಗ್ಗೆ ವಿಶೇಷ ಕಾಳಜಿ ಅಗತ್ಯ.
ತಡೆಗಟ್ಟುವ ಸರಳ ಹಾಗೂ ಪರಿಣಾಮಕಾರಿ ಕ್ರಮಗಳು
- ಬಿಸಿ ಹಾಗೂ ತಾಜಾ ಊಟ: ಪ್ರತಿದಿನ ತಾಜಾವಾಗಿ ತಯಾರಿಸಿದ ಮತ್ತು ಸಂಪೂರ್ಣವಾಗಿ ಬೆಂದಿರುವ ಆಹಾರವನ್ನೇ ಸೇವಿಸಿ. ಉಳಿದ ಆಹಾರವನ್ನು ಸರಿಯಾಗಿ ಫ್ರಿಡ್ಜ್‌ನಲ್ಲಿ ಸಂರಕ್ಷಿಸಿ ಮತ್ತು ಮರುಬಳಕೆ ಮಾಡುವಾಗ ಚೆನ್ನಾಗಿ ಬಿಸಿ ಮಾಡಿ.
- ಶುದ್ಧ ಕುಡಿಯುವ ನೀರು: ಕುಡಿಯಲು ಯಾವಾಗಲೂ ಕಾಯಿಸಿ ಆರಿಸಿದ ಅಥವಾ ಫಿಲ್ಟರ್ ಮಾಡಿದ ನೀರನ್ನೇ ಬಳಸಿ.
- ಬೀದಿ ಬದಿಯ ಆಹಾರಕ್ಕೆ ಬ್ರೇಕ್: ರಸ್ತೆ ಬದಿಯಲ್ಲಿ ತೆರೆದಿಟ್ಟು ಮಾರುವ, ನೊಣಗಳು ಮುತ್ತುವ ಜಂಕ್ ಫುಡ್, ಕಟ್ ಮಾಡಿದ ಹಣ್ಣುಗಳು ಹಾಗೂ ಇತರ ಪದಾರ್ಥಗಳನ್ನು ತಿನ್ನುವುದನ್ನು ಮಳೆಗಾಲದಲ್ಲಿ ಸಂಪೂರ್ಣವಾಗಿ ತಪ್ಪಿಸಿ.
- ವೈಯಕ್ತಿಕ ಸ್ವಚ್ಛತೆ: ಊಟಕ್ಕೂ ಮುನ್ನ ಹಾಗೂ ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.
- ತರಕಾರಿ, ಹಣ್ಣುಗಳ ಸ್ವಚ್ಛತೆ: ಮಾರುಕಟ್ಟೆಯಿಂದ ತಂದ ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮುನ್ನ ಉಗುರುಬೆಚ್ಚಗಿನ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದರಿಂದ ಅವುಗಳ ಮೇಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
- ಪಾತ್ರೆಗಳ ಸ್ವಚ್ಛತೆ: ಅಡುಗೆಗೆ ಮತ್ತು ಊಟಕ್ಕೆ ಬಳಸುವ ಪಾತ್ರೆಗಳನ್ನು ಶುದ್ಧ ನೀರಿನಲ್ಲಿ ತೊಳೆಯಿರಿ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಅರಿವಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಎದುರಾದಾಗ ಕೇವಲ ಮನೆಮದ್ದುಗಳನ್ನೇ ನೆಚ್ಚಿಕೊಳ್ಳದೆ, ತಕ್ಷಣವೇ ಪರಿಣಿತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಂತ ಸುರಕ್ಷಿತ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j