ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಅ. 31: ಸಾಹಿತ್ಯವೆಂದರೆ ಕೇವಲ ಪದಗಳ ಜೋಡಣೆಯಲ್ಲ. ಅದು ವ್ಯಕ್ತಿಯ ಜೀವನಾನುಭವ, ಚಿಂತನೆ ಹಾಗೂ ಸಮಾಜದ ವಾಸ್ತವತೆಯನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿದೆ. ಉತ್ತಮ ಬರಹಗಾರರಾಗಲು ಸಮಾಜದೊಂದಿಗೆ ಬೆರೆತು, ಜನರ ಬದುಕು ಮತ್ತು ಅನುಭವಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಸಾಮಾಜಿಕ ಕಾರ್ಯಕರ್ತ ವಾದಿರಾಜ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಸ್ನೇಹ ಸಮ್ಮಿಲನದ ಸಂಯುಕ್ತ ಆಶ್ರಯದಲ್ಲಿ ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ‘ಅರಳುವ ಪ್ರತಿಭೆ-2026’ ವಿದ್ಯಾರ್ಥಿ ಬರಹಗಾರರ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಭಿವ್ಯಕ್ತಿ ಮಾತು, ಬರಹ ಮತ್ತು ಅಭಿನಯದ ಮೂಲಕ ವ್ಯಕ್ತವಾಗುತ್ತದೆ. ಮಾತಿನ ಮೂಲಕ ವಿಚಾರ ಹಂಚಿಕೊಳ್ಳುವುದು ಸಹಜವಾದರೂ, ಅದನ್ನು ಅಕ್ಷರ ರೂಪದಲ್ಲಿ ದಾಖಲಿಸುವುದು ಹೆಚ್ಚಿನ ಪರಿಶ್ರಮ ಮತ್ತು ಅಭ್ಯಾಸವನ್ನು ಬೇಡುತ್ತದೆ. ನಾಟಕಕಾರರು, ರಂಗಕರ್ಮಿಗಳು ಹಾಗೂ ಕಲಾವಿದರು ಅಭಿನಯದ ಮೂಲಕ ತಮ್ಮ ಆಲೋಚನೆಗಳನ್ನು ಜನರಿಗೆ ತಲುಪಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಅಭಿವ್ಯಕ್ತಿಯ ವಿವಿಧ ಆಯಾಮಗಳನ್ನು ಅರಿತು ಬರವಣಿಗೆಯ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಬರವಣಿಗೆಯ ಪದ್ಧತಿ ವ್ಯಾಪಕವಾಗಿರದಿದ್ದರೂ ಜಾನಪದ ಕಾವ್ಯಗಳು, ರಾಮಾಯಣ, ಮಹಾಭಾರತ ಹಾಗೂ ವಚನ ಸಾಹಿತ್ಯಗಳು ಮೌಖಿಕ ಪರಂಪರೆಯ ಮೂಲಕ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತಲುಪಿವೆ. ಬರಹಗಾರರು ತಮ್ಮ ಕೃತಿಗಳಲ್ಲಿ ಮಾತ್ರವಲ್ಲದೆ ನಡೆ-ನುಡಿಯಲ್ಲಿಯೂ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು. ಹೇಳುವುದನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯಾಗಿ ಬದುಕಿದಾಗ ಮಾತ್ರ ಅವರ ಬರಹಗಳಿಗೆ ನೈಜ ಮೌಲ್ಯ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಾಹಿತ್ಯವು ಸಮಾಜದ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಬೇಕು. ಯುವ ಬರಹಗಾರರು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡು, ಹಿರಿಯ ಸಾಹಿತಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ಪದಗಳ ಬಳಕೆ, ಪ್ರಾಸ ಅಥವಾ ಪಾಂಡಿತ್ಯದ ಪ್ರದರ್ಶನವೇ ಸಾಹಿತ್ಯವಲ್ಲ. ಬರಹಗಳಲ್ಲಿ ಬದುಕಿನ ಅನುಭವ, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಕಾಣಿಸಬೇಕು ಎಂದು ತಿಳಿಸಿದರು.
ಕುವೆಂಪು, ದ.ರಾ. ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ವಿ.ಕೃ. ಗೋಕಾಕ್, ಶಿವರಾಮ ಕಾರಂತ ಹಾಗೂ ದೇವನೂರು ಮಹಾದೇವ ಅವರಂತಹ ಹಿರಿಯ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ. ಅವರ ಬರಹಗಳಲ್ಲಿದ್ದ ಸರಳತೆ, ನೈಜ ಅನುಭವ ಮತ್ತು ಸಮಾಜಮುಖಿ ದೃಷ್ಟಿಕೋನವನ್ನು ಯುವ ಬರಹಗಾರರು ಅಧ್ಯಯನ ಮಾಡಬೇಕು. ಸಮಾಜದಲ್ಲಿ ಹಿರಿಯರಿಗೆ ಗೌರವ, ಸಮಾನತೆ ಮತ್ತು ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದರು.
ನ್ಯಾಯಾಧೀಶರಾದ ಶ್ರೀಮತಿ ಪ್ರೇಮ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿ ಮತ್ತು ದೇಶಪ್ರೇಮದ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ, ಸ್ವಾಮಿ ವಿವೇಕಾನಂದರ ವಿಚಾರಗಳು ಹಾಗೂ ಸೃಜನಶೀಲ ಚಟುವಟಿಕೆಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರಗಳು ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು.
ರಾಜ್ಯದ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿದ್ದ ಕವನ ಮತ್ತು ಕಥಾ ಸ್ಪರ್ಧೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 230 ಕಥೆಗಳು ಹಾಗೂ 128 ಕವನಗಳು ಸ್ಪರ್ಧೆಗೆ ಸಲ್ಲಿಕೆಯಾಗಿದ್ದು, ಅವುಗಳ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂತ ಕಾರ್ಯದರ್ಶಿ ಗೋಪಿ ರಂಗಸ್ವಾಮಿ, ದರ್ಶನ ಹೆಗಡೆ, ರಾಜೀವ ಲೋಚನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ದಿವ್ಯ ಪ್ರಾರ್ಥಿಸಿದರು. ಮೌಟೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಿಬಿರದ ಆಶಯ: ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿ, ಸೃಜನಶೀಲತೆ, ಸಾಮಾಜಿಕ ಪ್ರಜ್ಞೆ ಮತ್ತು ಸಾಹಿತ್ಯಿಕ ಅಭಿರುಚಿಯನ್ನು ಬೆಳೆಸುವ ಮೂಲಕ ಹೊಸ ತಲೆಮಾರಿನ ಬರಹಗಾರರನ್ನು ರೂಪಿಸುವುದು ಈ ಶಿಬಿರದ ಪ್ರಮುಖ ಉದ್ದೇಶವಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು