ಚಿತ್ರದುರ್ಗ ನ. 23
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚುನಾವಣೆಗೆ ಮತ ಕೇಳಲು ಬರುವ ಮೊದಲು ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬೇಕು, ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಬೇಕು ಮತ್ತು ಒಳ ಮೀಸಲಾತಿಯನ್ನು ಸರಿಪಡಿಸಿ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕು; ತಪ್ಪಿದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸಂಸದರಾದ ಗೋವಿಂದ ಕಾರಜೋಳ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನಕಪುರ ಕ್ಷೇತ್ರದಷ್ಟೇ ಹಿರಿಯೂರು ಕ್ಷೇತ್ರವೂ ಮುಖ್ಯವಾಗಿದ್ದು, ಚುನಾವಣೆ ಬಂದಾಗ ಮಾತ್ರ ಹಿರಿಯೂರಿನ ಕಡೆಗೆ ಬರಲಾಗುತ್ತಿದೆ ಎಂದು ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ ಹಿರಿಯೂರಿನಲ್ಲಿ ಒಂದೇ ಒಂದು ಜನಪರ ಯೋಜನೆಯನ್ನು ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಪ್ಪರ್ ಭದ್ರಾ ಯೋಜನೆಯನ್ನು ತಾವು ಆರಂಭಿಸಿದ್ದು, 2007-08ರಲ್ಲಿ ಸಮೀಕ್ಷೆಗೆ ಸಾಂಕೇತಿಕ ಅನುದಾನವಾಗಿ 50 ಕೋಟಿ ರೂಪಾಯಿ ನೀಡಲಾಗಿತ್ತು ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2008-09ರಲ್ಲಿ 104 ಕೋಟಿ ರೂಪಾಯಿ, 2009-10ರಲ್ಲಿ 100 ಕೋಟಿ ರೂಪಾಯಿ, 2010-11ರಲ್ಲಿ ಸುಮಾರು 122 ಕೋಟಿ ರೂಪಾಯಿ, 2011-12ರಲ್ಲಿ 122 ಕೋಟಿ ರೂಪಾಯಿ, 2012-13ರಲ್ಲಿ 132 ಕೋಟಿ ರೂಪಾಯಿ ಮತ್ತು 2013-14ರ ಬಜೆಟ್‍ನಲ್ಲಿ 180 ಕೋಟಿ ರೂಪಾಯಿ ನೀಡಲಾಗಿತ್ತು ಎಂದು ವಿವರಿಸಿದರು. ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ 2014-15ರಲ್ಲಿ 175 ಕೋಟಿ ರೂಪಾಯಿ, 2015-16ರಲ್ಲಿ 260 ಕೋಟಿ ರೂಪಾಯಿ, 2016-17ರಲ್ಲಿ 650 ಕೋಟಿ ರೂಪಾಯಿ ಮತ್ತು 2017-18ರಲ್ಲಿ 692 ಕೋಟಿ ರೂಪಾಯಿ ನೀಡಲಾಗಿದೆ ಎಂದರು.
2018-19ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 720 ಕೋಟಿ ರೂಪಾಯಿ, 2019-20ರಲ್ಲಿ 721 ಕೋಟಿ ರೂಪಾಯಿ, 2020-21ರಲ್ಲಿ 518 ಕೋಟಿ ರೂಪಾಯಿ ನೀಡಲಾಗಿತ್ತು ಎಂದು ಹೇಳಿದರು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ತಾವು ನೀರಾವರಿ ಸಚಿವರಾಗಿದ್ದಾಗ 2021-22ರಲ್ಲಿ 2,623 ಕೋಟಿ ರೂಪಾಯಿ, 2022-23ರಲ್ಲಿ 3,100 ಕೋಟಿ ರೂಪಾಯಿ ಮತ್ತು 2023-24ರ ಫೆಬ್ರವರಿ ಬಜೆಟ್‍ನಲ್ಲಿ 5,500 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿತ್ತು (ಒಟ್ಟಾರೆಯಾಗಿ 11,223 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿತ್ತು) ಎಂದು ತಿಳಿಸಿದರು. ಆದರೆ, 2023-24ರಲ್ಲಿ ನೀಡಿದ್ದ 5,500 ಕೋಟಿ ರೂಪಾಯಿಯಲ್ಲಿ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಅರ್ಧದಷ್ಟು ಹಣವನ್ನು ವಾಪಸ್ ಪಡೆದು 2,700 ಕೋಟಿ ರೂಪಾಯಿಗೆ ಇಳಿಸಿದರು ಎಂದು ಆರೋಪಿಸಿದರು.
2024-25ರಲ್ಲಿ 1,438 ಕೋಟಿ ರೂಪಾಯಿ, 2025-26ರಲ್ಲಿ 1,432 ಕೋಟಿ ರೂಪಾಯಿ ಮತ್ತು 2026-27ರಲ್ಲಿ 1,034 ಕೋಟಿ ರೂಪಾಯಿಗೆ ಅನುದಾನ ಇಳಿದಿದೆ ಎಂದು ಹೇಳಿದರು. ತಾವು ನೀರಾವರಿ ಸಚಿವರಾಗಿದ್ದಾಗ ಧರ್ಮಪುರ ಹೋಬಳಿ ಹಾಗೂ ಇತರ ಕಡೆಗಳಲ್ಲಿ ಬ್ಯಾರೇಜ್ ಮತ್ತು ಬಾಂದಾರಗಳನ್ನು ನಿರ್ಮಿಸಿದ್ದು, ಅದರಿಂದ ಸುಮಾರು 40,000 ಎಕರೆ ಅಡಿಕೆ ಬೆಳೆಗೆ ಅನುಕೂಲವಾಗಿದೆ ಎಂದರು. ಜೊತೆಗೆ ಹಿರಿಯೂರಿನಲ್ಲಿ ಹೈಟೆಕ್ ಆಸ್ಪತ್ರೆ, ಕೆಎಸ್‍ಆರ್‍ಟಿಸಿ ಘಟಕ, ತಾಲೂಕು ಕಚೇರಿ ಸಂಕೀರ್ಣ ಹಾಗೂ 593 ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದರು.
ಆಶಾ ಕಾರ್ಯಕರ್ತರು ಐದಾರು ದಿನಗಳಿಂದ ಮಕ್ಕಳೊಂದಿಗೆ ರಸ್ತೆಯಲ್ಲಿ ಮಲಗಿ ಹೋರಾಟ ನಡೆಸುತ್ತಿದ್ದರೂ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವ ಸೌಜನ್ಯವನ್ನು ಸರ್ಕಾರ ತೋರಿಸಿಲ್ಲ ಎಂದು ಟೀಕಿಸಿ ಚುನಾವಣೆ ವೇಳೆ 15,000 ರೂಪಾಯಿ ನೀಡುವುದಾಗಿ ಭರವಸೆ ನೀಡಿ, ಈಗ ಕೇಂದ್ರದ ಕಡೆಗೆ ಕೈ ತೋರಿಸಲಾಗುತ್ತಿದೆ ಬರಗಾಲದಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಇದ್ದು, ಮೊದಲು ಕುಡಿಯುವ ನೀರು ಕೊಡಬೇಕು ಮತ್ತು ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಮುಖಂಡರನ್ನು ಮತ್ತು ಟಿಕೆಟ್ ಆಕಾಂಕ್ಷಿಗಳನ್ನು ಅಕ್ಕಪಕ್ಕ ಕೂರಿಸಿಕೊಳ್ಳುವುದು ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು. ಒಳ ಮೀಸಲಾತಿ ವಿಚಾರದಲ್ಲಿ ಪ್ರಣಾಳಿಕೆಯಂತೆ ನಡೆದುಕೊಳ್ಳದೆ, ಸುಪ್ರೀಂ ಕೋರ್ಟ್ ಆದೇಶದ ನಂತರವೂ ಪೂರ್ಣ ಪ್ರಮಾಣದಲ್ಲಿ ಮೀಸಲಾತಿ ನೀಡದೆ ಅನ್ಯಾಯ ಮಾಡಲಾಗಿದೆ ಹಾಗೂ ಬಡ್ತಿಯಲ್ಲಿ ಮೀಸಲಾತಿ ನೀಡಿಲ್ಲ ಎಂದು ಆರೋಪಿಸಿದರು. ಗುತ್ತಿಗೆದಾರರ ಸಂಘದ ಆರೋಪ ಮತ್ತು ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿದೆ ಎಂದು ದೂರಿದರು.
ಗೋಷ್ಟಿಯಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಸಹ ಪ್ರಬಾರಿ ಎ.ಮುರಳಿ, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಮಾಧುರಿ ಗೀರಿಸ್ ಮೋಹನ್ ಕುಮಾರ್ ವೆಂಕಟೇಶ್ ಯಾದವ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಟಿ. ಜಿಲ್ಲಾ ಮೋರ್ಚಾದ ಅಧ್ಯಕ್ಷ ರಾಜು ಯಶವಂತ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು