ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ನವೆಂಬರ್ 24: ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಎಸ್.ಪಿ. ಅವರು ಭಾರಿ ಪ್ರಮಾಣದ ಆರ್ಥಿಕ ಅಕ್ರಮ, ನಕಲಿ ಬಿಲ್ ಸೃಷ್ಟಿ ಹಾಗೂ ಅಕ್ರಮ ಆಸ್ತಿ ಸಂಪಾದನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಬಂಜಾರ (ಲಂಬಾಣಿ) ಸಮಾಜದ ಮುಖಂಡರು, ಈ ಕುರಿತು ತಕ್ಷಣವೇ ಸಮಗ್ರ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಂ. ಸತೀಶ್ ಕುಮಾರ್, ಡಾ. ರವೀಂದ್ರ ವಿರುದ್ಧದ ಅಕ್ರಮಗಳ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ತಪ್ಪಿತಸ್ಥ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ, ಅವರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಇಷ್ಟು ವರ್ಷ ಪಡೆದ ಸರ್ಕಾರಿ ವೇತನ ಮತ್ತು ಸಾರ್ವಜನಿಕ ಹಣವನ್ನು ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು, ಸಚಿವರು ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಪ್ರಮುಖ ಆರೋಪಗಳೇನು?
- ಲೆಕ್ಕವಿಲ್ಲದ ಕೋಟ್ಯಂತರ ರೂಪಾಯಿ ಪಾವತಿ: ಯಾವುದೇ ರಶೀದಿಗಳಿಲ್ಲದೆ ಬರೋಬ್ಬರಿ 3.5 ಕೋಟಿ ರೂಪಾಯಿಗಳನ್ನು ಪಾವತಿಸಿಕೊಂಡಿದ್ದು, ಇದುವರೆಗೂ ಅದಕ್ಕೆ ಸೂಕ್ತ ಲೆಕ್ಕ ನೀಡಿಲ್ಲ. ಅಮಾನತುಗೊಳ್ಳುವ ಮುನ್ನ 1,71,075 ರೂ. ಹಾಗೂ ಅಮಾನತಿನ ನಂತರ 1,73,000 ರೂ. ಮೊತ್ತದ ಬಿಲ್ಗಳನ್ನು ದಾಖಲೆಗಳಿಲ್ಲದೆ ಪಾವತಿಸಿಕೊಳ್ಳಲಾಗಿದೆ ಎಂದು ಸತೀಶ್ ಕುಮಾರ್ ದೂರಿದ್ದಾರೆ.
- ಖಾಸಗಿ ಆಸ್ಪತ್ರೆಗೆ ಸರ್ಕಾರಿ ಸಿಬ್ಬಂದಿ ಬಳಕೆ: ಜಿಲ್ಲಾ ಶಸ್ತ್ರಚಿಕಿತ್ಸಕರಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಸ್ವಂತ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ಸರ್ಕಾರಿ ವೇತನ ನೀಡಲಾಗುತ್ತಿದ್ದರೂ, ಅವರನ್ನು ತಮ್ಮ ಖಾಸಗಿ ಆಸ್ಪತ್ರೆಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
- ಖರೀದಿಯಲ್ಲಿ ಭಾರಿ ಗೋಲ್ಮಾಲ್: ಟೆಂಡರ್ ಮತ್ತು ಸಾಮಗ್ರಿ ಖರೀದಿಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕೇವಲ 25 ಸಾವಿರ ರೂ. ಮೌಲ್ಯದ ವಸ್ತುವನ್ನು 1.25 ಲಕ್ಷ ರೂ.ಗೆ ಖರೀದಿಸಿರುವುದಾಗಿ ಬಿಲ್ ಮಾಡಲಾಗಿದೆ. ಅಲ್ಲದೆ, ಕಂಪ್ಯೂಟರ್, ರುಬ್ಬುವ ಯಂತ್ರ ಹಾಗೂ ಇತರ ಸಾಮಗ್ರಿಗಳಿಗೆ 1 ಲಕ್ಷ ರೂ.ಗೂ ಅಧಿಕ ಬಿಲ್ ಹಾಗೂ ಒಂದು ಧ್ವನಿವರ್ಧಕಕ್ಕೆ 10 ಸಾವಿರ ರೂ. ಬಿಲ್ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
- ಅಕ್ರಮ ಆಸ್ತಿ ಹಾಗೂ ರಾಜಕೀಯ ಒತ್ತಡ: ಸರ್ಕಾರಿ ನೌಕರರಾಗಿದ್ದುಕೊಂಡು ಪತ್ನಿ, ಮಕ್ಕಳು ಮತ್ತು ಸಂಬಂಧಿಕರ ಹೆಸರಿನಲ್ಲಿ ಅಪಾರ ಆಸ್ತಿ ಸಂಪಾದಿಸಿರುವುದು, ಸಾರ್ವಜನಿಕ ಆಸ್ತಿ ಒತ್ತುವರಿ ಹಾಗೂ ಸರ್ಕಾರಿ ಬಿಲ್ಗಳನ್ನು ತಮ್ಮ ಆಸ್ಪತ್ರೆಗೆ ತಿರುಗಿಸಿಕೊಳ್ಳುವ ಕೃತ್ಯ ನಡೆದಿದೆ. ತಮ್ಮ ಅಕ್ರಮಗಳು ಬಯಲಾಗುವ ಭೀತಿಯಿಂದ ಇತರರ ಮೇಲೆ ಗೂಬೆ ಕೂರಿಸಿ, ಶಾಸಕರು ಮತ್ತು ಸಚಿವರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಸತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಇದೇ ಸಂದರ್ಭದಲ್ಲಿ ಮಾತನಾಡಿದ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಡಿ.ಆರ್., ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಿದ್ದು, ಗ್ರಾಮೀಣ ಭಾಗದಿಂದ ಬರುವ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಇಂತಹ ಲೋಪಗಳನ್ನು ಸರಿಪಡಿಸುವ ಬದಲು ಡಾ. ರವೀಂದ್ರ ಅವರು ಭ್ರಷ್ಟಾಚಾರದಲ್ಲಿ ತೊಡಗಿ, ಕೆಳಹಂತದ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂಬಂಧ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮೂಲಕ ಲೋಕಾಯುಕ್ತ ಎಸ್.ಪಿ. ಮತ್ತು ಎಡಿಜಿಪಿ ಅವರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಮಂಜು ನಾಯಕ್, ಚೇತನ್ ಕುಮಾರ್ ನಾಯ್ಕ್, ಹಾಲೇಶ್, ಶಿವಕುಮಾರ್, ಪ್ರಶಾಂತ್ ನಾಯ್ಕ್, ಯಶವಂತ್ ಮತ್ತು ಗುರುರಾಜ್ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು