WPL 2023: ಯುಪಿ ವಾರಿಯರ್ಸ್ ತಂಡಕ್ಕೆ ನಾಯಕಿ ನೇಮಕ; ದುಬಾರಿ ಬೆಲೆ ಪಡೆದ ಆಟಗಾರ್ತಿಗಿಲ್ಲ ನಾಯಕತ್ವ!

WPL 2023 Australian star Batter Alyssa Healy to Captain UP Warriorz

ಮಹಿಳಾ ಪ್ರೀಮಿಯರ್ ಲೀಗ್‌ (WPL 2023) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹರಾಜು ಕೂಡ ನೆಡೆದಿದ್ದು, ಎಲ್ಲಾ 5 ತಂಡಗಳು ತಮಗೆ ಬೇಕಾದ ಆಟಗಾರ್ತಿಯರನ್ನು ಖರೀದಿಸಿವೆ. ಇದೀಗ ತಮ್ಮ ತಮ್ಮ ತಂಡಕ್ಕೆ ನಾಯಕಿಯರನ್ನು ಆಯ್ಕೆ ಮಾಡಲು ಫ್ರಾಂಚೈಸಿಗಳು ಮುಂದಾಗಿವೆ. ಇದರಡಿಯಲ್ಲಿ ಈಗಾಗಲೇ ಆರ್​ಸಿಬಿ (RCB) ತಂಡ ಸ್ಮೃತಿ ಮಂಧಾನ (Smriti Mandhana) ಅವರನ್ನು ತನ್ನ ತಂಡಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ. ಇದೀಗ ಯುಪಿ ವಾರಿಯರ್ಸ್ ತಂಡ ಕೂಡ ತನ್ನ ತಂಡದ ನಾಯಕಿ ಯಾರು ಎಂಬುದನ್ನು ಬಹಿರಂಗಗೊಳಿಸಿದೆ. ಯುಪಿ ತನ್ನ ನಾಯಕಿಯಾಗಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್ ಅಲಿಸ್ಸಾ ಹೀಲಿ (Alyssa Healy) ಅವರನ್ನು ಆಯ್ಕೆ ಮಾಡಿದೆ. ಆದರೆ ಸಾಕಷ್ಟು ಹಣ ಖರ್ಚು ಮಾಡಿ ಖರೀದಿಸಿದ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾಗೆ (Deepti Sharma) ಈ ತಂಡ ನಾಯಕತ್ವ ನೀಡಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಫ್ರಾಂಚೈಸಿ ಆಸೀಸ್ ಆಟಗಾರ್ತಿಗೆ ಮಣೆ ಹಾಕಿದೆ.

ವಾಸ್ತವವಾಗಿ ದೀಪ್ತಿ ಶರ್ಮಾ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರ್ತಿಯರಲ್ಲಿ ಒಬ್ಬರು. ಎರಡು ಕೋಟಿ 60 ಲಕ್ಷ ರೂಪಾಯಿ ನೀಡಿ, ಯುಪಿ ಫ್ರಾಂಚೈಸಿ ದೀಪ್ತಿ ಅವರನ್ನು ಖರೀದಿಸಿತ್ತು. ಇನ್ನು ಈಗ ನಾಯಕಿಯಾಗಿರುವ ಹೀಲಿ ಅವರನ್ನು 70 ಲಕ್ಷ ರೂಪಾಯಿ ಖರ್ಚು ಮಾಡಿ ಖರೀದಿಸಿತ್ತು.

T20 World Cup: ವಿಶ್ವಕಪ್​ನಿಂದ ಹೊರಬಿದ್ದ ಪಾಕಿಸ್ತಾನ; ಸೆಮಿಸ್​ನಲ್ಲಿ ಭಾರತಕ್ಕೆ ಆಸೀಸ್ ಎದುರಾಳಿ!

ಹೀಲಿಗೆ ಆದ್ಯತೆ

ಟೀಂ ಇಂಡಿಯಾ ಆಟಗಾರ್ತಿಯಾಗಿ ದೀಪ್ತಿ ಶರ್ಮಾ ನಾಯಕತ್ವದ ಅನುಭವ ಹೊಂದಿದ್ದಾರೆ. ಅವರು ಮಹಿಳಾ ಟಿ20 ಚಾಲೆಂಜ್‌ನಲ್ಲಿ ವೆಲೋಸಿಟಿಯ ತಂಡದ ನಾಯಕತ್ವ ವಹಿಸಿದ್ದರು. ಅವರ ನಾಯಕತ್ವದಲ್ಲಿ ತಂಡ ಕಳೆದ ಸೀಸನ್​ನಲ್ಲಿ ಫೈನಲ್ ಕೂಡ ತಲುಪಿತ್ತು. ಇತ್ತ ಹೀಲಿ ಆಸ್ಟ್ರೇಲಿಯನ್ ತಂಡದಲ್ಲಿ ಉಪನಾಯಕತ್ವವನ್ನು ನಿರ್ವಹಿಸಿದ್ದಾರೆ. ಬಿಗ್ ಬ್ಯಾಷ್ ಲೀಗ್​ನಲ್ಲೂ ಈ ಜವಾಬ್ದಾರಿ ನಿರ್ವಹಿಸಿದ್ದಾರೆ.

ನಾಯಕತ್ವ ಸಿಕ್ಕಿರುವುದಕ್ಕೆ ಹೀಲಿ ಸಂತಸ

ನಾಯಕಿಯಾದ ನಂತರ ತನ್ನ ಅಭಿಪ್ರಾಯ ಹೊರಹಾಕಿರುವ ಹೀಲಿ, ‘ಮಹಿಳಾ ಪ್ರೀಮಿಯರ್ ಲೀಗ್‌ನ ಐತಿಹಾಸಿಕ ಮೊದಲ ಸೀಸನ್​ನಲ್ಲಿ ಯುಪಿ ವಾರಿಯರ್ಸ್ ತಂಡದ ನಾಯಕತ್ವದ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾವೆಲ್ಲರೂ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಕಾಯುತ್ತಿದ್ದೆವು. ಯುಪಿ ಉತ್ತಮ ತಂಡವನ್ನು ಹೊಂದಿದೆ. ನಮ್ಮ ತಂಡ ಅನುಭವ ಮತ್ತು ಯುವ ಆಟಗಾರ್ತಿಯರ ಉತ್ತಮ ಮಿಶ್ರಣವನ್ನು ಹೊಂದಿದ್ದೇವೆ ಎಂದಿದ್ದಾರೆ.

ಹೀಲಿ ಇದುವರೆಗೆ 139 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಸುಮಾರು 2500 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರು ಒಂದು ಶತಕ ಮತ್ತು 14 ಅರ್ಧ ಶತಕಗಳನ್ನು ಗಳಿಸಿದ್ದಾರೆ. ವಿಕೆಟ್ ಕೀಪರ್ ಆಗಿಯೂ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನೂ ಹೀಲಿ ಹೊಂದಿದ್ದಾರೆ. ಅವರು ಶ್ರೀಲಂಕಾ ವಿರುದ್ಧ 61 ಎಸೆತಗಳಲ್ಲಿ 148 ರನ್ ಚಚ್ಚಿದ್ದರು.

ಯುಪಿ ತಂಡ ಇಂಗ್ಲೆಂಡ್‌ನ ಜೋ ಲೂಯಿಸ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿದೆ. ಅಂಜು ಜೈನ್ ಸಹಾಯಕ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ಆಸ್ಟ್ರೇಲಿಯಾದ ಲಿಸಾ ಸ್ಥಾಲೇಕರ್ ತಂಡದ ಮಾರ್ಗದರ್ಶಕರಾಗಿದ್ದಾರೆ. ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಆಶ್ಲೇ ನೋಫ್ಕೆಗೆ ನೀಡಲಾಗಿದೆ. ಈ ತಂಡ ಮಾರ್ಚ್ 5 ರಂದು ಗುಜರಾತ್ ಜೈಂಟ್ಸ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wpl-2023-australian-star-batter-alyssa-healy-to-captain-up-warriorz-psr-au14-524837.html

Leave a Reply

Your email address will not be published. Required fields are marked *