ಲಾರಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹ: ಭೀಮಸಮುದ್ರದಲ್ಲಿ ನೂರಾರು ಮಹಿಳೆಯರ ರಸ್ತೆ ತಡೆ.

ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203

ಚಿತ್ರದುರ್ಗ:

ಅದಿರು ಸಾಗಾಣಿಕೆ ಲಾರಿಗಳ ಸಂಚಾರವನ್ನು ಗ್ರಾಮದೊಳಗೆ ನಿರ್ಬಂಧಿಸಬೇಕೆಂದು ಕಳೆದ 60 ದಿನಗಳಿಂದ ಭೀಮಸಮುದ್ರದಲ್ಲಿ ನಡೆಯುತ್ತಿರುವ ರಸ್ತೆ ತಡೆ ಚಳುವಳಿಗೆ ಇದೀಗ ಲಾರಿ ಮಾಲೀಕರ ಕುಟುಂಬಗಳ ಮಹಿಳೆಯರಿಂದ ಪ್ರತಿರೋಧ ವ್ಯಕ್ತವಾಗಿದೆ.

ಸೋಮವಾರ ಎಸ್.ಆರ್. ಹಿರೇಮಠ ಹಾಗೂ ರವಿಕೃಷ್ಣ ರೆಡ್ಡಿ ಅವರು ಭೀಮಸಮುದ್ರಕ್ಕೆ ಭೇಟಿ ನೀಡಿ ರೈತ ಸಂಘಟನೆ ಹಾಗೂ ಗಣಿಬಾಧಿತ ಪ್ರದೇಶಗಳ ರಕ್ಷಣೆಗೆ ಬೆಂಬಲ ಸೂಚಿಸಿ ತೆರಳಿದ ಬಳಿಕ, ಅದಿರು ಸಾಗಾಣಿಕೆಯಲ್ಲಿ ತೊಡಗಿರುವ ಲಾರಿ ಮಾಲೀಕರ ಕುಟುಂಬಸ್ಥರು ರಸ್ತೆ ತಡೆ ನಡೆಸಿ ಮುಷ್ಕರ ನಿರತರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು.

ಭೀಮಸಮುದ್ರದ ಸಮೀಪದ ಗುಡ್ಡಗಳ ಸಾಲಿನಲ್ಲಿ ಹಲವು ದಶಕಗಳಿಂದ ಅದಿರು ಗಣಿಗಾರಿಕೆ ನಡೆಯುತ್ತಿದ್ದು, ಗಣಿಯಿಂದ ಹೊರತೆಗೆಯುವ ಅದಿರನ್ನು ಸಾರ್ವಜನಿಕ ರಸ್ತೆಯ ಮೂಲಕವೇ ಸಾಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆಯ ಮೂಲಕ ಹಲವು ವರ್ಷಗಳಿಂದ ಲಾರಿಗಳ ಸಂಚಾರ ನಡೆಯುತ್ತಿದೆ.

ಆದರೆ ಕಳೆದ 60 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಪರಿಣಾಮವಾಗಿ ಅದಿರು ಸಾಗಾಣಿಕೆ ಲಾರಿಗಳ ಸಂಚಾರಕ್ಕೆ ತಡೆಯಾಗಿದ್ದು, ಇದನ್ನೇ ಪ್ರಮುಖ ಜೀವನೋಪಾಯವನ್ನಾಗಿ ಮಾಡಿಕೊಂಡಿರುವ ಲಾರಿ ಮಾಲೀಕರು ಹಾಗೂ ಚಾಲಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಮಹಿಳೆಯರು ತಿಳಿಸಿದ್ದಾರೆ.

ಲಾರಿ ಕಂತು, ಬಡ್ಡಿ ಪಾವತಿಯ ಹೊರೆ

ಬ್ಯಾಂಕ್ ಹಾಗೂ ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಲಾರಿಗಳನ್ನು ಖರೀದಿಸಲಾಗಿದೆ. ಇದೀಗ ಲಾರಿಗಳಿಗೆ ಕೆಲಸವಿಲ್ಲದ ಕಾರಣ ಸಾಲದ ಕಂತು ಮತ್ತು ಬಡ್ಡಿ ಪಾವತಿಸುವುದು ಕಷ್ಟವಾಗಿದೆ. ಇದರ ಜೊತೆಗೆ ಕುಟುಂಬದ ದಿನನಿತ್ಯದ ಖರ್ಚು, ಮಕ್ಕಳ ಶಾಲಾ ಶುಲ್ಕ ಸೇರಿದಂತೆ ವಿವಿಧ ವೆಚ್ಚಗಳನ್ನು ನಿರ್ವಹಿಸುವ ಹೊರೆ ಎದುರಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಆದ್ದರಿಂದ ಅದಿರು ಸಾಗಾಣಿಕೆ ಲಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ, ತಮ್ಮ ಕುಟುಂಬಗಳ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮಹಿಳೆಯರು ಒತ್ತಾಯಿಸಿದರು.

ಮಹಿಳೆಯರು ನಡೆಸಿದ ರಸ್ತೆ ತಡೆ ಪ್ರತಿಭಟನೆಗೆ ಅದಿರು ಸಾಗಾಣಿಕೆ ಲಾರಿ ಮಾಲೀಕರ ಸಂಘವೂ ಬೆಂಬಲ ಸೂಚಿಸಿತು.

ಪ್ರತಿಭಟನೆಯಲ್ಲಿ ಮುಬಾರಕ್, ರಫೀಕ್, ಮೊಮಮ್ಡ್, ಬಾಲಾಜಿ, ವೆಂಕಟೇಶ್, ತಿಪ್ಪೇಶ್, ಕೋಟಿ ಮಂಜುನಾಥ್, ಒಂಕಾರ್, ವಿಶ್ವನಾಥ್ ಸೇರಿದಂತೆ ಹಲವರು ಹಾಗೂ ಸುಲೋಚನಾ, ಬಸಮ್ಮ, ರೇಖಾ, ಕಮಲ, ಲತಾ, ಲಕ್ಷ್ಮಿ, ರೇಣುಕಾ, ಮಂಜಮ್ಮ, ಗೌರಮ್ಮ, ದುರ್ಗಮ್ಮ, ರೂಪ, ಭಾಗ್ಯ, ನರ್ಸಮ್ಮ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *