ಚಿತ್ರದುರ್ಗ ಅ. 07
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಮ್ಮ ದೇಶಕ್ಕೆ ಹೊರಗಿನ ಶತೃಗಳ ಭಯಕ್ಕಿಂತ ದೇಶದ ಒಳಗಿನ ಶತೃಗಳಿಂದ ಭಯ ಇದೆ. ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ದೇಶದಲ್ಲಿ ನಕ್ಸಲಿಸಂ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಹದ್ದುಬಸ್ತಿನಲ್ಲಿಡಲಾಗಿದೆ. ದೇಶದ ಹೊರಗಿನ ಭದ್ರತೆ ಸುಭದ್ರವಾಗಿದ್ದರೂ, ದೇಶದ ಒಳಗಿನ ಸಾಂವಿಧಾನಿಕ ಸಂಸ್ಥೆಗಳಿಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ದೂರಿದರು.
ಚಿತ್ರದುರ್ಗ ನಗರದ ವಾಲ್ಮಿಕೀ ಸಮುದಾಯ ಭವನದಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿವತಿ ಯಿಂದ ನಡೆದ ಭಾರತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರ 25 ವರ್ಷಗಳ ಸುದೀರ್ಘ ಜನಪರ ಆಡಳಿತ, ಸೇವಾ ಸಂಕಲ್ಪದೊಂದಿಗೆ ಭಾರತ ದೇಶವನ್ನು ವಿಕಸಿತ ಭಾರತ-2047 ಸಂಕಲ್ಪದೊಂದಿಗೆ ಮುನ್ನುಗ್ಗುತ್ತಿರುವ ಈ ಶುಭ ಸಂದರ್ಭದಲ್ಲಿ ಸೇವಾ ಜ್ಯೋತಿ ಯಾತ್ರೆ ಮತ್ತು ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಸಹಿಸಿ ಕೊಳ್ಳಲಾಗದ ಕಾಂಗ್ರೆಸ್ ಪಕ್ಷ, ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ಮಾಡುತ್ತಿದೆ ಮತ್ತು ರಾಜ್ಯದಲ್ಲಿ ಸಾಲು ಸಾಲು ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹೊರಿಸುತ್ತಿದೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಬಲವಾದ ಸ್ಥಾನ ಪಡೆದುಕೊಂಡಿದೆ. ದಶಕಗಳ ಕನಸಾಗಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಾಣ, ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ರದ್ದು ಹಾಗೂ ಮುಸ್ಲಿಂ ಮಹಿಳೆಯರ ಹಿತ ಕಾಯುವ ತ್ರಿವಳಿ ತಲಾಕ್ ನಿಷೇಧದಂತಹ ಐತಿಹಾಸಿಕ ನಿರ್ಧಾರಗಳನ್ನು ಪ್ರಧಾನಿ ಮೋದಿ ಕೈಗೊಂಡಿದ್ದಾರೆ. ಇಂದು ಭಾರತದ ಸಮ್ಮತಿಯಿಲ್ಲದೆ ಜಾಗತಿಕ ಮಟ್ಟದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದರು.
ಸಿಬಿಐ, ಈಡಿ, ಚುನಾವಣಾ ಆಯೋಗ ಹಾಗೂ ನ್ಯಾಯಾಂಗದಂತಹ ಸ್ವಾಯತ್ತ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಅಪನಂಬಿಕೆ ಹುಟ್ಟುಹಾಕುತ್ತಿದ್ದು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನೂ ಪ್ರಶ್ನಿಸುವ ಹಂತಕ್ಕೆ ತಲುಪಿದೆ. ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್) ಕುರಿತು ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದಕ್ಕೆ ಮತದಾರರು ತಮ್ಮ ನೆಲೆ ಅಥವಾ ಊರುಗಳ ಆಯ್ಕೆ ಕಾರಣವೇ ಹೊರತು ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆದರೆ ಇದನ್ನು ಕಾಂಗ್ರೆಸ್ ದೊಡ್ಡ ಹಗರಣ ದಂತೆ ಬಿಂಬಿಸಿ ಸುಳ್ಳು ವದಂತಿ ಹರಡುತ್ತಿದೆ ಎಂದು ದೂರಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಆಡಳಿತದಲ್ಲಿ ರಾಜ್ಯದ ಜನತೆ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ವಿದ್ಯುತ್, ಹಾಲಿನ ದರಹಾಗೂ ಬಸ್‍ದರಗಳನ್ನು ಸಾಲು ಸಾಲಾಗಿ ಏರಿಸಲಾಗುತ್ತಿದೆ. ಹಾಲಿನ ದರ ಏರಿಕೆಯನ್ನು ರೈತರ ಹಿತದೃಷ್ಟಿಯಿಂದ ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆಯಾದರೂ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಲೀಟರ್‍ಗೆ 3 ರೂಪಾಯಿ ಹೆಚ್ಚುವರಿ ಸಬ್ಸಿಡಿಯನ್ನು ರೈತರಿಗೆ ನೀಡಲು ಅವರ ಬಳಿ ಹಣವಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಆಡಳಿತ ಪಕ್ಷವು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಸೋಲಿನ ಭೀತಿಯಿಂದ ತತ್ತರಿಸಿದ್ದು, ಇಂತಹ ಕುತಂತ್ರ ರಾಜಕಾರಣ ಮತ್ತು ಬೆಲೆ ಏರಿಕೆಯ ನಿರ್ಧಾರಗಳ ಮೂಲಕ ಜನವಿರೋಧಿ ಆಡಳಿತ ನಡೆಸುತ್ತಿದೆ ರಾಜ್ಯ ಸರ್ಕಾರವು ಪ್ರತಿಯೊಂದು ಕುಟುಂಬದಿಂದಹಾಲು, ಬಸ್ ದರ, ಮನೆ ತೆರಿಗೆ ಹಾಗೂ ತುಪ್ಪದ ಮೇಲಿನ ತೆರಿಗೆ ಸೇರಿದಂತೆ ವಿವಿಧ ಮೂಲಗಳಿಂದ ಅಂದಾಜು 6,000 ರೂಪಾಯಿಗಳನ್ನು ಸಂಗ್ರಹಿಸುತ್ತಿದೆ. ಆದರೆ ಮಹಿಳೆಯರಿಗೆ ಕೇವಲ 2,000 ರೂಪಾಯಿ ನೀಡಲಾಗುತ್ತಿದ್ದು, ಉಳಿದ ಹಣ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು. ಬೆಲೆ ಏರಿಕೆಯು ಜನಸಾಮಾನ್ಯರ ಹಿತಕ್ಕಾಗಿಯಲ್ಲ, ಬದಲಿಗೆ ಲೂಟಿ ಹೊಡೆಯಲು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದರಾಗಿದ್ದವರು ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬೀದಿಯಲ್ಲಿ ನಿಂತು ಪ್ರತಿಭಟಿಸುವುದನ್ನು ಬಿಟ್ಟು ಸಂಸತ್ತಿನಲ್ಲಿ ಪ್ರಕ್ರಿಯೆಗಳ ಮೂಲಕ ಚರ್ಚಿಸಬೇಕು ಚುನಾವಣಾ ಆಯುಕ್ತರನ್ನು ವಜಾಗೊಳಿಸಲು ಪಾರ್ಲಿಮೆಂಟ್‍ನಲ್ಲಿ ಚರ್ಚೆ, ನಿಂದನಾ ಪ್ರಸ್ತಾವ ಹಾಗೂ ಬಹುಮತದ ಅಗತ್ಯವಿದ್ದು, ರಾಷ್ಟ್ರಪತಿಯವರ ಅಂಕಿತದ ನಂತರವೇ ಕ್ರಮ ಸಾಧ್ಯ. ಈ ಪರಿಜ್ಞಾನವಿಲ್ಲದೆ ಬೀದಿಗಿಳಿದು ಪ್ರತಿಭಟಿಸುವುದು ಸರಿಯಲ್ಲ ಎಂದು ಕಿಡಿಕಾರಿದ ಅವರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ವನ್ನು ಶ್ಲಾಘಿಸಿದ ಅವರು, ಮೋದಿ ಅವರು ವಿಶ್ವನಾಯಕರಾಗಿ ಹೊರಹೊಮ್ಮಿದ್ದು, ಯಾವುದೇ ಸ್ವಾರ್ಥವಿಲ್ಲದೆ ದೇಶ ಸೇವೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಂತೆ ತಮ್ಮ ಕುಟುಂಬದ ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿ ಅವರಂತಹ ಬಿಜೆಪಿ ನಾಯಕರ ನಿಸ್ವಾರ್ಥ ಸೇವೆಯನ್ನು ಉದಾಹರಿಸಿದರು.
ರಾಜ್ಯದಲ್ಲಿ ಎನ್‍ಡಿಎ ಮೈತ್ರಿಕೂಟ ಬಲವಾಗಿದ್ದು, ಮುಂಬರುವ ಎಲ್ಲಾ ಎಂಎಲ್‍ಎ ಹಾಗೂ ಎಂಪಿ ಚುನಾ ವಣೆಗಳನ್ನು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಡಿಯಲ್ಲೇ ಎದುರಿಸಲಾಗುವುದು. ಪ್ರಸ್ತುತ ರಾಜ್ಯದಲ್ಲಿನ ಕಮಿಷನ್ ಹಾಗೂ ಲೂಟಿಕೋರ ಸರ್ಕಾರದಿಂದ ಬೇಸತ್ತು ಗುತ್ತಿಗೆದಾರರು ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ(ಎನ್‍ಡಿಎ) ಒಗ್ಗಟ್ಟಿನಿಂದ ಸ್ಪರ್ಧಿಸಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ ಕೆ.ಟಿ.ಕುಮಾರಸ್ವಾಮಿ, ಶಾಸಕರಾದ ಡಾ.ಎಂ.ಚಂದ್ರಪ್ಪ ವಿಧಾನಪರಿಷತ್ ಸದಸ್ಯ ರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ, ದಾವಣಗೆರೆ ವಿಭಾಗ ಸಹಾ ಪ್ರಭಾರಿ ಎ.ಮುರಳಿ, ಮುಖಂಡರಾದ ರಾಜಣ್ಣ, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ, ಪಾಪ ನಾಯ್ಕ್, ಅನಿಲ್ ಕುಮಾರ್, ಡಾ.ಮಂಜುನಾಥ್ ಸೇರಿದಂತೆ ಬಿಜೆಪಿ ವಿವಿಧ ಮೋರ್ಚಾದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಸ್ವಾಗತಿಸಿದರು, ಮಾಧುರಿ ಗೀರೀಶ್ ಪ್ರತಿಜ್ಞಾ ವಿಧಿ ಭೋಧಿಸಿದರು, ವೆಂಕಟೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ನಡೆಸಿಕೊಟ್ಟ ಭಾಷಣವನ್ನು ವರ್ಚುವಲ್‍ನಲ್ಲಿ ವಿಕ್ಷಣೇ ಮಾಡಲಾಯಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು