ರಾಜ್ಯದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಅಂಕಪಟ್ಟಿಗಳ ಮಾದರಿಯಲ್ಲೇ ಇನ್ನು ಮುಂದೆ ವರ್ಗಾವಣೆ ಪ್ರಮಾಣಪತ್ರವನ್ನು (Transfer Certificate – TC) ಡಿಜಿಟಲ್ ರೂಪದಲ್ಲಿ ನೀಡಲು ಮುಂದಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಪ್ರಾಯೋಗಿಕವಾಗಿ ದ್ವಿತೀಯ ಪಿಯುಸಿ ತೇರ್ಗಡೆಯಾದ ಹೊಸ ವಿದ್ಯಾರ್ಥಿಗಳಿಗೆ ಡಿಜಿಟಲ್ ಟಿಸಿ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಅನುಮತಿ ನೀಡಿದೆ. ವಿದ್ಯಾರ್ಥಿಗಳ ಹಾಗೂ ಪೋಷಕರ ಸಮಯ ಮತ್ತು ಶ್ರಮವನ್ನು ಉಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ.
ಹೊಸ ಡಿಜಿಟಲ್ ಟಿಸಿ ಪಡೆಯುವುದು ಹೇಗೆ? ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಪರೀಕ್ಷಾ ಫಲಿತಾಂಶದ ದತ್ತಾಂಶವನ್ನು ಬಳಸಿಕೊಂಡು ತಂತ್ರಾಂಶವು ಸ್ವಯಂಚಾಲಿತವಾಗಿ ಈ ಡಿಜಿಟಲ್ ಟಿಸಿಯನ್ನು ಸೃಷ್ಟಿಸುತ್ತದೆ. ಪರೀಕ್ಷಾ ಪ್ರಕ್ರಿಯೆಗಳು ಮುಗಿದ ಬಳಿಕ ವಿದ್ಯಾರ್ಥಿಗಳು ನೇರವಾಗಿ ತಮ್ಮ ‘ಡಿಜಿಲಾಕರ್’ (DigiLocker) ಖಾತೆಯ ಮೂಲಕ ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹೊಸ ಟಿಸಿಯಲ್ಲಿನ ಪ್ರಮುಖ ಬದಲಾವಣೆಗಳು:
- ಅನಗತ್ಯ ಮಾಹಿತಿಗೆ ಕೊಕ್: ಹಳೆಯ ನಮೂನೆಯಲ್ಲಿದ್ದ ಶುಲ್ಕ ಬಾಕಿ, ವಿದ್ಯಾರ್ಥಿ ವೇತನ ಹಾಗೂ ಹಾಜರಾತಿ ಲೆಕ್ಕಾಚಾರದಂತಹ ಹಲವು ಅನಗತ್ಯ ಕಾಲಂಗಳನ್ನು ಹೊಸ ಮಾದರಿಯಲ್ಲಿ ಕೈಬಿಡಲಾಗಿದೆ.
- ದಾಖಲೆಗಳ ನಿಖರತೆ ಕಡ್ಡಾಯ: ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳ ನಿಖರತೆಗಾಗಿ ಪರೀಕ್ಷಾ ನೋಂದಣಿ ಸಂಖ್ಯೆ, ಅಪಾರ್ ಐಡಿ (APAAR ID) ಹಾಗೂ ಸ್ಟೂಡೆಂಟ್ ಅಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ (SATS) ನಂಬರ್‌ಗಳನ್ನು ಇದರಲ್ಲಿ ಕಡ್ಡಾಯವಾಗಿ ನಮೂದಿಸಲಾಗುತ್ತದೆ.
- ಸ್ವಯಂಚಾಲಿತ ‘ಉತ್ತಮ’ ನಡತೆ (Good Conduct): ವಿದ್ಯಾರ್ಥಿಗಳ ನಡತೆಯ ಕುರಿತು ಪ್ರಾಂಶುಪಾಲರು ನಿಗದಿತ ದಿನಾಂಕದೊಳಗೆ ಯಾವುದೇ ನಕಾರಾತ್ಮಕ ಅಂಶಗಳನ್ನು ದಾಖಲಿಸದಿದ್ದರೆ, ತಂತ್ರಾಂಶವೇ ಸ್ವಯಂಚಾಲಿತವಾಗಿ ವಿದ್ಯಾರ್ಥಿಯ ನಡತೆಯನ್ನು ‘ಉತ್ತಮ’ ಎಂದು ನಮೂದಿಸುತ್ತದೆ. ಇದರಿಂದ ಕೇವಲ ಪ್ರಾಂಶುಪಾಲರ ಭೌತಿಕ ಸಹಿಗಾಗಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಅಲೆಯುವುದು ತಪ್ಪುತ್ತದೆ.
- ಕ್ಯೂಆರ್ ಕೋಡ್ (QR Code) ಭದ್ರತೆ: ಈ ಡಿಜಿಟಲ್ ಟಿಸಿಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತವೆ. ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಆಧಾರ ಕೇಂದ್ರಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಕ್ಷಣಾರ್ಧದಲ್ಲಿ ಟಿಸಿಯನ್ನು ಪರಿಶೀಲಿಸಬಹುದು. ಇದರಿಂದ ನಕಲಿ ಟಿಸಿಗಳ ಹಾವಳಿಗೆ ಶಾಶ್ವತ ಬ್ರೇಕ್ ಬೀಳಲಿದೆ.
ಮೊದಲ ಹಂತದಲ್ಲಿ ಯಾರಿಗೆ ಈ ಸೌಲಭ್ಯ?
- ಪ್ರಸಕ್ತ ಸಾಲಿನಲ್ಲಿ (2025-26) ಕೇವಲ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಯೋಗಿಕವಾಗಿ ಈ ಡಿಜಿಟಲ್ ಟಿಸಿ ಸೌಲಭ್ಯ ಲಭ್ಯವಿರಲಿದೆ.
- ಖಾಸಗಿ ಕಾಲೇಜು ವಿದ್ಯಾರ್ಥಿಗಳು, ರಿಪೀಟರ್ಸ್ (ಪುನರಾವರ್ತಿತ ವಿದ್ಯಾರ್ಥಿಗಳು) ಹಾಗೂ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಪತ್ರ ಬಯಸುವ ವಿದ್ಯಾರ್ಥಿಗಳು ಈ ಹಿಂದಿನಂತೆಯೇ ಖುದ್ದಾಗಿ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಿ, ಭೌತಿಕ ಟಿಸಿಯನ್ನೇ ಪಡೆಯಬೇಕಾಗುತ್ತದೆ.
ಮಾನ್ಯತೆ ಕುರಿತ ಸ್ಪಷ್ಟನೆ: “ಡಿಜಿಲಾಕರ್ ಮೂಲಕ ನೀಡಲಾಗುವ ಈ ಡಿಜಿಟಲ್ ಟಿಸಿಗೆ ಪ್ರಾಂಶುಪಾಲರ ಭೌತಿಕ ಸಹಿಯ ಅಗತ್ಯವಿರುವುದಿಲ್ಲ. ಉನ್ನತ ಶಿಕ್ಷಣದ ಪ್ರವೇಶಾತಿಗೆ ಇದನ್ನು ಮಾನ್ಯತೆ ಪಡೆದ ಅಧಿಕೃತ ದಾಖಲೆಯೆಂದು ಪರಿಗಣಿಸಬೇಕು” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಎನ್. ಪದ್ಮಿನಿ ಅವರು ಸ್ಪಷ್ಟಪಡಿಸಿದ್ದಾರೆ.