ಡಿಜಿಟಲ್ ಜನಗಣತಿ: ನಿಮ್ಮ ಮನೆ ಬಾಗಿಲಿಗೆ ಬರುವವರು ಅಧಿಕಾರಿಗಳೋ ಅಥವಾ ವಂಚಕರೋ? ಪತ್ತೆ ಹಚ್ಚುವುದು ಹೇಗೆ?

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಜನಗಣತಿ ಕಾರ್ಯ ಆರಂಭವಾಗಿದೆ. 2027ರ ವೇಳೆಗೆ ದೇಶದ ಪ್ರತಿಯೊಂದು ಮನೆಯ ದತ್ತಾಂಶವನ್ನು ಡಿಜಿಟಲ್ ಮೂಲಕ ಕಲೆಹಾಕುವ ಬೃಹತ್ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಈ ಹೊಸ ಡಿಜಿಟಲ್ ವ್ಯವಸ್ಥೆಯನ್ನೇ ಬಂಡವಾಳವಾಗಿಸಿಕೊಂಡಿರುವ ಸೈಬರ್ ವಂಚಕರು, ಮುಗ್ಧ ಜನರನ್ನು, ಅದರಲ್ಲೂ ವಿಶೇಷವಾಗಿ ವಯೋವೃದ್ಧರು ಮತ್ತು ಕಡಿಮೆ ವಿದ್ಯಾವಂತರನ್ನು ಗುರಿಯಾಗಿಸಿಕೊಂಡು ಹಣ ದೋಚುವ ಕೃತ್ಯಗಳಿಗೆ ಇಳಿದಿದ್ದಾರೆ.

ಜನಗಣತಿಯ ನೆಪದಲ್ಲಿ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗದಂತೆ ತಡೆಯಲು, ಅಸಲಿ ಅಧಿಕಾರಿಗಳು ಮತ್ತು ವಂಚಕರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಂಚಕರು ಬಳಸುವ ತಂತ್ರಗಳೇನು?

ಜನಗಣತಿಯ ಹೆಸರಿನಲ್ಲಿ ಸಾರ್ವಜನಿಕರನ್ನು ಯಾಮಾರಿಸಲು ವಂಚಕರು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ:

  • ನಕಲಿ ಕರೆಗಳು ಮತ್ತು ಬೆದರಿಕೆ: “ನಿಮ್ಮ ಜನಗಣತಿ ಮಾಹಿತಿ ಅಪೂರ್ಣವಾಗಿದೆ, ಕೂಡಲೇ ಅಪ್‌ಡೇಟ್ ಮಾಡದಿದ್ದರೆ ಸರ್ಕಾರಿ ಸೌಲಭ್ಯಗಳು ರದ್ದಾಗುತ್ತವೆ” ಎಂದು ಬೆದರಿಸಿ ಕರೆ ಮಾಡುತ್ತಾರೆ. ಬಳಿಕ ಆಧಾರ್ ಸಂಖ್ಯೆ ಮತ್ತು ಮೊಬೈಲ್‌ಗೆ ಬರುವ ಒಟಿಪಿ (OTP) ಪಡೆದು ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ.
  • ನಕಲಿ ವೆಬ್‌ಸೈಟ್‌ಗಳು/ಲಿಂಕ್‌ಗಳು: ಅಚ್ಚುಮೆಚ್ಚು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಂತೆಯೇ ಕಾಣುವ ನಕಲಿ ಲಿಂಕ್‌ಗಳನ್ನು ವಾಟ್ಸಾಪ್ ಅಥವಾ ಇಮೇಲ್ ಮೂಲಕ ಕಳುಹಿಸುತ್ತಾರೆ. ಇಲ್ಲಿ ನೀವು ನಮೂದಿಸುವ ಪ್ರತಿಯೊಂದು ವೈಯಕ್ತಿಕ ಮಾಹಿತಿಯೂ ಹ್ಯಾಕರ್‌ಗಳ ಪಾಲಾಗುತ್ತದೆ.
  • ಮನೆ ಬಾಗಿಲಿಗೆ ಬಂದು ಸುಲಿಗೆ: ಕುತ್ತಿಗೆಗೆ ನಕಲಿ ಐಡಿ ಕಾರ್ಡ್ ಹಾಕಿಕೊಂಡು ಮನೆಗೆ ಬರುವ ಕೆಲವು ಖದೀಮರು, ಜನಗಣತಿ ಪ್ರಕ್ರಿಯೆಗಾಗಿ 100 ರೂ. ನಿಂದ 500 ರೂ.ಗಳವರೆಗೆ ‘ನೋಂದಣಿ ಶುಲ್ಕ’ ಅಥವಾ ‘ಪ್ರೊಸೆಸಿಂಗ್ ಫೀಸ್’ ಎಂದು ವಸೂಲಿ ಮಾಡುತ್ತಿದ್ದಾರೆ.
  • ಮಾಲ್‌ವೇರ್ ಆ್ಯಪ್‌ಗಳು: ಸುಲಭವಾಗಿ ಜನಗಣತಿ ಮಾಡಿಸಲು ಈ ಆ್ಯಪ್ ಡೌನ್‌ಲೋಡ್ ಮಾಡಿ ಎಂದು ಲಿಂಕ್ ಕಳುಹಿಸಿ, ನಿಮ್ಮ ಮೊಬೈಲ್‌ನ ಸಂಪೂರ್ಣ ನಿಯಂತ್ರಣವನ್ನು (Screen sharing/Hacking) ಕಸಿದುಕೊಳ್ಳುತ್ತಾರೆ.

ಅಪ್ಪಿತಪ್ಪಿಯೂ ಈ ಮಾಹಿತಿಯನ್ನು ನೀಡಬೇಡಿ!

ಸರ್ಕಾರವು ಜನಗಣತಿಗಾಗಿ ಅತ್ಯಂತ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದೆ. ನಿಮ್ಮ ಮನೆಗೆ ಬರುವವರು ಎಷ್ಟೇ ಒತ್ತಾಯಿಸಿದರೂ ಈ ಕೆಳಗಿನ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ:

  • ಬ್ಯಾಂಕ್ ಖಾತೆ ಸಂಖ್ಯೆ, ಎಟಿಎಂ ಪಿನ್, ಪಾಸ್‌ವರ್ಡ್ ಅಥವಾ ಒಟಿಪಿ (OTP).
  • ಜನಗಣತಿ ಸಂಪೂರ್ಣ ಉಚಿತವಾಗಿದೆ. ಹೀಗಾಗಿ ಯಾರಿಗೂ ಒಂದು ರೂಪಾಯಿ ಹಣವನ್ನು ನೀಡುವಂತಿಲ್ಲ.
  • ನಿಮ್ಮ ಮೂಲ ದಾಖಲೆಗಳನ್ನು (ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್) ಯಾರಿಗೂ ಒಪ್ಪಿಸುವ ಅಗತ್ಯವಿಲ್ಲ.

ಜನಗಣತಿಯಲ್ಲಿ ನೀವು ನೀಡಬೇಕಾದ ಅಧಿಕೃತ ಮಾಹಿತಿ ಯಾವುದು?

ಅಧಿಕೃತ ಜನಗಣತಿದಾರರು ನಿಮ್ಮ ಕುಟುಂಬ, ಶಿಕ್ಷಣ, ಉದ್ಯೋಗ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದ ಒಟ್ಟು 34 ನಿಗದಿತ ಪ್ರಶ್ನೆಗಳನ್ನು ಮಾತ್ರ ಕೇಳುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳು:

1. ಮನೆ ಮತ್ತು ಕುಟುಂಬದ ವಿವರಗಳು:

  • ಕಟ್ಟಡ ಮತ್ತು ಮನೆಯ ಸಂಖ್ಯೆ, ಹಾಗೂ ಮನೆಯ ಪ್ರಸ್ತುತ ಸ್ಥಿತಿ.
  • ಮನೆಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ ಮತ್ತು ವಿವಾಹಿತ ದಂಪತಿಗಳ ಸಂಖ್ಯೆ.
  • ಮನೆಯ ಮುಖ್ಯಸ್ಥನ ಹೆಸರು, ಲಿಂಗ ಮತ್ತು ಅವರು ಮೀಸಲಾತಿ ವರ್ಗಕ್ಕೆ (SC/ST) ಸೇರಿದವರೇ ಎಂಬ ಮಾಹಿತಿ.
  • ಮನೆಯ ಮಾಲೀಕತ್ವ (ಸ್ವಂತದ್ದೋ ಅಥವಾ ಬಾಡಿಗೆಯೋ?) ಮತ್ತು ಕೊಠಡಿಗಳ ಸಂಖ್ಯೆ.

2. ಮೂಲಸೌಕರ್ಯಗಳ ಮಾಹಿತಿ:

  • ಕುಡಿಯುವ ನೀರಿನ ಮೂಲ ಮತ್ತು ಲಭ್ಯತೆ.
  • ವಿದ್ಯುತ್ ಸಂಪರ್ಕ, ಶೌಚಾಲಯ ಮತ್ತು ಸ್ನಾನಗೃಹದ ಸೌಲಭ್ಯಗಳಿವೆಯೇ?
  • ಒಳಚರಂಡಿ ವ್ಯವಸ್ಥೆ ಮತ್ತು ಅಡುಗೆಗೆ ಬಳಸುವ ಇಂಧನ (LPG/PNG, ಸೌದೆ ಇತ್ಯಾದಿ).

3. ಬಳಕೆಯಲ್ಲಿರುವ ವಸ್ತುಗಳ ವಿವರ:

  • ಟಿವಿ, ರೇಡಿಯೋ, ಇಂಟರ್ನೆಟ್, ಕಂಪ್ಯೂಟರ್/ಲ್ಯಾಪ್‌ಟಾಪ್.
  • ದ್ವಿಚಕ್ರ ವಾಹನಗಳು (ಸೈಕಲ್, ಸ್ಕೂಟರ್) ಅಥವಾ ಕಾರು/ಜೀಪ್.
  • ಮುಖ್ಯವಾಗಿ ಸೇವಿಸುವ ಧಾನ್ಯ.
  • ಸಂಪರ್ಕಕ್ಕಾಗಿ ಮಾತ್ರ ಮೊಬೈಲ್ ಸಂಖ್ಯೆ (ಯಾವುದೇ ಒಟಿಪಿ ಕೇಳುವುದಿಲ್ಲ).

ಸುರಕ್ಷಿತವಾಗಿರಲು ನೀವು ಪಾಲಿಸಬೇಕಾದ ನಿಯಮಗಳು

  1. ಗುರುತಿನ ಚೀಟಿ ಪರಿಶೀಲಿಸಿ: ಮನೆಗೆ ಬರುವ ಪ್ರತಿಯೊಬ್ಬ ಜನಗಣತಿ ಅಧಿಕಾರಿಯು ಸರ್ಕಾರ ನೀಡಿದ ಅಧಿಕೃತ ಫೋಟೋ ಸಹಿತ ಗುರುತಿನ ಚೀಟಿಯನ್ನು ಹೊಂದಿರಲೇಬೇಕು. ಅನುಮಾನ ಬಂದರೆ ಅದನ್ನು ತೋರಿಸುವಂತೆ ಕೇಳಿ.
  2. ಸ್ವಯಂ-ಗಣತಿ (Self-Enumeration) ಆಯ್ಕೆ: ನೀವೇ ಖುದ್ದಾಗಿ ಆನ್‌ಲೈನ್ ಮೂಲಕ ಮಾಹಿತಿಯನ್ನು ಒದಗಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಸರ್ಕಾರದ ಅಧಿಕೃತ ವೆಬ್‌ಸೈಟ್ https://se.census.gov.in/ ಗೆ ಭೇಟಿ ನೀಡಿ, ನಿಮ್ಮ ವಿವರಗಳನ್ನು ನಮೂದಿಸಬಹುದು. ನಂತರ ಅಧಿಕಾರಿಗಳು ಮನೆಗೆ ಬಂದಾಗ, ಆನ್‌ಲೈನ್‌ನಲ್ಲಿ ಬಂದಿರುವ ರೆಫರೆನ್ಸ್ ಸಂಖ್ಯೆಯನ್ನು ತೋರಿಸಿ ದೃಢೀಕರಿಸಿದರೆ ಸಾಕು.
  3. ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್ ಮಾಡದಿರಿ: ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ವಾಟ್ಸಾಪ್‌ನಲ್ಲಿ ಬರುವ ಯಾವುದೇ ಜನಗಣತಿ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
  4. ತಕ್ಷಣ ದೂರು ನೀಡಿ: ಯಾರಾದರೂ ನಿಮ್ಮ ಬಳಿ ಬ್ಯಾಂಕ್ ವಿವರ ಕೇಳಿದರೆ, ಹಣಕ್ಕೆ ಬೇಡಿಕೆ ಇಟ್ಟರೆ ಅಥವಾ ಅನುಮಾನಾಸ್ಪದವಾಗಿ ವರ್ತಿಸಿದರೆ, ತಕ್ಷಣವೇ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ಅಥವಾ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ.

ಜನಗಣತಿಯು ದೇಶದ ಅಭಿವೃದ್ಧಿ ಯೋಜನೆಗಳಿಗೆ ಅತ್ಯಗತ್ಯವಾದ ಪ್ರಕ್ರಿಯೆಯಾಗಿದೆ. ಆದರೆ, ಜಾಗರೂಕತೆಯಿಂದ ಪಾಲ್ಗೊಳ್ಳುವುದು ಇಂದಿನ ಡಿಜಿಟಲ್ ಯುಗದಲ್ಲಿ ಅಷ್ಟೇ ಮುಖ್ಯವಾಗಿದೆ.

Leave a Reply

Your email address will not be published. Required fields are marked *