ಡಿಆರ್‌ಡಿಒ (DRDO) ಇಂಟರ್ನ್‌ಶಿಪ್ 2026: ಎಂಜಿನಿಯರಿಂಗ್, ವಿಜ್ಞಾನ ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO) ಕಾರ್ಯನಿರ್ವಹಿಸಲು ಹಾಗೂ ವೃತ್ತಿಜೀವನ ರೂಪಿಸಿಕೊಳ್ಳಲು ಕಾಯುತ್ತಿರುವ ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶವೊಂದು ಒದಗಿಬಂದಿದೆ. ಕಾನ್ಪುರದಲ್ಲಿರುವ DRDO ದ ಅಂಗಸಂಸ್ಥೆಯಾದ ‘ಡಿಫೆನ್ಸ್ ಮೆಟೀರಿಯಲ್ಸ್ ಅಂಡ್ ಸ್ಟೋರ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್’ (DMSRDE) 6 ತಿಂಗಳ ಅವಧಿಯ ಇಂಟರ್ನ್‌ಶಿಪ್ ಪ್ರೋಗ್ರಾಂಗೆ ಅರ್ಜಿ ಆಹ್ವಾನಿಸಿದೆ.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್ ಅವಧಿಯಲ್ಲಿ ಪ್ರತಿ ತಿಂಗಳು ಸ್ಟೈಫಂಡ್ (ಶಿಷ್ಯವೇತನ) ಕೂಡ ಒದಗಿಸಲಾಗುವುದು.

ಯಾವೆಲ್ಲಾ ವಿಭಾಗಗಳಲ್ಲಿ ಅವಕಾಶ? ಕೆಮಿಕಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಟೆಕ್ಸ್‌ಟೈಲ್ ಎಂಜಿನಿಯರಿಂಗ್, ಮೆಟೀರಿಯಲ್ ಸೈನ್ಸ್, ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ ಹಾಗೂ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಈ ಇಂಟರ್ನ್‌ಶಿಪ್ ಲಭ್ಯವಿದೆ.

ಅರ್ಹತಾ ಮಾನದಂಡಗಳು:

  • ಮಾನ್ಯತೆ ಪಡೆದ ವಿವಿಯಿಂದ ಬಿ.ಇ/ಬಿ.ಟೆಕ್ (B.E/B.Tech) ಅಥವಾ ಎಂ.ಎಸ್ಸಿ/ಎಂ.ಟೆಕ್ (M.Sc/M.Tech) ಕೋರ್ಸ್‌ಗಳ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವೃತ್ತಿಜೀವನದಲ್ಲಿ ಕನಿಷ್ಠ ಶೇಕಡಾ 65 ರಷ್ಟು ಅಂಕಗಳನ್ನು ಪಡೆದಿರಬೇಕು.
  • ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಅಗತ್ಯ ದಾಖಲೆಗಳು:

  • ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ಕಾಲೇಜಿನ ಲೆಟರ್‌ಹೆಡ್‌ನಲ್ಲಿ ಪ್ರಾಂಶುಪಾಲರು, ಡೀನ್ ಅಥವಾ ವಿಭಾಗೀಯ ಮುಖ್ಯಸ್ಥರಿಂದ (HOD) ಪಡೆದ ವಿನಂತಿ ಪತ್ರವನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.
  • ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯ ಜೊತೆಗೆ SSLC ಅಂಕಪಟ್ಟಿ, ಹಿಂದಿನ ಎಲ್ಲಾ ಸೆಮಿಸ್ಟರ್‌ಗಳ ಮಾರ್ಕ್ಸ್‌ಕಾರ್ಡ್‌ಗಳು, ಆಧಾರ್ ಕಾರ್ಡ್ ಪ್ರತಿ ಹಾಗೂ ಅಪ್‌ಡೇಟ್ ಮಾಡಿದ ಬಯೋಡೇಟಾವನ್ನು ಸೇರಿಸಿ ಕಳುಹಿಸಬೇಕು.
  • ಅರ್ಜಿ ಕಳುಹಿಸಬೇಕಾದ ವಿಳಾಸ: ನಿರ್ದೇಶಕರು, DMSRDE, DRDO, GT ರಸ್ತೆ, ಕಾನ್ಪುರ – 208013. ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳನ್ನು ಅವರ CGPA ಅಂಕಗಳು, ಆನ್‌ಲೈನ್ ಸಂದರ್ಶನ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಯಾವ ದಿನಾಂಕದಂದು ಹಾಜರಾಗಬೇಕು ಎಂಬ ಮಾಹಿತಿಯನ್ನು ಇಮೇಲ್ ಮೂಲಕ ರವಾನಿಸಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಅಧಿಕೃತ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ.

ಸೆಪ್ಟೆಂಬರ್ 28 ರೊಳಗೆ ಅರ್ಜಿಗಳು ತಲುಪುವಂತೆ ಕಳುಹಿಸಬೇಕು. ಅಪೂರ್ಣ ಹಾಗೂ ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

Leave a Reply

Your email address will not be published. Required fields are marked *