EPFO New Rules 2026:ಕಡ್ಡಾಯ ಪಿಎಫ್ ಕಡಿತ ₹1,800 ಮಾತ್ರ ಮತ್ತು ವಿತ್‌ಡ್ರಾ ನಿಯಮಗಳಲ್ಲಿ ಭಾರಿ ಬದಲಾವಣೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ದಶಕಗಳ ಹಿಂದಿನ 1952ರ ಕಾಯ್ದೆಗೆ ವಿದಾಯ ಹೇಳಿ, ಹೊಸ ‘ಇಪಿಎಫ್ ಯೋಜನೆ 2026’ (EPF Scheme 2026) ಅನ್ನು ಜಾರಿಗೆ ತಂದಿದೆ. ಸಾಮಾಜಿಕ ಭದ್ರತಾ ಸಂಹಿತೆ 2020ರ (Code on Social Security) ಅಡಿಯಲ್ಲಿ ರೂಪುಗೊಂಡಿರುವ ಈ ಹೊಸ ನಿಯಮಗಳು ದೇಶದ 8 ಕೋಟಿಗೂ ಹೆಚ್ಚು ಸಕ್ರಿಯ ಉದ್ಯೋಗಿಗಳಿಗೆ ನೇರವಾಗಿ ಅನ್ವಯವಾಗಲಿವೆ.

ಹೊಸ ನಿಯಮಗಳಡಿ ಪಿಎಫ್ ಕಡಿತ ಹಾಗೂ ಹಣ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಹೊಸ ನಿಯಮದ ಪ್ರಮುಖ ಅಂಶಗಳು

ಕಡ್ಡಾಯ ಪಿಎಫ್ ಕಡಿತ ₹1,800 ಕ್ಕೆ ಸೀಮಿತ

  • ಉದ್ಯೋಗಿ ಮತ್ತು ಉದ್ಯೋಗದಾತರ ಕಡ್ಡಾಯ ಪಿಎಫ್ ಕೊಡುಗೆಯನ್ನು ಹೊಸ ನಿಯಮದಲ್ಲಿ ಮಿತಿಗೊಳಿಸಲಾಗಿದೆ.
  • ಸರ್ಕಾರದ ನಿಯಮದಂತೆ ಗರಿಷ್ಠ ₹15,000 ಮೂಲ ವೇತನದ (Basic Salary) ಶೇ. 12ರಷ್ಟು, ಅಂದರೆ ಕೇವಲ ₹1,800 ಮಾತ್ರ ಕಡ್ಡಾಯವಾಗಿ ಕಡಿತವಾಗಲಿದೆ.
  • ನಿಮ್ಮ ಮೂಲ ವೇತನ ₹1 ಲಕ್ಷವಿದ್ದರೂ ಕಡ್ಡಾಯ ಕಡಿತ ₹1,800 ಮಾತ್ರ ಆಗಿರುತ್ತದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕಡಿತಗೊಳಿಸಲು ಉದ್ಯೋಗಿ ಇಚ್ಛಿಸಿದರೆ ಅದನ್ನು ‘ಸ್ವಯಂಪ್ರೇರಿತ ಕೊಡುಗೆ’ (Voluntary Contribution) ಎಂದು ಪರಿಗಣಿಸಲಾಗುತ್ತದೆ.
  • ಉದ್ಯೋಗಿಗಳು ತಮಗೆ ಬೇಡವೆಂದಾಗ ಈ ಸ್ವಯಂಪ್ರೇರಿತ ಕೊಡುಗೆಯನ್ನು ನಿಲ್ಲಿಸುವ ಅಥವಾ ಕಡಿಮೆ ಮಾಡುವ ಆಯ್ಕೆ ಹೊಂದಿದ್ದಾರೆ. ಇದರಿಂದ ಪ್ರತಿ ತಿಂಗಳು ಕೈಗೆ ಸಿಗುವ ಸಂಬಳ (In-hand Salary) ಹೆಚ್ಚಾಗಲಿದೆ.

ಶೇ. 25ರಷ್ಟು ಕನಿಷ್ಠ ಮೊತ್ತ ಕಾಯ್ದಿರಿಸುವುದು ಕಡ್ಡಾಯ

  • ಪಿಎಫ್ ಖಾತೆಯಿಂದ ಹಣ ಹಿಂಪಡೆಯುವಾಗ (Withdrawal), ಒಟ್ಟು ಮೊತ್ತದಲ್ಲಿ ಕನಿಷ್ಠ ಶೇ. 25ರಷ್ಟನ್ನು ಖಾತೆಯಲ್ಲಿಯೇ ಉಳಿಸುವುದು ಕಡ್ಡಾಯವಾಗಿದೆ.
  • ಉದಾಹರಣೆಗೆ, ನಿಮ್ಮ ಖಾತೆಯಲ್ಲಿ ₹1 ಲಕ್ಷವಿದ್ದರೆ ₹25,000 ಕಾಯ್ದಿರಿಸಿ, ಉಳಿದ ₹75,000 ಮೊತ್ತವನ್ನು ಮಾತ್ರ ‘ಅರ್ಹ ಬ್ಯಾಲೆನ್ಸ್’ (Eligible Balance) ಎಂದು ಪರಿಗಣಿಸಿ ವಿತ್‌ಡ್ರಾ ಮಾಡಲು ಅವಕಾಶ ನೀಡಲಾಗುತ್ತದೆ. ಭವಿಷ್ಯದ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವುದು ಇದರ ಹಿಂದಿನ ಉದ್ದೇಶ.

ಹಣ ಹಿಂಪಡೆಯುವ ಪ್ರಕ್ರಿಯೆ ಸರಳೀಕರಣ ಈ ಹಿಂದೆ ಇದ್ದ 13 ಮುಂಗಡ (Advance) ವಿಭಾಗಗಳನ್ನು ರದ್ದುಪಡಿಸಿ, ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೇವಲ 3 ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ:

  1. ಅತ್ಯಗತ್ಯ ಅಗತ್ಯಗಳು: ವೈದ್ಯಕೀಯ ಚಿಕಿತ್ಸೆ, ಮದುವೆ ಮತ್ತು ಶಿಕ್ಷಣ.
  2. ವಸತಿ ಅಗತ್ಯಗಳು: ಸೈಟ್/ಮನೆ ಖರೀದಿ, ನಿರ್ಮಾಣ, ನವೀಕರಣ ಮತ್ತು ಗೃಹ ಸಾಲ ಮರುಪಾವತಿ.
  3. ವಿಶೇಷ ಸಂದರ್ಭಗಳು: ಇಪಿಎಫ್ ಅನುಮೋದಿತ ತುರ್ತು ಪರಿಸ್ಥಿತಿಗಳು.

ವಿತ್‌ಡ್ರಾ ಮಾಡಲು ಇರುವ ಷರತ್ತುಗಳು ಹಾಗೂ ಮಿತಿಗಳು

  • ವೈದ್ಯಕೀಯ ಚಿಕಿತ್ಸೆ: ಉದ್ಯೋಗಿ ಅಥವಾ ಅವರ ಕುಟುಂಬದವರ ಚಿಕಿತ್ಸೆಗೆ ಅರ್ಹ ಬ್ಯಾಲೆನ್ಸ್‌ನ ಶೇ. 100ರಷ್ಟು ಹಣ ಪಡೆಯಬಹುದು (ಇದಕ್ಕೆ ಕನಿಷ್ಠ 12 ತಿಂಗಳ ಪಿಎಫ್ ಸದಸ್ಯತ್ವ ಕಡ್ಡಾಯ).
  • ಶಿಕ್ಷಣ: ಗರಿಷ್ಠ 10 ಬಾರಿ ಮುಂಗಡವಾಗಿ ಹಣ ಹಿಂಪಡೆಯಲು ಅವಕಾಶವಿದ್ದು, ಅರ್ಹ ಮೊತ್ತದ ನೂರಕ್ಕೆ ನೂರರಷ್ಟು ಹಣ ಪಡೆಯಬಹುದು. ಇದಕ್ಕೂ 12 ತಿಂಗಳ ಸದಸ್ಯತ್ವ ಅಗತ್ಯ.
  • ಮದುವೆ: ಅರ್ಹ ಮೊತ್ತದ ಸಂಪೂರ್ಣ ಹಣ ಪಡೆಯಬಹುದು. ಆದರೆ ಒಟ್ಟು 5 ಬಾರಿ ಮಾತ್ರ ಈ ಕಾರಣ ನೀಡಿ ಹಣ ಹಿಂಪಡೆಯಲು ಅವಕಾಶವಿದೆ.
  • ಉದ್ಯೋಗ ನಷ್ಟ: ಕೆಲಸ ಕಳೆದುಕೊಂಡರೆ ಹಣ ಪಡೆಯಲು 12 ತಿಂಗಳವರೆಗೆ ಕಾಯುವಂತಿಲ್ಲ. ಆದರೆ ಒಂದು ಆರ್ಥಿಕ ವರ್ಷದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಈ ಕಾರಣಕ್ಕಾಗಿ ಹಣ ಪಡೆಯುವಂತಿಲ್ಲ.

ಗುತ್ತಿಗೆ ನೌಕರರಿಗೆ ವಿಶೇಷ ರಕ್ಷಣೆ

ಹೊಸ ಯೋಜನೆಯಡಿ ಗುತ್ತಿಗೆ ಕಾರ್ಮಿಕರ (Contract Workers) ಪಿಎಫ್ ಕೊಡುಗೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಮುಖ್ಯ ಉದ್ಯೋಗದಾತರ (Principal Employer) ಮೇಲೆಯೇ ಹೊರಿಸಲಾಗಿದೆ. ಒಂದು ವೇಳೆ ಗುತ್ತಿಗೆದಾರ ಸಂಸ್ಥೆಯು ಸ್ವತಂತ್ರವಾಗಿ ನೋಂದಣಿಯಾಗದಿದ್ದರೆ, ಮುಖ್ಯ ಸಂಸ್ಥೆಯೇ ಪಿಎಫ್ ಪಾವತಿಗೆ ನೇರ ಹೊಣೆಯಾಗುತ್ತದೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *